

ಚಾಮರಾಜನಗರ: ಜಿಲ್ಲೆಯಲ್ಲಿ ವಿವಿಧ ಹಂತಗಳಲ್ಲಿ ಶಾಲೆ ತೊರೆದ ಹಾಗೂ ಎಸ್.ಎಸ್.ಎಲ್.ಸಿ ಯಲ್ಲಿ ಅನುತ್ತೀರ್ಣಗೊಂಡ ಬುಡಕಟ್ಟು ಸಮುದಾಯದ 44 ಮಕ್ಕಳ ಭವಿಷ್ಯ ರೂಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ತಿಳಿಸಿದರು.
ತಾಲೂಕಿನ ಹರದನಹಳ್ಳಿ ಗ್ರಾಮದ ಪರಿಶಿಷ್ಟ ವರ್ಗಗಳ ಮೆಟ್ರಿಕ್‌ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಹಾಗೂ ಮೈಸೂರಿನ ರೋಟರಿ ಪಂಚಶೀಲ ಸಂಸ್ಥೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪೂರ್ವಸಿದ್ದತಾ ತರಬೇತಿ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಕಾರ್ಯಕ್ರಮದ ಮುಖ್ಯ ಗುರಿಯಾಗಿದೆ. ಈಗಾಗಲೇ ಗುರುತಿಸಿ ನೊಂದಾಯಿಸಿರುವ 44 ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿನಿಲಯದಲ್ಲಿ ಪ್ರತ್ಯೇಕವಾಗಿ ವಸತಿ ವ್ಯವಸ್ಥೆ ಮಾಡಲಾಗಿದೆ. ರಾಜ್ಯ ಹಾಗೂ ಜಿಲ್ಲಾಮಟ್ಟದ ನುರಿತ 20 ಮಂದಿ ಸಂಪನ್ಮೂಲ ಶಿಕ್ಷಕರು 3 ತಿಂಗಳ ಕಾಲ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸುವ ಸಲುವಾಗಿ ತರಬೇತಿ ನೀಡಲು ಮುಂದೆ ಬಂದಿದ್ದಾರೆ. ಪ್ರಸ್ತುತ 44 ಮಂದಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪಠ್ಯದ ತೆಗೆ ಆಟೋಟದಲ್ಲಿ ಪಾಲ್ಗೊಳ್ಳಲು ದೈಹಿಕ ಶಿಕ್ಷಕರು ಹಾಗೂ ಸಂಗೀತ ಶಿಕ್ಷಕರನ್ನು ನಿಯೋಜಿಸಲಾಗಿದೆ. ಮಕ್ಕಳು ನಿರಂತರ ಅಭ್ಯಾಸ ಕೈಗೊಂಡು ಸಾಕಷ್ಟು ಪ್ರಯತ್ನ ಹಾಕಬೇಕು. ಪರೀಕ್ಷೆ ಬಗ್ಗೆ ಏನೇ ಗೊಂದಲಗಳಿದ್ದರೂ ಶಿಕ್ಷಕರೊಂದಿಗೆ ಮುಕ್ತವಾಗಿ ಮಾತನಾಡಿ, ಯಾವುದೇ ಮುಜುಗರ ಬೇಡ ಎಂದು ಸಲಹೆ ನೀಡಿದರು.
ಯಾವುದೋ ಕಾರಣದಿಂದ ಶಾಲೆ ತೊರೆದಿರಬಹುದು ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿರಬಹುದು. ಅವರಿಗೆ 2ನೇ ಅವಕಾಶ ನೀಡಿ ಶಿಕ್ಷಣಕ್ಕೆ ಪೂರಕ ವಾತಾವರಣ ಕಲ್ಪಿಸಿ ಪರೀಕ್ಷೆಗೆ ಕೂರಲು ಪ್ರೇರೇಪಿಸಬೇಕು. ಅವಕಾಶದಿಂದ ಯಾರೂ ವಂಚಿತರಾಗಬಾರದು. ಈ ಸದಾವಕಾಶನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಯಾವುದೇ ಸಹಾಯ, ಸಹಕಾರಕ್ಕೆ ಜಿಲ್ಲಾಡಳಿತ ನಿಮ್ಮೊಂದಿಗಿದೆ. ನಿಮ್ಮ ಮುಂದಿನ ಉತ್ತಮ ಜೀವನಕ್ಕಾಗಿ ಎಲ್ಲರೂ ಸೇರಿ ಒಂದು ತಂಡವಾಗಿ ಕೆಲಸ ಮಾಡುತ್ತಿದ್ದೇವೆ. ನಿಮ್ಮ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಮೈಸೂರಿನ ರೋಟರಿ ಪಂಚಶೀಲ ಸಂಸ್ಥೆಯ ಕಿರಣ್ ರಾಬರ್ಟ್, ಅಂತರಾಷ್ಟ್ರೀಯ ತರಬೇತುದಾರ ಬೆಂಜಮಿನ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಪ್ರಾಂಶುಪಾಲ ಕಾಶೀನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಣ್ಣೇಗೌಡ ಉಪಸ್ಥಿತರಿದ್ದರು.