

ಚಾಮರಾಜನಗರ: ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಯುವ ಜನರ ಪ್ರಬುದ್ಧತೆಗೆ ಯುವ ಉತ್ಸವ ಸಹಕಾರಿ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ವರನಟ ಡಾ.ರಾಜ್ ಕುಮಾರ್ ರಂಗ ಮಂದಿರದಲ್ಲಿ ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಜಿಲ್ಲೆಯ ಯುವಕ-ಯುವತಿ ಮಂಡಳಿ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಯುವ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯಾವುದೇ ದೇಶ ಮುಂದುವರಿಯಬೇಕಾದರೆ ಯುವ ಸಮುದಾಯ ಉತ್ತಮ ರೀತಿಯಲ್ಲಿ ಶಿಕ್ಷಣ ಪಡೆದುಕೊಳ್ಳಬೇಕು. ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರ ಅನೇಕ ಉಚಿತ ಯೋಜನೆಗಳನ್ನು ಜಾರಿಗೆ ತಂದಿದೆ. ಯುವ ಉತ್ಸವದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮಲ್ಲಿರುವ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಸತ್ವವನ್ನು ಅನಾವರಣಗೊಳಿಸಬೇಕು. ಇಲ್ಲಿಂದ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿ ಜಿಲ್ಲೆಗೆ ಕೀರ್ತಿ ಹೆಚ್ಚಿಸಲಿ ಎಂದು ಕರೆ ಕೊಟ್ಟರು.
ನಮ್ಮ ನಾಗರಿಕತೆಯೇ ನಮ್ಮದು ಮಾತೃ ಪ್ರಧಾನವಾದ ವ್ಯವಸ್ಥೆ ಎಂದು ಹೇಳುತ್ತದೆ. ಹೆಣ್ಣು ಮಕ್ಕಳೇ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗ ಪಡೆದುಕೊಳ್ಳಲು ಸಾಕಷ್ಟು ಪೈಪೋಟಿ ಇದೆ. ಅಂಗನವಾಡಿ ಕಾರ್ಯಕರ್ತೆ ಹುದ್ದೆಯನ್ನು ಪಡೆದುಕೊಳ್ಳಲು ವಿದ್ಯಾಭ್ಯಾಸವನ್ನು ಪರಿಗಣಿಸಲಾಗುತ್ತದೆ. ಈ ಕಾರಣಕ್ಕೆ ಯುವ ಜನರು ಉತ್ತಮ ರೀತಿಯಲ್ಲಿ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್. ಋಗ್ವೇದಿ ಮಾತನಾಡಿ, ಯುವಕರಲ್ಲಿ ಸುಪ್ತವಾಗಿರುವ ಸದ್ಭಾವನೆ, ಚಿತ್ರಕಲೆ, ಛಾಯಾಗ್ರಹಣ, ಸಾಹಿತ್ಯ, ಸಂಸ್ಕೃತಿಯನ್ನು ಹೊರತರುವ ಉದ್ದೇಶದಿಂದ ಕೇಂದ್ರ ಸರ್ಕಾರ ಯುವ ಉತ್ಸವವನ್ನು ಆಯೋಜಿಸಿದೆ. ಈ ಮೂಲಕ ಜಿಲ್ಲೆಯ ಶ್ರೇಷ್ಠ ಜಾನಪದ ಸಂಸ್ಕೃತಿಯನ್ನು ಹೊರಜಗತ್ತಿಗೆ ಸಾರುವ ಅವಕಾಶ ಇದೆ. ಭಾಷಣ ಕಲೆ ಬಹುದೊಡ್ಡ ಕ್ರಾಂತಿಯನ್ನು ಉಂಟುಮಾಡಿದೆ. ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಪ್ರಜ್ಞೆಯನ್ನು ಎಚ್ಚರಿಸುವುದು ಭಾಷಣದಿಂದ ಸಾಧ್ಯವಾಗಿದೆ. ಅದನ್ನು ಅಂತರ್ಗತ ಮಾಡಿಕೊಳ್ಳಲು ಈ ಯುವ ಉತ್ಸವ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಸ್ಪರ್ಧೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ, ಭಾಗವಹಿಸುವಿಕೆಯೇ ದೊಡ್ಡ ಗೆಲುವು. ಈ ಮೂಲಕ ಬಹುದೊಡ್ಡ ಸಾಧನೆ ಮಾಡಲು ಎಲ್ಲರೂ ಅರ್ಹರಿದ್ದೀರಿ ಎಂದು ಭಾವಿಸಿದ್ದೇನೆ. ಅನ್ಯ ದೇಶಗಳು ಭಾರತ ದೇಶವನ್ನು ಗುರುತಿಸುತ್ತಿದೆ ಅಂದರೆ ಅದಕ್ಕೆ ಈ ದೇಶದ ಯುವ ಶಕ್ತಿಯೇ ಕಾರಣವಾಗಿದೆ. ನಿಮ್ಮ ಶಕ್ತಿಯನ್ನು ಅನಾವರಣಗೊಳಿಸುವ ಮೂಲಕ ರಾಷ್ಟ್ರ ಮುನ್ನಡೆಗೆ ನೆರವಾಗಿ. ಮುಂದುವರಿಯುತ್ತಿರುವ ಭಾರತದ ಕನಸು ಯುವ ಉತ್ಸವದ ಕನಸಾಗಿದೆ. ನಮ್ಮೆಲ್ಲರನ್ನು ಸಾಂಸ್ಕೃತಿಕ ಉತ್ಸವಗಳು ಒಂದುಗೂಡಿಸುತ್ತದೆ ಎಂದು ಹೇಳಿದರು.
ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ.ಮಹೇಶ್, ಜಾನಪದ ಕಲಾವಿದ ಸಿ.ಎಂ.ನರಸಿಂಹಮೂರ್ತಿ, ಬಾಲ ಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ಮಹೇಶ್, ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ ಅಧ್ಯಕ್ಷ ಜಿ.ಬಂಗಾರು,
ನೆಹರು ಯುವ ಕೇಂದ್ರದ ಯೋಜನಾಧಿಕಾರಿ ಅಭಿಷೇಕ್ ಚಾವರ್, ಲೆಕ್ಕಾಧಿಕಾರಿ ಸತೀಶ್, ಸಹನಾ ಇತರರು ಇದ್ದರು.