

ಚಾಮರಾಜನಗರ : ಜಾನಪದ ಕಲೆಗಳ ತವರೂರಾದ ಚಾಮರಾಜನಗರ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಕಾಯಂ ಅಧಿಕಾರಿಗಳೇ ಇಲ್ಲ..!
ಜಿಲ್ಲೆಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಹೊಣೆಯನ್ನು ಬೇರೆ ಇಲಾಖೆಯ ಅಧಿಕಾರಿ ಹೆಗಲಿಗೆ ನೀಡಲಾಗಿದೆ. ಇಷ್ಟು ವರ್ಷಗಳಲ್ಲಿ ಒಂದಿಬ್ಬರು ಮಾತ್ರ ಕಾಯಂ ಅಧಿಕಾರಿಗಳು ಕೆಲಸ ಮಾಡಿದ್ದಾರೆ. ಉಳಿದಂತೆ ಎಲ್ಲರೂ ಪ್ರಭಾರ ಜವಾಬ್ದಾರಿಯನ್ನು ನಿರ್ವಹಣೆ ಮಾಡಿದ್ದಾರೆ. ಪ್ರಸ್ತುತ ಶಿಕ್ಷಣ ಇಲಾಖೆಯ ಅಕ್ಷರ ದಾಸೋಹ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಗುರುಲಿಂಗಯ್ಯ ಅವರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪ್ರಭಾರವಾಗಿ ನಿಯೋಜಿಸಲಾಗಿದೆ.
ಕಲೆಗಳ ತವರೂರು ಎನಿಸಿಕೊಂಡಿರುವ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಲಾವಿದರು ಇದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಲೇ ಇವೆ. ಈ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪೂರ್ಣಾವಧಿ ಅಧಿಕಾರಿಯ ಅಗತ್ಯವಿದೆ. ಈ ಕುರಿತು ‘ಲೌಡ್‌ಸ್ಪೀಕರ್’ನಲ್ಲಿ ಕಲಾವಿದರು, ರಂಗಕರ್ಮಿಗಳು, ಹೋರಾಟಗಾರರ ಅಭಿಪ್ರಾಯ ಸಂಗ್ರಹಿಸಲಾಗಿದೆ.
ನಿರ್ವಹಣೆ ಕುಂಠಿತ
ಜಿಲ್ಲೆಯಾಗಿ 25 ವರ್ಷಗಳು ತುಂಬಿದ್ದು, ಬೆರಳೆಣಿಕೆ ಅಧಿಕಾರಿಗಳು ಮಾತ್ರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾಯಂ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಇಲಾಖೆಗೆ ಪೂರ್ಣಾವಧಿ ಅಧಿಕಾರಿಗಳಿಲ್ಲದೇ, ಇಲಾಖೆಯ ನಿರ್ವಹಣೆ ಸರಿಯಾಗಿ ನಡೆದಿಲ್ಲ. ಕಾಯಂ ಅಧಿಕಾರಿಯಾಗಿ ಬಂದವರು ಇಲ್ಲಿ ನೆಲೆ ನಿಲ್ಲುವುದಿಲ್ಲ. ಪ್ರಭಾರ ಅಧಿಕಾರಿಗಳು ಬೇರೊಂದು ಇಲಾಖೆಯ ಜವಾಬ್ದಾರಿ ಜತೆಗೆ ಕನ್ನಡ-ಸಂಸ್ಕೃತಿ ಇಲಾಖೆಯನ್ನು ನಿರ್ವಹಣೆ ಮಾಡುವುದು ಕಷ್ಟವಾಗುತ್ತಿದೆ. ಈ ನಿಟ್ಟಿನಲ್ಲಿ ಇಲಾಖೆಗೆ ಪೂರ್ಣಾವಧಿ ಅಧಿಕಾರಿಯನ್ನು ನೇಮಕ ಮಾಡಬೇಕು.
ಬಿಸಲವಾಡಿ ಸೋಮಶೇಖರ್
ರಂಗಕರ್ಮಿ, ಚಾಮರಾಜನಗರ
ಜನಪ್ರತಿನಿಧಿಗಳು ಕ್ರಮವಹಿಸಲಿ
ಜಿಲ್ಲಾ ಕೇಂದ್ರದಲ್ಲಿ ಬಹಳ ಆಕರ್ಷಕವಾಗಿ ರಂಗಮಂದಿರ ನಿರ್ಮಾಣ ಮಾಡಿದ್ದಾರೆ. ಇತ್ತೀಚೆಗೆ ಹೆಚ್ಚಿನ ರಂಗ ಚಟುವಟಿಕೆಗಳು ನಡೆಯುತ್ತಿವೆ. ಆದರೆ ರಂಗಮಂದಿರದಲ್ಲಿ ಸೂಕ್ತ ರೀತಿಯ ಲೈಟ್ ವ್ಯವಸ್ಥೆ, ಶೌಚಗೃಹ ವ್ಯವಸ್ಥೆ ಹಾಗೂ ಸುತ್ತಮುತ್ತ ಸ್ವಚ್ಛತೆ ಕಾಣದಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಕಾಯಂ ಅಧಿಕಾರಿಗಳು ನಿರ್ವಹಣೆ ಮಾಡುವರಿಲ್ಲದಾಗಿದೆ. ಇಲಾಖೆಗೆ ಪೂರ್ಣಾವಧಿ ಅಧಿಕಾರಿಗಳು ಬಂದರೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ವೇಗ ದೊರೆತಂತಾಗುತ್ತದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಮೇಲಾಧಿಕಾರಿಗಳು ಕ್ರಮವಹಿಸಬೇಕು.
ಸಿ.ಎಂ.ನರಸಿಂಹಮೂರ್ತಿ ಅಧ್ಯಕ್ಷ, ರಂಗವಾಹಿನಿ ಸಂಸ್ಥೆ, ಚಾಮರಾಜನಗರ
ರಂಗ ಚಟುವಟಿಕೆಗಳಿಗೆ ತೊಡಕು
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಹುದ್ದೆಗೆ ಯಾವಾಗಲೂ ಪ್ರಭಾರ ಅಧಿಕಾರಿಗಳೇ ಇದ್ದಾರೆ. ಇತ್ತೀಚಿನ ದಿನಗಳಲ್ಲಿ ಇಲಾಖೆಯ ಜವಾಬ್ದಾರಿ ಹೆಚ್ಚಾಗಿದ್ದು, ಪ್ರಭಾರ ಅಧಿಕಾರಿಗಳಿಗೆ ಕೆಲಸ ಮಾಡಲು ಕಷ್ಟವಾಗುತ್ತಿದೆ. ಅವರು ತಮ್ಮ ಸ್ವಂತದ ಇಲಾಖೆಯ ಕೆಲಸವನ್ನು ಮಾಡುವುದರ ಜತೆಗೆ ಇದನ್ನು ಮಾಡಬೇಕು ಅಂದರೆ ಕಷ್ಟವಾಗುತ್ತದೆ. ರಂಗಮಂದಿರ ಆದಮೇಲೆ ರಂಗಚಟುವಟಿಕೆಗಳು ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಪೂರ್ಣಾವಧಿ ಅಧಿಕಾರಿಯನ್ನು ಸರ್ಕಾರ ಆದಷ್ಟು ಬೇಗ ನೇಮಕ ಮಾಡಬೇಕಿದೆ.
ಕೆ.ವೆಂಕಟರಾಜು ಹಿರಿಯ ರಂಗಕರ್ಮಿ, ಚಾಮರಾಜನಗರ
ಸಂಘಟನೆಯ ಕೊರತೆ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನೇಮಕವಾಗುವ ಸಹಾಯಕ ನಿರ್ದೇಶಕರು ಪೂರ್ಣ ಪ್ರಮಾಣದಲ್ಲಿ ಇದೊಂದೇ ಇಲಾಖೆ ಬೆಳವಣಿಗೆ ಕಡೆ ಗಮನ ಹರಿಸಬೇಕು. 2023ರ ದಸರಾದಲ್ಲಿ ಭಾಗವಹಿಸಿದ ಕವಿಗಳು ಮತ್ತು ರಂಗತಂಡಗಳಿಗೆ ಗೌರವ, ವ್ಯವಸ್ಥಿತ ವೇದಿಕೆ, ಸಂಪನ್ಮೂಲಗಳನ್ನು ಒದಗಿಸುವುದರಲ್ಲಿ ಇಲಾಖೆ ವಿಫಲವಾಗಿದೆ. ಇದಕ್ಕೆ ಪೂರ್ವ ತಯಾರಿ ಹಾಗೂ ಸಂಘಟನೆಯ ಕೊರತೆ ಎನಿಸುತ್ತದೆ. ಇಲಾಖೆ ಮತ್ತು ಸ್ಥಳೀಯ ಕಲಾವಿದರ ನಡುವೆ ಪರಸ್ಪರ ಗೌರವಿಸುವ ವಾತಾವರಣ ಸೃಷ್ಟಿಸಬೇಕಿದೆ. ಈ ನಿಟ್ಟಿನಲ್ಲಿ ಪೂರ್ಣಾವಧಿ ಅಧಿಕಾರಿ ನೇಮಕ ಅಗತ್ಯವಾಗಿದೆ.
ಕಿರಣ್‌ಗಿರ್ಗಿ ರಂಗ ನಿರ್ದೇಶಕ ಮತ್ತು ಅಧ್ಯಕ್ಷ, ಅಭ್ಯಾಸಿ ಟ್ರಸ್ಟ್, ಚಾಮರಾಜನಗರ
ಜಿಲ್ಲೆಯಾದಗಿನಿಂದಲೂ ಇದೇ ಪರಿಸ್ಥಿತಿ
ಜಿಲ್ಲಾ ಕೇಂದ್ರ ಆದಗಿನಿಂದ ಇಲ್ಲಿಯವರೆಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಇದೇ ಪರಿಸ್ಥಿತಿ ಉಂಟಾಗಿದೆ. ಈ ಕುರಿತು ಕಲಾವಿದರು, ರಂಗಕರ್ಮಿಗಳು ಸಾಕಷ್ಟು ಬಾರಿ ಮೇಲಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಈ ಭಾಗದ ಜನಪ್ರತಿನಿಧಿಗಳು ಹೆಚ್ಚಿನ ಗಮನಹರಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪೂರ್ಣಾವಧಿ ಅಧಿಕಾರಿಯನ್ನು ನೇಮಕ ಮಾಡಬೇಕು.
ಸಿ.ಎಸ್.ಸಯ್ಯದ್ ಆರೀಫ್ ನಗರಸಭಾ ಮಾಜಿ ಸದಸ್ಯ, ಚಾಮರಾಜನಗರ
ಜಿಲ್ಲೆಯ ಮಟ್ಟಿಗೆ ದುರದೃಷ್ಟಕರ
ಬೇರೆ ಇಲಾಖೆಗಳಿಗೆ ಹೋಲಿಕೆ ಮಾಡಿದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಸ್ಕೃತಿ ಕಟ್ಟುವ ಕೆಲಸ ಮಾಡುತ್ತಿದೆ. ಇದು ಅತ್ಯಂತ ಮಹತ್ವದ ಕೆಲಸವಾಗಿದೆ . ಈ ಇಲಾಖೆಗೆ ಕಾಯಂ ಅಧಿಕಾರಿಯ ಜತೆಗೆ ಸಿಬ್ಬಂದಿಯನ್ನೂ ನೇಮಕ ಮಾಡಬೇಕಿದೆ. ಆದರೆ ದುರದೃಷ್ಟವಶಾತ್ ಈ ಎರಡೂವರೆ ದಶಕದಲ್ಲಿ ಪ್ರಭಾರ ಅಧಿಕಾರಿಗಳೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಲಾವಿದರು, ಸಾಹಿತಿಗಳು ಹಾಗೂ ರಂಗಕರ್ಮಿಗಳು ಹೆಚ್ಚಾಗಿರುವ ಜಿಲ್ಲೆಯಲ್ಲಿ ಕಾಯಂ ಅಧಿಕಾರಿಗಳು ನೇಮಕವಾದರೆ ಮತ್ತಷ್ಟು ಸಾಂಸ್ಕೃತಿಕ ಚಟುವಟಿಕೆಗಳಿಗೆ ವೇಗ ದೊರೆಯಲಿದೆ.
ಬಿ.ಎಸ್.ವಿನಯ್ ರಂಗಕರ್ಮಿ ಮತ್ತು ಸಾಹಿತಿ, ಚಾಮರಾಜನಗರ
ಸೂಕ್ತ ಕಾರ್ಯಕ್ರಮ ಆಯೋಜನೆಗೆ ಸಹಕಾರಿ
ಜಿಲ್ಲೆಯಾಗಿ 25 ವರ್ಷಗಳನ್ನು ಪೂರೈಸಿರುವ ಈ ಸಂದರ್ಭದಲ್ಲೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕಾಯಂ ಅಧಿಕಾರಿಗಳು ಇಲ್ಲದೇ ಇರುವುದು ಅತ್ಯಂತ ದುರದೃಷ್ಟಕರ ಸಂಗತಿ. ಕನ್ನಡ ಸಂಸ್ಕೃತಿ, ಆಚಾರ-ವಿಚಾರ ಉಳಿಸುವ ನಿಟ್ಟಿನಲ್ಲಿ ಇಲ್ಲಿಗೆ ಕಾಯಂ ಅಧಿಕಾರಿಯನ್ನು ನೇಮಕ ಮಾಡುವುದು ಅಗತ್ಯವಾಗಿದೆ. ಹಾಗಿದ್ದರೆ ಮಾತ್ರ ಜಿಲ್ಲೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸೂಕ್ತ ರೀತಿಯಲ್ಲಿ ಅನುಷ್ಠಾನವಾಗುತ್ತದೆ. ಮುಂದಿನ ಯೋಜನೆಗಳನ್ನು ರೂಪಿಸಲು ಅನುಕೂಲವಾಗುತ್ತದೆ.
ಸುರೇಶ್ ಎನ್.ಋಗ್ವೇದಿ ಅಧ್ಯಕ್ಷರು, ಜೈಹಿಂದ್ ಪ್ರತಿಷ್ಠಾನ, ಚಾಮರಾಜನಗರ
ಕಲಾವಿದರಿಗೆ ಸಂಜೀವಿನಿಯಾಗಿದೆ
ಜಿಲ್ಲೆಯಲ್ಲಿ ಜಾನಪದ ಕಲಾವಿದರು, ರಂಗಭೂಮಿ ಕಲಾವಿದರು, ಸಾಹಿತಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರೆಲ್ಲರಿಗೂ ಸಂಜೀವಿನಿಯಾಗಿದೆ. ಆದರೆ ಇಲಾಖೆಗೆ ಕಾಯಂ ಅಧಿಕಾರಿ ಹಾಗೂ ನೌಕರರು ಇಲ್ಲದೆ ಹಲವಾರು ಸಾಂಸ್ಕೃತಿಕ ಚಟುವಟಿಕೆಗಳು ಕುಂಠಿತವಾಗುತ್ತಿದೆ. ಸಂಬಂಧಪಟ್ಟವರು ಇಲಾಖೆಗೆ ಪೂರ್ಣಾವಧಿ ಅಧಿಕಾರಿಯನ್ನು ನೇಮಕ ಮಾಡಬೇಕು. ಸಾಂಸ್ಕೃತಿಕ ಮತ್ತು ರಂಗ ಚಟುವಟಿಕೆಗಳು ಉತ್ತಮ ರೀತಿಯಲ್ಲಿ ನಡೆಯಲು ಅನುವು ಮಾಡಿಕೊಡಬೇಕು.
ಸುಜಾತಾ ರಂಗಭೂಮಿ ಕಲಾವಿದೆ, ಚಾಮರಾಜನಗರ
ಹೋರಾಟ ರೂಪಿಸಬೇಕಾಗುತ್ತದೆ
ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕಾಯಂ ಅಧಿಕಾರಿಯನ್ನು ನೇಮಕ ಮಾಡುವಂತೆ ಈಗಾಗಲೇ ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ. ಹಲವು ಸಭೆಗಳಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿದೆ. ಪ್ರಸ್ತುವ ಕಾರ್ಯನಿರ್ವಹಿಸುತ್ತಿರುವ ಪ್ರಭಾರ ಅಧಿಕಾರಿ ಸಾಕಷ್ಟು ಕಾರ್ಯಕ್ರಮಗಳಲ್ಲಿ ಕಲಾವಿದರು ಮತ್ತು ಸಂಘ-ಸಂಸ್ಥೆಗಳ ಮುಖಂಡರನ್ನು ಅಗೌರವದಿಂದ ನಡೆಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಇಲಾಖೆಗೆ ಕಾಯಂ ಅಧಿಕಾರಿ ನೇಮಕ ಮಾಡಬೇಕು. ಇಲ್ಲದಿದ್ದರೆ ಹೋರಾಟ ರೂಪಿಸಬೇಕಾಗುತ್ತದೆ.
ಸುರೇಶ್ ರಾಮಸಮುದ್ರ
ಹೋರಾಟಗಾರ, ಚಾಮರಾಜನಗರ