ಪ್ರಾಮಾಣಿಕರ ಆಯ್ಕೆಯಿಂದ ಅರ್ಥವಾಗಲಿರುವ ಮೀಸಲಾತಿ ಪ್ರಾತಿನಿಧ್ಯ

04raju3
Published on

ಚಾಮರಾಜನಗರ: ಚುನಾವಣೆಯಲ್ಲಿ ಹಣ ಪಡೆದು ಮತ ಹಾಕುವುದನ್ನು ಬಿಡುವವರೆಗೂ ಮೀಸಲಾತಿ ಪ್ರಾತಿನಿಧ್ಯ ಏನೆಂದು ಅರ್ಥವಾಗುವುದಿಲ್ಲ ಎಂದು ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಹೇಳಿದರು.


ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಬಹುಜನ ವಾಲೆಂಟಿಯರ್ ಫೋರ್ಸ್ ಜಿಲ್ಲಾ ಘಟಕದ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ 66ನೇ ಪರಿನಿಬ್ಬಾಣ ದಿನಾಚರಣೆಯ ಅಂಗವಾಗಿ ಭಾನುವಾರ ಆಯೋಜಿಸಿದ್ದ ‘ಮೀಸಲಾತಿ ಪ್ರಾತಿನಿಧ್ಯವೋ- ಆರ್ಥಿಕ ಸಬಲೀಕರಣವೋ’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ಈ ವಿಚಾರ ಸಂಕಿರಣ ಮೀಸಲಾತಿಯ ಆಗು-ಹೋಗುಗಳನ್ನು ಅರಿತುಕೊಳ್ಳಲು ಸಹಕಾರಿಯಾಗಿದೆ. ಚುನಾವಣೆಗಳಲ್ಲಿ ಹಣಕ್ಕಾಗಿ ಮತ ಮಾರಾಟ ಮಾಡುವುದನ್ನು ಬಿಡುವ ತನಕ ಸಮಾನತೆ ಕಾಣಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಎಸ್ಸಿ/ಎಸ್ಟಿ ಸಮುದಾಯದ ಹಿತ ಕಾಯುವ ಪ್ರಾಮಾಣಿಕ ನಾಯಕರನ್ನು ಚುನಾವಣೆಗಳಲ್ಲಿ ಆಯ್ಕೆ ಮಾಡಬೇಕಾಗಿದೆ ಎಂದು ಸಲಹೆ ನೀಡಿದರು.


ಚಿತ್ರನಟ ಚೇತನ್ ಅಹಿಂಸಾ ಮಾತನಾಡಿ, ಖಾಸಗಿ ವಲಯದಲ್ಲಿ ಮೀಸಲಾತಿ ಬಹಳ ಅವಶ್ಯಕವಾಗಿದೆ. ಪರಿವರ್ತನೆಯೇ ನಮ್ಮ ಗುರಿಯಾಗಬೇಕು. ಸರ್ವರಿಗೂ ಸಮಾನ ಅವಕಾಶಗಳನ್ನು ನೀಡಬೇಕು. ಅನ್ಯಾಯವನ್ನು ತಿದ್ದುವುದೇ ಮೀಸಲಾತಿಯ ಮಾರ್ಗ ಎಂದು ಅಭಿಪ್ರಾಯಪಟ್ಟರು.

ಬುದ್ಧ, ಬಸವ, ಜ್ಯೋತಿಬಾ ಫುಲೆ, ಪೆರಿಯಾರ್, ಅಂಬೇಡ್ಕರ್ ಅವರಿಂದಲೇ ಈ ಮೀಸಲಾತಿಯ ಪರಿಕಲ್ಪನೆ ಪ್ರಾರಂಭವಾಯಿತು, ಮೈಸೂರು ಸಂಸ್ಥಾನದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮಿಲ್ಲರ್ ಕಮಿಷನ್ ಮೂಲಕ ಶೇ.75ರಷ್ಟು ಮೀಸಲಾತಿ ಕಲ್ಪಿದ್ದರು. ಶಿಕ್ಷಣ, ಉದ್ಯೋಗದಲ್ಲಿ ತಳಸಮುದಾಯಗಳಿಗೆ ಸಂಪೂರ್ಣ ಪ್ರಾತಿನಿಧ್ಯ ಸಿಗುವವರೆಗೂ ಮೀಸಲಾತಿಯನ್ನು ಬದಲಾಯಿಸಲು ಸಾಧ್ಯವಿಲ್ಲ. ಇತ್ತೀಚೆಗಿನ ಎಸ್ಸಿ ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಹೇಳಿದರು. ಸಾಮಾಜಿಕ ನ್ಯಾಯವನ್ನು ಒಪ್ಪುವಂಥವರು ಒಳಮೀಸಲಾತಿಯನ್ನು ಒಪ್ಪಬೇಕು, ಖಾಸಗಿ ವಲಯದಲ್ಲಿ ಮೀಸಲಾತಿ ಬಹಳಷ್ಟು ಮುಖ್ಯವಿದೆ. ಭೌಗೋಳಿಕವಾಗಿ ಸರೋಜಿನಿ ಮಹಿಷಿ ವರದಿ ಆಧಾರವಾಗಿ ಕನ್ನಡಿಗರಿಗೆ ಆದ್ಯತೆ ನೀಡಬೇಕು ಎಂದರು.


ಕರ್ನಾಟಕ ಬೌದ್ಧ ಸಮಾಜ ಅಧ್ಯಕ್ಷ ಹ.ರಾ.ಮಹೇಶ್ ಮಾತನಾಡಿ, ಮೀಸಲಾತಿ ಸಂವಿಧಾನ ಬದ್ಧವಾಗಿ ನಮಗೆ ನೀಡಿರುವ ಹಕ್ಕು. ಯಾವುದೇ ಹೋರಾಟ, ಉಪವಾಸ ಮಾಡದೆ ಇರುವ ಮೇಲ್ವರ್ಗದವರಿಗೆ ಶೇ.10 ರಷ್ಟು ಮೀಸಲಾತಿ ನೀಡಲಾಗಿದೆ. ಮೀಸಲಾತಿಗಾಗಿ ಬೀದಿಗಿಳಿದು ಹೋರಾಟ ಮಾಡುವ ಶೋಷಿತ ಸಮುದಾಯಗಳಿಗೆ ಮೀಸಲಾತಿ ನೀಡುವಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸುತ್ತದೆ ಎಂದು ಆರೋಪಿಸಿದರು. ತಿ.ನರಸೀಪುರದ ನಳಂದ ಬುದ್ದ ವಿಹಾರ ಬೋಧಿರತ್ನ ಬಂತೇಜಿ ಸಾನಿಧ್ಯ ವಹಿಸಿದ್ದರು, ಬಿಎಸ್ಪಿ ರಾಜ್ಯಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ, ರಾಜ್ಯ ಕಾರ್ಯದರ್ಶಿ ಕಮಲ್, ಜಿಲ್ಲಾಧ್ಯಕ್ಷ ಎನ್.ನಾಗಯ್ಯ, ನಗರಸಭೆ ಸದಸ್ಯರಾದ ಅಬ್ರಾರ್ ಅಹ್ಮದ್, ಮಹೇಶ್, ಬಿವಿಎಪ್ ಜಿಲ್ಲಾ ಸಂಯೋಜಕರಾದ ಎಂ.ರವಿಮೌರ್ಯ, ಆಶ್ರಿತ್, ತಾಲೂಕು ಸಂಯೋಜಕರಾದ ಮಹೇಶ್, ಯೋಗೇಶ್, ನಾಗಮಲ್ಲು, ಸುನೀಲ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net