

ಮಹದೇಶ್ವರ ಬೆಟ್ಟ: ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಮಲೆಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತರೇ ಎಚ್ಚರ! ಶ್ರೀಕ್ಷೇತ್ರದಲ್ಲಿ ಕಾಡುಹಂದಿಗಳ ಕಾಟ ಮಿತಿ ಮೀರಿದೆ. ಈಗಾಗಲೇ ಸ್ಥಳೀಯರು ಮಾತ್ರವಲ್ಲದೆ, ಭಕ್ತರ ಮೇಲೂ ದಾಳಿ ಮಾಡಿವೆ. ಈ ಹಂದಿಗಳ ಬಾಯಿಯಲ್ಲಿ ಕೋರೆ ಹಲ್ಲುಗಳು ಇರುವುದರಿಂದ ದಾಳಿ ಮಾಡಿದಾಗ ಗಂಭೀರ ಗಾಯಗಳಾಗುತ್ತಿವೆ.
ನಾಲ್ಕೆದು ದಿನಗಳ ಅಂತರದಲ್ಲಿ ಸ್ಥಳೀಯರಿಬ್ಬರ ಮೇಲೆ ಕಾಡುಹಂದಿಗಳು ದಾಳಿ ಮಾಡಿದ್ದವು. ಕೆಲ ದಿನಗಳ ಹಿಂದೆ ಬೃಹತ್ ತಂಗುದಾಣದಲ್ಲಿ ಮಲಗಿದ್ದ ಭಕ್ತರ ಮೇಲೆ ಕಾಡುಹಂದಿಗಳ ಹಿಂಡು ದಾಳಿ ಮಾಡಿದ್ದವು. ಕಾಲ್ನಡಿಗೆಯಲ್ಲಿ ಬರುವ ಭಕ್ತರು ಸಾಮಾನ್ಯವಾಗಿ ದೇವಸ್ಥಾನದ ಪಕ್ಕದ ರಂಗಮಂದಿರ, ತಂಗುದಾಣಗಳಲ್ಲಿ ಮಲಗುತ್ತಾರೆ. ಬಡ ಭಕ್ತರು ಕೊಠಡಿಗಳನ್ನು ಬಾಡಿಗೆ ಪಡೆಯದೆ, ದೇವಸ್ಥಾನದ ಸುತ್ತಮುತ್ತಲಿನ ಕಡೆಗಳಲ್ಲಿ ವಾಸ್ತವ್ಯ ಹೂಡುತ್ತಾರೆ.
ಇಲ್ಲೆಲ್ಲ ಅಡ್ಡಾಡುವ ಕಾಡುಹಂದಿಗಳ ಗುಂಪು, ಭಕ್ತರು ಇಟ್ಟಿರುವ ಬ್ಯಾಗ್‌ಗಳ ಕಡೆಗೆ ಬರುತ್ತವೆ. ಓಡಿಸಲು ಮುಂದಾದ ಭಕ್ತರ ಮೇಲೆ ದಾಳಿ ಮಾಡುತ್ತವೆ. ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಲೇ ಇವೆ. ಇದರಿಂದ ದೇವರ ದರ್ಶನಕ್ಕಾಗಿ ಬಂದವರು ಕಾಡುಹಂದಿಗಳ ದಾಳಿಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾದ ಪರಿಸ್ಥಿತಿ ಎದುರಾಗಿದೆ.
ಮಿತಿ ಮೀರಿದ ಹಾವಳಿ: ಮಲೆಮಹದೇಶ್ವರ ಬೆಟ್ಟದಲ್ಲಿ ಕಾಡುಹಂದಿಗಳ ಉಪಟಳ ಮಿತಿ ಮೀರಿದೆ. ಕಾಡಿನಲ್ಲಿರಬೇಕಾದ ಹಂದಿಗಳಿಗೆ ಬೆಟ್ಟದ ಬಡಾವಣೆಗಳೇ ವಾಸಸ್ಥಳವಾಗಿದೆ. ಅಂದರೆ ಈ ಬಡಾವಣೆಗಳು ಎಷ್ಟರ ಮಟ್ಟಿಗೆ ಗಬ್ಬೆದ್ದು ನಾರುತ್ತಿವೆ ಎನ್ನುವುದು ಅರ್ಥವಾಗುತ್ತದೆ. ಇಲ್ಲಿ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡುತ್ತಿಲ್ಲ. ರಸ್ತೆ ಬದಿಗಳಲ್ಲಿ ಕಸದ ರಾಶಿ ರಾಡಿಯಾಗಿ ಹರಡಿದೆ. ಚರಂಡಿಗಳಲ್ಲಿ ಗಲೀಜು ತುಂಬಿಕೊಂಡಿದೆ. ಕೆಲವು ಕಡೆಗಳಲ್ಲಂತೂ ಚರಂಡಿ ನೀರು ನಿಂತು ಕೆಸರು ಗದ್ದೆಯಂತಾಗಿದೆ. ಈ ಕೊಳಚೆ ಸ್ಥಳಗಳಲ್ಲಿ ಕಾಡುಹಂದಿಗಳು ವಾಸಿಸುತ್ತಿವೆ. ದೇವಸ್ಥಾನದ ಸುತ್ತಮುತ್ತವೂ ವಿಲೇವಾರಿಯಾಗದ ಕಸದಲ್ಲಿ ಆಹಾರ ಹುಡುಕುತ್ತ ಅಲೆಯುತ್ತಿವೆ.