ಕಾಲಾನಂತರವೂ ಧ್ರುವನಾರಾಯಣ್ ಜನಾನುರಾಗಿ

12rajesh2
Published on

ಚಾಮರಾಜನಗರ: ಸರಳ, ಸಜ್ಜನಿಕೆ ಹಾಗೂ ಸ್ನೇಹ ಮನೋಭಾವನೆಯನ್ನು ಹೊಂದಿದ್ದ ಆರ್.ಧ್ರುವನಾರಾಯಣ್ ಅವರು ಕಾಲಾನಂತರವೂ ಜನಾನುರಾಗಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ತಾಲೂಕಿನ ಹೆಗ್ಗವಾಡಿ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಮಾಜಿ ಸಂಸದ ಆರ್.ಧ್ರುವನಾರಾಯಣ್ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಾಜಿ ಸಂಸದ ಧ್ರುವನಾರಾಯಣ್ ಬದುಕಿದ್ದಾಗಲೂ ಜನಪ್ರಿಯರಾಗಿದ್ದರು, ಕಾಲವಾದ ನಂತರವೂ ಜನಾನುರಾಗಿಯಾಗಿದ್ದಾರೆ. ಯಾವುದೇ ಜಾತಿ, ಧರ್ಮ, ಬೇಧವಿಲ್ಲದೆ ಪ್ರತಿಯೊಬ್ಬರನ್ನು ಸ್ನೇಹ ಭಾವನೆಯಿಂದ ಕಾಣುತ್ತಿದ್ದರು. ಎರಡು ಬಾರಿ ಶಾಸಕರಾಗಿ, ಸಂಸದರಾಗಿ ತಾವು ಪ್ರತಿನಿಧಿಸುವ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಿದರು. ಅಜಾತಶತ್ರು ಆಗಿದ್ದ ಧ್ರುವನಾರಾಯಣ್ ಅವರ ವ್ಯಕ್ತಿತ್ವವನ್ನೇ ಅವರ ಪುತ್ರ ಶಾಸಕ ದರ್ಶನ್ ಧ್ರುವನಾರಾಯಣ್ ಅವರೂ ಹೊಂದಿದ್ದು, ಜನಪರತೆ ಬೆಳೆಸಿಕೊಂಡಿದ್ದಾರೆ. ಇವರಿಗೆ ನಾನು ಸಂಪೂರ್ಣ ಸಹಕಾರ, ಬೆಂಬಲ ನೀಡುತ್ತೇನೆ ಎಂದರು.

ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನೇಕ ಜನಪರ ಕಾರ್ಯಕ್ರಮಗಳನ್ನು ತಂದು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಎಂದಿಗೂ ಕೂಡ ಜನರನ್ನು ಬಿಟ್ಟು ಇರುತ್ತಿರಲಿಲ್ಲ. ಅವರು ಕಾರ್ಯಾಧ್ಯಕ್ಷರಾಗಿ ಉತ್ತಮ ರೀತಿಯಲ್ಲಿ ಪಕ್ಷ ಸಂಘಟನೆ ಮಾಡಿದ್ದರು. ಕಾಂಗ್ರೆಸ್ ಪಕ್ಷದ ಆಸ್ತಿಯಾಗಿದ್ದ ಧ್ರುವನಾರಾಯಣ್ ಅವರನ್ನು ಕಳೆದುಕೊಂಡು ಚಾ.ನಗರ, ಮೈಸೂರು ಜಿಲ್ಲೆಯಲ್ಲದೇ ರಾಜ್ಯಕ್ಕೆ ತುಂಬಲಾರದ ನಷ್ಠ ಉಂಟಾಗಿದೆ. ನಾವು ಅವರಿಲ್ಲದೇ ತಬ್ಬಲಿಯಾಗಿದ್ದೇವೆ ಎಂದರು.

ಧ್ರುವ ಅವರು ಸಂಸತ್‌ನಲ್ಲಿ ಹೆಚ್ಚು ಪ್ರಶ್ನೆಯನ್ನು ಕೇಳುವ ಮೂಲಕ ದೇಶದಲ್ಲೇ ನಂ.1 ಸಂಸದರಾಗಿ ಹೊರಹೊಮ್ಮಿದ್ದರು. ಅವರ ರಾಜಕೀಯ ನಿಲುವು ಹಾಗೂ ಸೈದ್ಧಾಂತಿಕ ಬದ್ಧತೆಯಲ್ಲಿ ಸ್ಪಷ್ಟತೆ ಇತ್ತು.
ರಾಜಕಾರಣಿಗೆ ಸೈದ್ಧಾಂತಿಕ ಸ್ಪಷ್ಟತೆ ಮತ್ತು ಬದ್ಧತೆ ಅತ್ಯಗತ್ಯ. ಧ್ರುವನಾರಾಯಣ್ ಅವರಿಗೆ ಇವೆರಡೂ ಇತ್ತು. ಸಮಾಜದ ಅಸಮಾನತೆ ಅಳಿಸಲು, ದುರ್ಬಲರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬುವ ಕೆಲಸವನ್ನು ಅವರು ಮಾಡುತ್ತಿದ್ದರು. ಅಂಬೇಡ್ಕರ್ ಅವರ ಸಂವಿಧಾನದ ಬಗ್ಗೆ ಧ್ರುವನಾರಾಯಣ್ ಅಪಾರವಾದ ನಂಬಿಕೆ, ಗೌರವ ಹೊಂದಿದ್ದರು. ಈಗ ಸಂವಿಧಾನವನ್ನು ಬದಲಾಯಿಸುವ ಪ್ರಯತ್ನಗಳು ನಡೆಯುತ್ತಿವೆ. ಸಂವಿಧಾನ ಉಳಿದರೆ ಮಾತ್ರ ನಾವೂ ನೀವೂ ಉಳಿಯುತ್ತೇವೆ ಎಂದು ಎಚ್ಚರಿಸಿದರು.

ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ನಿಷ್ಕಳಂಕ ರಾಜಕಾರಣಿಯಾಗಿದ್ದ ಧ್ರುವನಾರಾಯಣ್ ಅವರು ಜನರೊಂದಿಗೆ ನಿರಂತರ ಸಂಪರ್ಕ ಹೊಂದಿದ್ದರು. ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರ ಜತೆಗೆ ಉತ್ತಮ ಸ್ನೇಹವನ್ನು ಇಟ್ಟುಕೊಂಡಿದ್ದರು. ಚಾಮರಾಜನಗರ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಸದಾಕಾಲವೂ ದುಡಿದಿದ್ದರು. ಅವರ ಶಾಂತಚಿತ್ತ ಮನೋಭಾವ, ಸರಳ ಜೀವನದ ಬದುಕು ಎಲ್ಲರಿಗೂ ಪ್ರೇರಣೆಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್,ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ್, ಎಂಎಸ್‌ಐಎಲ್ ನಿಗಮದ ಅಧ್ಯಕ್ಷ ಶಾಸಕ ಪುಟ್ಟರಂಗಶೆಟ್ಟಿ, ಎಸ್ಸಿ/ಎಸ್ಟಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಯಣ್ಣ, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಎಚ್.ಎಂ.ಗಣೇಶ್ ಪ್ರಸಾದ್, ಅನಿಲ್ ಚಿಕ್ಕಮಾದು, ಎಂ.ಆರ್.ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಡಾ.ತಿಮ್ಮಯ್ಯ, ಮರಿತಿಬ್ಬೇಗೌಡ, ಡಾ.ಯತೀಂದ್ರ ಸಿದ್ದರಾಮಯ್ಯ, ಮಾಜಿ ಸಚಿವ ಬಿ.ಸೋಮಶೇಖರ್, ಮಾಜಿ ಸಂಸದ ಸಿದ್ದರಾಜು, ಕಾಗಲವಾಡಿ ಶಿವಣ್ಣ, ಮಾಜಿ ಶಾಸಕ ನರೇಂದ್ರ, ಜಿ.ಎನ್.ನಂಜುಂಡಸ್ವಾಮಿ, ಎಂ.ಕೆ.ಸೋಮಶೇಖರ್, ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಪುಷ್ಪ ಅಮರನಾಥ್, ಮುಖಂಡರಾದ ಹಂಗಳ ನಂಜಪ್ಪ, ನಂಜುಂಡ ಪ್ರಸಾದ್, ಶ್ರೀಕಂಠ, ಬಿ.ಜೆ.ವಿಜಯ್ ಕುಮಾರ್, ಧೀರನ್ ಧ್ರುವನಾರಾಯಣ್ ಹಾಗೂ ಇತರರು ಉಪಸ್ಥಿತರಿದ್ದರು.

ಗಮನಸೆಳೆದ ಕಿರುಚಿತ್ರ ಪ್ರದರ್ಶನ:
ಮಾಜಿ ಸಂಸದ ಆರ್.ಧ್ರುವನಾರಾಯಣ್ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಅವರ ಹುಟ್ಟು, ಸಾಧನೆ, ರಾಜಕೀಯ ಕುರಿತು ಬಿತ್ತರಿಸಿದ ಕಿರುಚಿತ್ರ ಗಮನ ಸೆಳೆಯಿತು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸದನದಲ್ಲಿ ಧ್ರುವ ಅವರಿಗೆ ಸಂತಾಪ ಸೂಚಿಸುವ ಸಂದರ್ಭದಲ್ಲಿ ಮಾತನಾಡಿದ್ದ ವಿಡಿಯೋ ತುಣುಕು ಅಭಿಮಾನಿಗಳನ್ನು ಭಾವುಕರನ್ನಾಗಿಸಿತು.

ಧ್ರುವನಾರಾಯಣ್ ನಮ್ಮೊಂದಿಗೆ ಇಲ್ಲ ಎಂದು ಯಾರು ಕೂಡ ಭಯ ಪಡುವ ಅಗತ್ಯವಿಲ್ಲ. ಅವರು ಕಟ್ಟಿರುವ ಮನೆ ದಿನದ 24 ಗಂಟೆ ನಿರಂತರವಾಗಿ ತೆರೆದಿರುತ್ತದೆ. ನಮ್ಮ ಕೊನೆಯ ಉಸಿರು ಇರುವವರೆಗೂ ನಾನು ಮತ್ತು ನನ್ನ ಸಹೋದರ ಜನಸೇವೆ ಮಾಡುತ್ತೇವೆ.-ದರ್ಶನ್ ಧ್ರುವನಾರಾಯಣ್, ಶಾಸಕ, ನಂಜನಗೂಡು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net