ನಿತ್ಯ 6 ಸಾವಿರ ರೂ. ಖರ್ಚು ಮಾಡಿ ಗಿಡಗಳಿಗೆ ನೀರು

09rajesh1
Published on

ಚಾಮರಾಜನಗರ: ಬೇಸಿಗೆಯಿಂದಾಗಿ ನೀರಿಗೆ ಹಾಹಾಕಾರ ಉಂಟಾಗಿರುವ ಇಂತಹ ಪರಿಸ್ಥಿತಿಯಲ್ಲೂ ಪರಿಸರ ಪ್ರೇಮಿಯೊಬ್ಬರು ದಿನಕ್ಕೆ 6 ಸಾವಿರ ರೂ. ಖರ್ಚುಮಾಡಿ ನಗರ ಮತ್ತು ಪಟ್ಟಣದ ರಸ್ತೆ ಬದಿ ನೆಟ್ಟಿರುವ ಸಾವಿರಾರು ಗಿಡಗಳಿಗೆ ನೀರು ಒದಗಿಸುತ್ತಿದ್ದಾರೆ.

ಚಾಮರಾಜನಗರದ ಪರಿಸರ ಪ್ರೇಮಿ ಸಾಲುಮರದ ವೆಂಕಟೇಶ್ ಎಂದೇ ಚಿರಪರಿಚಿತರಾಗಿರುವ ಈಶ್ವರಿ ಸ್ಕೂಲ್ ಆಫ್ ಮ್ಯೂಸಿಕ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ಲೆಕ್ಕಪರಿಶೋಧಕರೂ ಆಗಿರುವ ಸಿ.ಎಂ.ವೆಂಕಟೇಶ್ ಅವರು ಚಾಮರಾಜನಗರವನ್ನು ಇಂತಹ ಉರಿ ಬೇಸಿಗೆಯಲ್ಲೂ ಹಸಿರುಮಯಗೊಳಿಸಿದ್ದಾರೆ.

ನಗರದ ಬಿ.ರಾಚಯ್ಯ ಜೋಡಿರಸ್ತೆ, ನ್ಯಾಯಾಲಯದ ರಸ್ತೆ, ಕುಲುಮೆರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣ, ಮಾದಾಪುರದ ಬಳಿ ಇರುವ ಕೇಂದ್ರಿಯ ವಿದ್ಯಾಲಯ, ಚಾ.ನಗರ ವಿಶ್ವ ವಿದ್ಯಾಲಯ ಅಲ್ಲದೇ ಕೊಳ್ಳೇಗಾಲ, ಯಳಂದೂರು, ಸಂತೇಮರಹಳ್ಳಿ, ಮಲೆ ಮಹದೇಶ್ವರ ಬೆಟ್ಟದಲ್ಲಿ ಸುಮಾರು 12 ಸಾವಿರ ಸಾಲುಗಿಡಗಳನ್ನು ಈ ವರೆಗೂ ನೆಟ್ಟಿದ್ದಾರೆ. ಹೊಂಗೆ, ಅರಳಿಗಿಡ, ಜೆಮ್ಮುನೇರಳೆ, ಮಹಾಗಣಿ ಹಾಗೂ ಇನ್ನಿತರೆ ನೂರಾರು ವಿಧದ ಗಿಡಗಳನ್ನು ನೆಡುವುದಲ್ಲವೇ ಕಾಲಕಾಲಕ್ಕೆ ಅವುಗಳಿಗೆ ನೀರು ಒದಗಿಸುತ್ತಾ, ಅದನ್ನು ಪ್ರಾಣಿಗಳು ಮತ್ತು ಕಿಡಿಗೇಡಿಗಳಿಂದಲೂ ರಕ್ಷಣೆ ಮಾಡಿಕೊಂಡು ಬರುತ್ತಿದ್ದಾರೆ.

ಪ್ರಸ್ತುತ ಬೇಸಿಗೆ ಹೆಚ್ಚಾಗುತ್ತಿದ್ದು, ಜಿಲ್ಲೆಯಲ್ಲಿ 37 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. ನಗರ ಮತ್ತು ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುತ್ತಿರುವ ಇಂತಹ ಸಂದರ್ಭದಲ್ಲಿ ಎಷ್ಟೇ ಕಷ್ಟವಾದರೂ ಸರಿಯೇ, ಎಷ್ಟೇ ಹಣ ಖರ್ಚಾದರೂ ಸರಿಯೇ ಗಿಡಗಳಿಗೆ ನೀರು ಒದಗಿಸಿ ಅವುಗಳನ್ನು ಪೋಷಣೆ ಮಾಡುವ ಕಾಯಕದಲ್ಲಿ ವೆಂಕಟೇಶ್ ನಿರತರಾಗಿದ್ದಾರೆ. ಯಾರ ಸಹಾಯಕ್ಕೂ ಕಾಯದೇ ನಿತ್ಯವೂ ಸುಮಾರು 6 ಸಾವಿರ ರೂ. ನಂತೆ ಸಾವಿರಾರು ಹಣವನ್ನು ಖರ್ಚು ಮಾಡುತ್ತಾ ಪ್ರಮಾಣಿಕವಾಗಿ ಗಿಡಗಳಿಗೆ ನೀರು ಪೂರೈಕೆ ಮಾಡುತ್ತಿದ್ದಾರೆ.

ದಿನಕ್ಕೆ 6 ಸಾವಿರ ರೂ. ವ್ಯಯ:
ನಗರದಲ್ಲಿ ಒಂದು ಟ್ಯಾಂಕ್ ನೀರಿಗೆ 1000 ರೂ. ನಿಗದಿ ಮಾಡಲಾಗಿದೆ. ಆದರೆ ನಗರದ ಹೊರವಲಯದಲ್ಲಿರುವ ವಿಶ್ವವಿದ್ಯಾಲಯ ಮತ್ತು ಇನ್ನಿತರೆ ಪ್ರದೇಶಗಳಲ್ಲಿ 1500 ರೂ. ಹಾಗೂ ಇನ್ನೂ ಹೆಚ್ಚಿನ ದರ ನೀಡಬೇಕಾಗುತ್ತದೆ. ಅದಲ್ಲದೇ 1200 ರೂ. ಲೇಬರ್ ಚಾರ್ಜ್, ಅವರಿಗೆ ಊಟದ ಖರ್ಚು ಸೇರಿದಂತೆ ಮೂರು ಟ್ಯಾಂಕ್ ನೀರಿಗೆ ದಿನಕ್ಕೆ 6000 ರೂ. ಗಿಂತಲೂ ಹೆಚ್ಚು ಖರ್ಚು ಬೀಳುತ್ತದೆ. ಕೊಳ್ಳೇಗಾಲ, ಸಂತೇಮರಹಳ್ಳಿ ಮತ್ತು ಯಳಂದೂರಿನಲ್ಲಿರುವ ಗಿಡಗಳಿಗೂ ನೀರು ಒದಗಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಸಾವಿರಾರು ರೂ. ಖರ್ಚು ಮಾಡುತ್ತಿದ್ದಾರೆ. ಇದರ ಸಂಪೂರ್ಣ ಹೊಣೆಯನ್ನು ವೆಂಕಟೇಶ್ ಅವರೇ ಹೊರುತ್ತಿದ್ದಾರೆ. ಅವರ ಈ ಕಾಯಕಕ್ಕೆ ಪತ್ನಿ ಜಯಲಕ್ಷ್ಮೀ ಬಹಳಷ್ಟು ಪ್ರೋತ್ಸಾಹ ನೀಡುತ್ತಿದ್ದಾರೆ. ವೆಂಕಟೇಶ್ ಅವರ ಈ ಮಾನವೀಯ ಕಾರ್ಯದಿಂದಾಗಿ ಬೇಸಿಗೆಯ ಉರಿಬಿಸಿಲಿನಲ್ಲೂ ಗಿಡಗಳು ನಳನಳಿಸುವಂತಾಗಿದೆ.

ಬೇಸಿಗೆಯಲ್ಲೂ ಹಸಿರುಮಯ:
ಪರಿಸರ ಪ್ರೇಮಿ ವೆಂಕಟೇಶ್ ಅವರು ಸುಮಾರು 8 ವರ್ಷಗಳಿಂದ ಮಾಡಿಕೊಂಡು ಬರುತ್ತಿರುವ ಪ್ರಾಕೃತಿಕ ಸೇವೆಯಿಂದಾಗಿ ಪ್ರಮುಖ ರಸ್ತೆಗಳು ಬೇಸಿಗೆಯಲ್ಲೂ ಹಸಿರುಮಯವಾಗಿದೆ. ನಗರದ ಬಿ.ರಾಚಯ್ಯ ಜೋಡಿರಸ್ತೆ, ನ್ಯಾಯಾಲಯ ರಸ್ತೆ, ಡಿವಿಯೇಷನ್ ರಸ್ತೆ, ಕುಲುಮೆ ರಸ್ತೆ, ರೈಲ್ವೆ ನಿಲ್ದಾಣದ ರಸ್ತೆ ಹಾಗೂ ಇನ್ನಿತರೆ ರಸ್ತೆಗಳಲ್ಲಿ ಈಗಾಗಲೇ ಮರಗಳು ದೊಡ್ಡದಾಗಿದ್ದು, ಹಸಿರಿನಿಂದ ಕೂಡಿದೆ. ಸಾಕಷ್ಟು ಜನರು ಬೀದಿಬದಿಯ ವ್ಯಾಪಾರಿಗಳಿಗೆ ಆಸರೆಯಾಗಿದ್ದು, ಸಾರ್ವಜನಿಕರಿಗೆ ನೆರಳು ನೀಡುತ್ತಿದೆ. ಸುಪ್ರಸಿದ್ಧ ಮಲೆಮಹದೇಶ್ವರ ಬೆಟ್ಟದಲ್ಲೂ ಗಿಡಗಳನ್ನು ನೆಟ್ಟು ಪೋಷಣೆ ಮಾಡುತ್ತಿದ್ದಾರೆ. ಈ ಮೂಲಕ ಜಿಲ್ಲೆಯನ್ನು ಸಂಪೂರ್ಣ ಹಸಿರುಮಯಮಾಡುವ ಗುರಿಯನ್ನು ಹೊಂದಿದ್ದಾರೆ.

ಬೇಸಿಗೆ ಸಮಯದಲ್ಲಿ ನೀರಿಗೆ ಹಾಹಾಕಾರವಿದೆ. ಮನುಷ್ಯ ನೀರು ಬೇಕು ಎಂದು ಕೇಳುತ್ತಾನೆ. ಆದರೆ ಗಿಡ-ಮರಗಳು ಕೇಳುತ್ತವೆಯೇ. ಈ ನಿಟ್ಟಿನಲ್ಲಿ ಡಿಗ-ಮರಗಳನ್ನು ಸಂರಕ್ಷಣೆ ಮಾಡುವುದೇ ಆದ್ಯ ಕರ್ತವ್ಯ ಎಂದು ಭಾವಿಸಿದ್ದೇನೆ. ಎಷ್ಟೇ ಖರ್ಚಾದರೂ ನಾವು ಚಿಂತಿಸುವುದಿಲ್ಲ ನಾವು ನೀರು ಹಾಕುತ್ತೇವೆ. ಗಿಡಗಳನ್ನು ಬೆಳೆಸುತ್ತೇವೆ. ಪ್ರಸ್ತುತ ಸಂದರ್ಭದಲ್ಲಿ ಸಾಕಷ್ಟು ಜನರು ತಮ್ಮ ಹುಟ್ಟುಹಬ್ಬ ಆಚರಣೆಯ ಸಂದರ್ಭದಲ್ಲಿ ನೆರವು ನೀಡುತ್ತಿದ್ದಾರೆ ಅಂತವರಿಗೆ ಅಭಿನಂದನೆ ಸಲ್ಲಿಸುತ್ತೇನೆ.-ಸಿ.ಎಂ.ವೆಂಕಟೇಶ್, ಪರಿಸರ ಪ್ರೇಮಿ, ಚಾಮರಾಜನಗರ ಜಿಲ್ಲೆಯನ್ನು ಸಂಪೂರ್ಣವಾಗಿ ಹಸಿರೀಕರಣ ಮಾಡುವ ನಿಟ್ಟಿನಲ್ಲಿ ನನ್ನ ಪತಿ ಅವರಿಗೆ ಸಂಪೂರ್ಣವಾದ ಬೆಂಬಲವನ್ನು ನೀಡುತ್ತಿದ್ದೇನೆ. ನಮ್ಮ ಕುಟುಂಬಕ್ಕೆ ಈ ಅವಕಾಶ ಸಿಕ್ಕಿರುವುದು ಬಹುದೊಡ್ಡ ಸೌಭಾಗ್ಯ ಎಂದುಕೊಂಡು ಈ ಕೆಲಸ ಮಾಡುತ್ತಿದ್ದೇವೆ.-ಜಿ.ಜಯಲಕ್ಷ್ಮೀ, ಪರಿಸರ ಪ್ರೇಮಿ ವೆಂಕಟೇಶ್ ಪತ್ನಿ, ಚಾಮರಾಜನಗರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net