

ಯಳಂದೂರು: ಪಟ್ಟಣದ ಹೃದಯ ಭಾಗದಲ್ಲಿ ಐತಿಹಾಸಿಕ ಕಟ್ಟಡದಲ್ಲಿ ನಡೆಯುತ್ತಿರುವ ಕರ್ನಾಟಕ ಪಬ್ಲಿಕ್ ಶಾಲೆ ನಿರ್ವಹಣೆ ಇಲ್ಲದೆ ಛಾವಣಿ ಸೋರುತ್ತಿದೆ. ಶಾಲಾ ಕಟ್ಟಡದ ಮೇಲ್ಭಾಗದಲ್ಲಿ ಗಿಡಗಳು ದೊಡ್ಡ್ಡ ಮರವಾಗಿ ಬೆಳೆದಿದ್ದು, ವಿದ್ಯಾರ್ಥಿಗಳು ಆಪಾಯದ ಅಂಚಿನಲ್ಲೇ ಪಾಠ ಕೇಳಬೇಕಾದ ದುಸ್ಥಿತಿ ಬಂದೊದಗಿದೆ.
ಈ ಕಟ್ಟಡ ದಿವಾನ್ ಪೂರ್ಣಯ್ಯ ಅವರ ಕಾಲದ್ದಾಗಿದ್ದು, ಶತಮಾನದ ಐತಿಹ್ಯವಿದೆ. 1935ರಲ್ಲಿ ಪೂರ್ಣಯ್ಯ ಅವರ ವಂಶಸ್ಥರು ವಿದ್ಯಾದಾನ ನಡೆಯಲಿ ಎಂಬ ಮಹತ್ತರ ಉದ್ದೇಶದಿಂದ ಈ ಕಟ್ಟಡವನ್ನು ಶಾಲೆಗೆ ನೀಡಿದ್ದರು. ಅಂದಿನಿಂದ ಇಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಡೆದುಕೊಂಡು ಬರುತ್ತಿತ್ತು. ಇದರ ಹಿಂಭಾಗದಲ್ಲಿದ್ದ ಕಟ್ಟಡದಲ್ಲಿ ಮೊದಲು ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯೂ ಇತ್ತು. ಇದಾದ ಬಳಿಕ ಇಲ್ಲಿ ಸರ್ಕಾರಿ ಆದರ್ಶ ಶಾಲೆ ನಡೆಯುತ್ತಿತ್ತು. ಆದರ್ಶ ಶಾಲೆಗೆ ಪ್ರತ್ಯೇಕ ಕಟ್ಟಡವಾದ ಮೇಲೆ ಈ ಕಟ್ಟಡ ಪಾಳು ಬಿತ್ತು.
ಆದರೂ ಮುಂಭಾಗದ ಎರಡಂತಸ್ತಿನ ಕಟ್ಟಡದಲ್ಲಿ ಶಾಲೆ ನಡೆಯುತ್ತಿತ್ತು. ಕಳೆದ ಮೂರ‌್ನಾಲ್ಕು ವರ್ಷಗಳಿಂದ ಈ ಕಟ್ಟಡದಲ್ಲಿ ಮಳೆ ಬಂದರೆ ನೀರು ಸೋರುತ್ತಿದ್ದರಿಂದ ಹಾಗೂ ಇದರ ಮೇಲ್ಭಾಗದಲ್ಲಿ ಗಿಡಗಂಟಿಗಳು ಬೆಳೆದ ಹಿನ್ನೆಲೆಯಲ್ಲಿ ಮೊದಲ ಮಹಡಿಯಲ್ಲಿ ತರಗತಿಗಳನ್ನು ನಡೆಸದೆ ನಿಲ್ಲಿಸಲಾಗಿತ್ತು.
ಇದಾದ ಬಳಿಕ ನೆಲ ಮಹಡಿಯಲ್ಲಿ ತರಗತಿಗಳು ನಡೆಯುತ್ತಿದ್ದವು. ಇಲ್ಲೂ ಮಳೆ ನೀರು ಸೋರಿಕೆಯಾಗುವುದು, ಗಾರೆ ಚಕ್ಕೆ ಕಿತ್ತು ಬಂದಿದ್ದರಿಂದ ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ. ಆದರೆ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರ ಕೊಠಡಿಗಳು ಇಲ್ಲೇ ಇವೆ.
ಅಪಾಯ ಕಟ್ಟಿಟ್ಟ ಬುತ್ತಿ:
ಕಟ್ಟಡದ ಮುಂಭಾಗದಲ್ಲಿರುವ ಅಂಗಳದ ಎಡ ಹಾಗೂ ಬಲ ಭಾಗದಲ್ಲಿ ಹೊಸ ಶಾಲಾ ಕಟ್ಟಡಗಳನ್ನು ನಿರ್ಮಿಸಲಾಗಿದ್ದು, ಇದೂ ಕೂಡ ಸೋರುತ್ತಿರುವುದರಿಂದ ಈಚೆಗೆ ಇದನ್ನು ದುರಸ್ತಿ ಮಾಡಿ ತರಗತಿಗಳನ್ನು ನಡೆಸಲಾಗುತ್ತಿದೆ. 180 ವಿದ್ಯಾರ್ಥಿಗಳು ಇಲ್ಲಿ ಕಲಿಕೆಯಲ್ಲಿ ತೊಡಗಿದ್ದಾರೆ. ಆದರೆ ಶಿಥಿಲ ಕಟ್ಟಡದ ಬಳಿಯಲ್ಲೇ ಶೌಚಗೃಹಗಳಿವೆ. ಆಟದ ಸಣ್ಣ ಮೈದಾನವೂ ಇಲ್ಲೇ ಇದ್ದು, ಮಕ್ಕಳು ಇಲ್ಲೇ ಆಟವಾಡುಕೊಳ್ಳುತ್ತಾರೆ. ಯಾವಾಗ ಕಟ್ಟಡ ಕುಸಿದು ಅಪಾಯವಾಗುವುದೋ ಎನ್ನುವುದು ಆತಂಕಕ್ಕೆ ಕಾರಣವಾಗಿದೆ.
ಶಿಥಿಲಗೊಂಡಿರುವ ಹಳೆಯ ಕಟ್ಟಡದಿಂದ ಗಾರೆ ಚಕ್ಕೆಗಳು ಆಗಾಗ ಕೆಳಕ್ಕೆ ಬೀಳುತ್ತವೆ. ಕಟ್ಟಡದ ಮೇಲ್ಭಾಗದಲ್ಲಿದ್ದ ಗಿಡಗಳು ದೊಡ್ಡ ಮರಗಳಾಗಿ ಬೆಳೆದಿದ್ದು, ಗೋಡೆಗಳನ್ನು ಸೀಳುತ್ತಿವೆ. ಈ ಬಗ್ಗೆ ಈ ಹಿಂದೆ ಶಿಕ್ಷಣ ಸಚಿವರೂ ಸೇರಿದಂತೆ ಶಾಸಕರು, ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರೂ ದುರಸ್ತಿಗೆ ಮುಂದಾಗಿಲ್ಲ. ನವೀಕರಣ ಮಾಡಿ ಐತಿಹಾಸಿಕ ಕಟ್ಟಡವನ್ನು ಉಳಿಸಿಕೊಳ್ಳಬೇಕು. ಆ ಮೂಲಕ ವಿದ್ಯಾರ್ಥಿಗಳ ಕಲಿಕೆಗೆ ನೆರವಾಗಬೇಕು ಎಂದು ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಎನ್.ದೊರೆಸ್ವಾಮಿ, ಮಂಜುನಾಥ್ ಸೇರಿದಂತೆ ಹಲವರು ಆಗ್ರಹಿಸಿದ್ದಾರೆ.
ಪಟ್ಟಣದ ಸರ್ಕಾರಿ ಪಬ್ಲಿಕ್ ಶಾಲೆಯ ಹಳೇ ಕಟ್ಟಡವೂ ಸೇರಿದಂತೆ ತಾಲೂಕಿನಲ್ಲಿ ಒಟ್ಟು 12 ಶಾಲೆಗಳ ಮಾಳಿಗೆಯಲ್ಲಿ ನೀರು ಸೋರಿಕೆಯಾಗುತ್ತಿದ್ದು, ಇದಕ್ಕೆ ಸಂಬಂಧಪಟ್ಟಂತೆ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಮಾಹಿತಿ ರವಾನಿಸಲಾಗಿದೆ. ಇದರ ದುರಸ್ತಿಗೆ ಕ್ರಮ ವಹಿಸುವಂತೆ ಮನವಿ ಮಾಡಲಾಗಿದೆ.ಕೆ. ಕಾಂತರಾಜು, ಕ್ಷೇತ್ರ ಶಿಕ್ಷಣಾಧಿಕಾರಿ, ಯಳಂದೂರು