ಬುಡಕಟ್ಟು ಜನರು ಶಿಕ್ಷಣದ ಮಹತ್ವ ತಿಳಿಯಿರಿ

14chn1
Published on

ಚಾಮರಾಜನಗರ: ವಿದ್ಯಾರ್ಥಿಗಳಲ್ಲಿ ಕೌಶಲ್ಯಯುತ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಇನ್ಫೋಸಿಸ್ ಹಾಗೂ ರೋಟರಿ ಸಂಸ್ಥೆಯ ಸೇವೆ ಅತ್ಯಂತ ಸಹಕಾರಿಯಾಗಿದೆ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿರುವ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಐಟಿಡಿಪಿ, ಶಾಲಾ ಶಿಕ್ಷಣ ಇಲಾಖೆ ಇನ್ಫೋಸಿಸ್ ಹಾಗೂ ರೋಟರಿ ಸಂಸ್ಥೆಗಳ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಸರ್ಕಾರಿ ಶಾಲೆಗಳಲ್ಲಿ ಡಿಜಿಟಲ್ ಶಿಕ್ಷಣದ ಬಲವರ್ಧನೆ ಹಾಗೂ ಕೌಶಲ್ಯಯುತ ಶಿಕ್ಷಣಕ್ಕಾಗಿ ಟ್ಯಾಬ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಬುಡಕಟ್ಟು ಜನರು ಶಿಕ್ಷಣದ ಮಹತ್ವ ಅರಿಯಬೇಕು. ಜಿಲ್ಲೆಯ ಗಿರಿಜನರ ವಿದ್ಯಾರ್ಥಿಗಳ ತಂದೆ ತಾಯಿ, ಪೋಷಕರಿಗೆ ಶಿಕ್ಷಣದ ಅರಿವನ್ನು ಮೂಡಿಸಿ ಅವರನ್ನು ಮುಖ್ಯವಾಹಿನಿಗೆ ತರಬೇಕು. ಮೊರಾರ್ಜಿ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಸೇರಿದಂತೆ ಇನ್ನಿತರೆ ವಸತಿ ಶಾಲೆಗಳನ್ನು ಸರ್ಕಾರ ಕಾಡಂಚಿನಲ್ಲಿ ನಿರ್ಮಿಸಿದೆ. ಸರ್ಕಾರದ ಈ ಉದ್ದೇಶ ಗಿರಿಜನರಿಗೆ ಫಲಪ್ರದವಾಗಬೇಕು ಎಂದರು.

ಜಿಲ್ಲೆಯಲ್ಲಿ ಹೆಚ್ಚು ಪೋಡುಗಳಿದ್ದು, ಕಾಡಂಚಿನಲ್ಲಿರುವ ಪ್ರದೇಶಗಳಿಗೆ ಅಗತ್ಯ ಮೂಲ ಸೌಕರ್ಯ ನೀಡಿ ಪೋಡುಗಳನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಬೇಕು. ಪೋಡುಗಳಲ್ಲಿ ಸ್ವಸಹಾಯ ಗುಂಪುಗಳನ್ನು ರಚಿಸಬೇಕು. ಬುಡಕಟ್ಟು ಜನಾಂಗಕ್ಕೆ ಶಿಕ್ಷಣ ವರದಾನವಾಗಲಿದೆ. ಪ್ರಸ್ತುತ ಇನ್ಫೋಸಿಸ್ ಹಾಗೂ ರೋಟರಿ ಸಂಸ್ಥೆಗಳು ಡಿಜಿಟಲ್ ಶಿಕ್ಷಣ ಕಲಿಕೆಗಾಗಿ ಟ್ಯಾಬ್ ವಿತರಿಸುತ್ತಿರುವುದು ಜಿಲ್ಲೆ ಶೈಕ್ಷಣಿಕ ಕ್ಷೇತ್ರದಲ್ಲಿ ದಿಟ್ಟ ಹೆಜ್ಜೆ ಇಡಲು ಪ್ರೇರಣೆಯಾಗಿದೆ ಎಂದು ತಿಳಿಸಿದರು.

ಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿ ಜಿಲ್ಲೆಯ ವಿದ್ಯಾರ್ಥಿಗಳ ಪಾಲಿಗೆ ಡಿಜಿಟಲ್ ಶಿಕ್ಷಣ ಕಲಿಕೆ ಆಶಾದಾಯಕವಾಗಿದೆ. ಉಚಿತ ಟ್ಯಾಬ್ ಪಡೆಯುತ್ತಿರುವ 50 ಸರ್ಕಾರಿ ಪ್ರೌಢಶಾಲೆಗಳ 100 ಶಿಕ್ಷಕರಿಗೆ ಇನ್ಫೋಸಿಸ್ ಸಂಸ್ಥೆ ತರಬೇತಿ ನೀಡುತ್ತಿರುವ ಉತ್ತಮ ಬೆಳವಣಿಗೆಯಾಗಿದೆ. ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆ ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಲು ಡಿಜಿಟಲ್ ಶಿಕ್ಷಣ ಕಲಿಕೆ ನೆರವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಶಾಸಕರಾದ ಎಚ್.ಎಂ. ಗಣೇಶ್‌ಪ್ರಸಾದ್, ಎಂ.ಆರ್. ಮಂಜುನಾಥ್ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್, ರೋಟರಿ ಪಂಚಶೀಲ ಇನ್ಟೆಕ್ ಸಂಸ್ಥೆಯ ಕಾರ್ಯನಿರ್ವಾಹಕ ಕಿರಣ್ ರಾಬರ್ಟ್, ಆನಂದ್, ಸಂತೋಷ್, ಸೋಮೇಶ್, ದಿನೇಶ್, ಸಂಧ್ಯಾ, ಸುಂದರ್, ವಿನಯ್, ಬಿಳಿಗಿರಿರಂಗ, ಇನ್ಫೋಸಿಸ್ ಸಂಸ್ಥೆಯ ರಂಗರಾಜನ್, ಸತೀಶ್, ಮೀನಾಕ್ಷಿ ಹಾಗೂ ಇತರರು ಉಪಸ್ಥತರಿದ್ದರು.

ಜಿಲ್ಲೆಯನ್ನು 5 ಶೈಕ್ಷಣಿಕ ವಲಯಗಳನ್ನಾಗಿ ವಿಂಗಡಿಸಿದ್ದು, 812 ಸರ್ಕಾರಿ ಶಾಲೆಗಳಿವೆ. ಕಳೆದ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ. 93ರಷ್ಟು ಫಲಿತಾಂಶ ಬಂದಿದೆ. ಈ ಬಾರಿ ಮುಂಚೂಣಿ ಸ್ಥಾನ ಪಡೆಯಲು ಅವಿರತ ಶ್ರಮ ಹಾಕಲಾಗುತ್ತಿದೆ. ಮೊದಲ ಹಂತದಲ್ಲಿ ಜಿಲ್ಲೆಯ 50 ಸರ್ಕಾರಿ ಪ್ರೌಢಶಾಲೆಗಳಿಗೆ ಡಿಜಿಟಲ್ ಶಿಕ್ಷಣದ ಕಲಿಕೆಗಾಗಿ ಉಚಿತ ಟ್ಯಾಬ್ ವಿತರಿಸಲಾಗುತ್ತಿದೆ. ಡಿಜಿಟಲ್ ಸ್ಪ್ರಿಂಗ್ ಬೋರ್ಡ್ ಕಲಿಕಾ ಪ್ರಯತ್ನದಲ್ಲಿ ವಿದ್ಯಾರ್ಥಿಗಳಿಗೆ ಸಾಫ್ಟ್‌ವೇರ್ ಹಾಗೂ ಹಾರ್ಡ್‌ವೇರ್ ಮೂಲಕ ಕೌಶಲ್ಯಯುಕ್ತ ಶಿಕ್ಷಣ ಕಲಿಸಲಾಗುತ್ತದೆ. ಜಿಲ್ಲೆಯಲ್ಲಿ ಅನಿವಾರ‌್ಯ ಕಾರಣಗಳಿಂದ ಶಾಲೆಬಿಟ್ಟ 43 ಮಂದಿ ಗಿರಿಜನ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಕಲಿಕಾ ತರಬೇತಿ ನೀಡಲು ರೋಟರಿ ಸಂಸ್ಥೆ ಮುಂದಡಿ ಇಟ್ಟಿದೆ. ನಗರದ ಹೃದಯಭಾಗದಲ್ಲಿ ಶಿಥಿಲಗೊಂಡಿರುವ ಪೇಟೆ ಪ್ರೈಮರಿ ಶಾಲೆಯನ್ನು ಪುನರುಜ್ಜೀವನಗೊಳಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡಲು ಇನ್ಫೋಸಿಸ್ ಸಂಸ್ಥೆ ಮುಂದೆ ಬಂದಿದೆ. ಜಿಲ್ಲಾ ಕಾರಾಗೃಹದಲ್ಲಿರುವ 18ರಿಂದ 35 ವರ್ಷದೊಳಗಿನ ಖೈದಿಗಳು ಜೈಲಿನಿಂದ ಬಿಡುಗಡೆ ಬಳಿಕ ಉತ್ತಮ ಜೀವನ ರೂಪಿಸಿಕೊಳ್ಳಲು ಕಂಪ್ಯೂಟರ್ ಶಿಕ್ಷಣ ನೀಡಲಾಗುತ್ತಿದೆ.
ಸಿ.ಟಿ.ಶಿಲ್ಪಾನಾಗ್, ಜಿಲ್ಲಾಧಿಕಾರಿ, ಚಾಮರಾಜನಗರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net