

ಚಾಮರಾಜನಗರ: ಆಷಾಢ ಕಡೆ ಶುಕ್ರವಾರದ ಅಂಗವಾಗಿ ಶ್ರೀಚಾಮರಾಜೇಶ್ವರ ದೇವಸ್ಥಾನದಲ್ಲಿ ಮಹಿಳೆಯರ ದಂಡೆ ನೆರೆದಿತ್ತು, ಸಾವಿರಾರು ಭಕ್ತರು ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು.
ನಗರದ ಹೃದಯ ಭಾಗದಲ್ಲಿರುವ ಶ್ರೀ ಚಾಮರಾಜೇಶ್ವರ ದೇವಸ್ಥಾನದಲ್ಲಿ ಮುಂಜಾನೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ನೆರೆದ ಮಹಿಳೆಯರು ನಿಂಬೆ ಹಣ್ಣಿನ ದೀಪ ಹಚ್ಚಿ, ಹಣ್ಣು-ಕಾಯಿ ಸಹಿತ ಶ್ರೀಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪ್ರಾರ್ಥನೆ ಸಲ್ಲಿಸಿದರು. ಕಡೆಯ ಆಷಾಢವಾದ ಕಾರಣಕ್ಕೆ ನಗರ ಪ್ರದೇಶವಲ್ಲದೇ ಗ್ರಾಮೀಣ ಭಾಗದಿಂದಲೂ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು. ಇದರಿಂದಾಗಿ ಶ್ರೀಚಾಮುಂಡೇಶ್ವರಿ ದರ್ಶನ ಪಡೆಯಲು ಕೆಲಕಾಲ ನೂಕುನುಗ್ಗಲು ಉಂಟಾಯಿತು. ಮಧ್ಯಾಹ್ನದ ವರೆಗೂ ದರ್ಶನದ ಸಾಲು ಕಡಿಮೆಯಾಗಲೇ ಇಲ್ಲ. ದೇವಸ್ಥಾನದಲ್ಲಿ ಎಲ್ಲಿ ನೋಡಿದರೂ ಅಲ್ಲಿ, ವಿವಾಹಿತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರು.
ಈ ವೇಳೆ ದೇವಸ್ಥಾನದ ಅರ್ಚಕ ನಾಗರಾಜ್ ದೀಕ್ಷಿತ್ ಮಾತನಾಡಿ, ಆಷಾಢ ಕಡೆ ಶುಕ್ರವಾರದ ಅಂಗವಾಗಿ ಶ್ರೀಚಾಮುಂಡೇಶ್ವರಿ ತಾಯಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ಮಹಿಳೆಯರು ಆಷಾಢ ಮಾಸದಲ್ಲಿ ವಿಶೇಷವಾಗಿ ಪೂಜೆಸಲ್ಲಿಸುತ್ತಾರೆ. ವಿವಾಹಿತ ಮಹಿಳೆಯರು ತಮ್ಮಗಂಡನಿಗೆ ಆರೋಗ್ಯ, ಆಯಸ್ಸು ದೊರೆಯುವಂತೆ ಪ್ರಾರ್ಥನೆ ಸಲ್ಲಿಸಿದರೆ. ಒಳ್ಳೆಯ ಗಂಡ ಸಿಗುವಂತೆ ಅವಿವಾಹಿತ ಮಹಿಳೆಯರು ವಿಶೇಷವಾಗಿ ಪೂಜೆ ಸಲ್ಲಿಸುತ್ತಾರೆ. ಹಿಂದಿನ ವಾರದಂತೆಯೇ, ಈ ವಾರವೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂದರು.
ಅನ್ನ ಸಂತರ್ಪಣೆ: ಆಷಾಢ ಮಾಸದ ಕಡೆಯ ಶುಕ್ರವಾರ ಶ್ರೀಚಾಮರಾಜೇಶ್ವರ ದೇವಸ್ಥಾನದಲ್ಲಿ ಅನ್ನ ಸಂತರ್ಪಣೆ ನಡೆಯಿತು. ತಮಿಳುನಾಡಿನ ತಾಳವಾಡಿ ತಾಲೂಕಿನ ಸೊತ್ತನಪುರ ಗ್ರಾಮದ ಯೂನಿಯನ್ ಕೌನ್ಸಿಲರ್ ಚಾಮಪ್ಪ ಮತ್ತು ಮಂಗಳಮ್ಮ ದಂಪತಿಗಳು ಪ್ರತಿ ವರ್ಷವೂ ಆಷಾಢ ಶುಕ್ರವಾರದಂದು ಅನ್ನ ಸಂತರ್ಪಣೆ ನೆರವೇರಿಸುತ್ತಾ ಬಂದಿದ್ದು, ಈ ವರ್ಷವೂ ನೆರೆದಿದ್ದ ಭಕ್ತಾಧಿಗಳಿಗೆ ದೇವಸ್ಥಾನದ ಮುಂಭಾಗದಲ್ಲಿ ಅನ್ನ ಸಂತರ್ಪಣೆ ನೆರವೇರಿಸಿ ಭಕ್ತಿ ಸಮರ್ಪಿಸಿದರು.