ಹಲವು ತಿಂಗಳಿಂದ ಪಿಂಚಣಿ ಸ್ಥಗಿತ

24 yelandur 02
Published on

ಯಳಂದೂರು: ತಾಲೂಕಿನ ವಿವಿಧ ಗ್ರಾಮಗಳ ನೂರಾರು ಹಿರಿಯ ನಾಗರಿಕರಿಗೆ ಸರ್ಕಾರದ ಯೋಜನೆಗಳಡಿ ಸಿಗುವ ಮಾಸಾಶನ ಕಳೆದ ಹಲವು ತಿಂಗಳಿಂದ ಸ್ಥಗತಗೊಂಡಿದೆ.

ಇದರಿಂದ ಈ ಹಣವನ್ನೇ ನೆಚ್ಚಿಕೊಂಡಿರುವ ಹಿರಿಯ ಜೀವಗಳು ಕಂಗಾಲಾಗಿವೆ. ಸಮಸ್ಯೆ ಬಗೆಹರಿಸಿ ಫಲಾನುವಿಗಳಿಗೆ ನ್ಯಾಯ ಕಲ್ಪಿಸಬೇಕಿದ್ದ ಅಧಿಕಾರಿಗಳು ತಾಂತ್ರಿಕ ಕಾರಣದ ನೆಪವೊಡ್ಡಿ ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸುವಂತೆ ಸೂಚಿಸುತ್ತಿದ್ದಾರೆ. ಇದರಿಂದ ಹಿರಿಯ ನಾಗರಿಕರು ನಿತ್ಯ ಕಚೇರಿಗೆ ಅಲೆದಾಡುತ್ತಿದ್ದಾರೆ.

ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಯೋಜನೆಯ ಪಿಂಚಣಿ, ವಿಧವಾ ವೇತನ, ಅಂಗವಿಕಲ ವೇತನ, ಮೈತ್ರಿ, ಮನಸ್ವಿನಿ ಸೇರಿದಂತೆ ವಿವಿಧ ಯೋಜನೆಗಳಡಿ ಒಟ್ಟು 18,500ಕ್ಕೂ ಹೆಚ್ಚು ಫಲಾನುಭವಿಗಳು ತಾಲೂಕಿನಲ್ಲಿ ಇದ್ದಾರೆ. ಇದರಲ್ಲಿ ದುಗ್ಗಹಟ್ಟಿ, ಹೊನ್ನೂರು, ಕಂದಹಳ್ಳಿ, ವೈ.ಕೆ.ಮೋಳೆ, ಕೆಸ್ತೂರು, ಬಿಳಿಗಿರಿರಂಗನಬೆಟ್ಟ, ಯರಗಂಬಳ್ಳಿ, ಸೇರಿದಂತೆ ವಿವಿಧ ಗ್ರಾಮಗಳ ಫಲಾನುಭವಿಗಳಿಗೆ ಕಳೆದ ಹಲವು ತಿಂಗಳಿಂದ ಹಣ ಪಾವತಿಯಾಗಿಲ್ಲ.

ಆಧಾರ್ ಲಿಂಗ್ ಆಗಿಲ್ಲ, ಬ್ಯಾಂಕ್ ಖಾತೆ ಸರಿಯಾಗಿಲ್ಲ, ಸೂಕ್ತ ದಾಖಲೆಗಳು ಮ್ಯಾಚ್ ಆಗುತ್ತಿಲ್ಲ ಎನ್ನವ ಕಾರಣವೊಡ್ಡಲಾಗುತ್ತಿದೆ. ಇದನ್ನು ಸರಿಪಡಿಸಿ ಕ್ರಮ ಕೈಗೊಳ್ಳುವ ಬದಲು ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸಿ ಪಿಂಚಣಿ ಪಡೆಯಿರಿ ಎನ್ನುವುದು ಅಧಿಕಾರಗಳ ಉತ್ತರ. ಅನಕ್ಷರಸ್ತರು, ಆಶಕ್ತರು ಇದರಿಂದ ಕಂಗಾಲಾಗಿದ್ದಾರೆ. ಹಳೆಯ ಪಿಂಚಣಿ ಹಣ ಕೈ ಸೇರುವುದೇ? ಹೊಸದಾಗಿ ಅರ್ಜಿ ಸಲ್ಲಿಸುವಾಗ ಮತ್ತೆ ಏನಾದರೂ ಲೋಪವಾದರೆ ಅರ್ಜಿ ವಜಾಗೊಳ್ಳುವುದೇ ಎನ್ನುವ ಆತಂಕದಲ್ಲಿದ್ದಾರೆ. ಇದರಿಂದ ನಿತ್ಯ ಕಚೇರಿಯಿಂದ ಕಚೇರಿಗೆ ಅಲೆದಾಡುವಂತಾಗಿದೆ. ಔಷಧ ಖರೀದಿ ಸೇರಿದಂತೆ ಜೀವನೋಪಾಯಕ್ಕೆ ಮುಂದೆ ಏನು ಗತಿ ಎನ್ನುವುದೇ ಚಿಂತೆಯಾಗಿದೆ ಎನ್ನುವುದು ಫಲಾನುಭವಿಗಳ ಅಳಲು.


ಸಂಧ್ಯಾ ಸುರಕ್ಷಾ ಯೋಜನೆ (ಪತ್ರ ಸಂಖ್ಯೆ ಆರ್‌ಐಕೆಪಿಆರ್ 725/08-09) ಮಂಜೂರಾಗಿದೆ. ಆದರೆ ಕಳೆದ ಎರಡು ತಿಂಗಳಿಂದ ಹಣ ಪಾವತಿಯಾಗಿಲ್ಲ. ನಿಮ್ಮ ದಾಖಲೆಗಳಲ್ಲಿ ತಾಂತ್ರಿಕ ಸಮಸ್ಯೆ ಇದೆ. ಯೋಜನೆ ರದ್ದುಪಡಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಹೊಸದಾಗಿ ಅರ್ಜಿ ಸಲ್ಲಿಸುವಂತೆ ಸೂಚಿಸಿ ಕಳುಹಿಸುತ್ತಾರೆ. ಇದರಿಂದ ಪರದಾಡುವಂತಾಗಿದೆ. ಈ ಬಗ್ಗೆ ಸಂಬಂಧಪಟ್ಟ ಮೇಲಧಿಕಾರಿಗಳು ಕ್ರಮವಹಿಸಬೇಕು.
ಮಹದೇವಶೆಟ್ಟಿ, ಫಲಾನುಭವಿ, ದುಗ್ಗಹಟ್ಟಿ ಗ್ರಾಮ


ಆಧಾರ್ ಕಾರ್ಡ್, ಬ್ಯಾಂಕ್ ಖಾತೆಗೆ ಮೊಬೈಲ್ ಸಂಖ್ಯೆ ಜೋಡಣೆ ಸಮಸ್ಯೆಯಿಂದ ತಾಲೂಕಿನ ವಿವಿಧ ಯೋಜನೆ ಫಲಾನುಭವಿಗಳ ವೇತನ ಹಲವು ತಿಂಗಳಿಂದ ಸ್ಥಗಿತಗೊಂಡಿದೆ. ಈ ಬಗ್ಗೆ ಮಾಹಿತಿ ಸಂಗ್ರಹಿಸಿ ಫಲಾನುಭವಿಗಳ ಪಟ್ಟಿ ಮಾಡಿ, ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗುತ್ತದೆ.
ಶಿವರಾಜ್, ತಹಸೀಲ್ದಾರ್, ಯಳಂದೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net