ಬಿಳಿಗಿರಿರಂಗನಾಥಸ್ವಾಮಿಯ ಅದ್ದೂರಿ ಚಿಕ್ಕಜಾತ್ರೆ

16 yelandur 01
Published on

ಯಳಂದೂರು: ಕೋವಿಡ್ ಹಾಗೂ ಜೀರ್ಣೋದ್ಧಾರದ ಹಿನ್ನೆಲೆಯಲ್ಲಿ ಐದು ವರ್ಷಗಳಿಂದ ಸ್ಥಗಿತಗೊಂಡಿದ್ದ ಬಿಳಿಗಿರಿರಂಗನಾಥಸ್ವಾಮಿಯ ಚಿಕ್ಕಜಾತ್ರೆ ಬಿಳಿಗಿರಿರಂಗನಬೆಟ್ಟದಲ್ಲಿ ಸೋಮವಾರ ವಿಜೃಂಭಣೆಯಿಂದ ನಡೆಯಿತು.
ಜಾತ್ರೆ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ಜಾತ್ರೆಯ ಸಂಭ್ರಮವನ್ನು ಇಮ್ಮಡಿಗೊಳಿಸಿದರು. 5 ವರ್ಷಗಳಿಂದ ದೇಗುಲದ ಜೀರ್ಣೋದ್ಧಾರದ ಹಿನ್ನೆಲೆಯಲ್ಲಿ ನಡೆಯದ ಜಾತ್ರೆಗೆ ಈ ಬಾರಿ ಜನಸಾಗರವೇ ನೆರೆದಿತ್ತು. ಸಹಸ್ರಾರು ಭಕ್ತರ ಜಯಘೋಷದೊಂದಿಗೆ ರಥೋತ್ಸವ ಜರುಗಿತು.


ಪ್ರಾತಃಕಾಲ ಕಲ್ಯಾಣೋತ್ಸವ, ಮುಯ್ಯಿ ಸಮರ್ಪಣೆ ನಂತರ ಪವಿತ್ರ ಚಿನ್ನಾಭರಣವನ್ನು ತೊಡಿಸಿ, ವಿವಿಧ ಪುಷ್ಪಗಳಿಂದ ಅಲಂಕೃತವಾದ ಉತ್ಸವಮೂರ್ತಿಯನ್ನು ವಿವಿಧ ಬಣ್ಣ,ಬಣ್ಣದ ಪಟಗಳು, ಪುಷ್ಪದಿಂದ ಅಲಂಕೃತವಾದ ತೇರಿನಲ್ಲಿ 10.46 ರಲ್ಲಿ ಪ್ರತಿಷ್ಠಾಪಿಸಲಾಯಿತು. ಇದೇ ಸಂದರ್ಭದಲ್ಲಿ ಪ್ರತಿ ತೇರಿನ ಸಂದರ್ಭದಲ್ಲೂ ಬರುವ ಗರುಡ ಪಕ್ಷಿಯು ರಥದ ಸುತ್ತ ಪ್ರದಕ್ಷಿಣೆ ಹಾಕಿದ್ದು ನೆರೆದಿದ್ದ ಭಕ್ತರ ಸಂಭ್ರಮವನ್ನು ಇಮ್ಮಡಿಗೊಳಿಸಿತು.
ಉತ್ಸವದ ಸಂದರ್ಭದಲ್ಲಿ ದಾಸರ ಶಂಖ, ಜಾಗಟೆ, ನಾದಸ್ವರದೊಂದಿಗೆ ಗೋವಿಂದ ನಾಮಾವಳಿಯನ್ನು ಹಾಡಿ ಸಾವಿರಾರು ಭಕ್ತರು ರಥವನ್ನು ಎಳೆದು ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ತಾವು ಬೆಳೆದಿದ್ದ ದವಸಧಾನ್ಯ, ಚಿಲ್ಲರೆ ಕಾಸು, ನವದಂಪತಿಗಳು ಹಣ್ಣುಜವನ ಎಸೆದು ಪುನೀತರಾದರು.


ಶಾಸಕ ಎನ್.ಮಹೇಶ್, ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣಿಕೊಪ್ಪ ಕೂಡ ತೇರು ಎಳೆದು ಭಕ್ತಿ ಮೆರೆದಿದ್ದು ವಿಶೇಷವಾಗಿತ್ತು. ದೇಗುಲದ ಒಂದು ಸುತ್ತ ಪ್ರದಕ್ಷಿಣೆ ಹಾಕಿದ ಚಿಕ್ಕತೇರು ಮತ್ತೆ ಸ್ವಸ್ಥಾನಕ್ಕೆ ಸೇರಿತು. ನಂತರ ಚಿನ್ನಾಭರಣಗಳಿಂದ ಅಲಂಕೃತವಾದ ಉತ್ಸವ ಮೂರ್ತಿಯನ್ನು ಮಂಟಪೋತ್ಸವಕ್ಕೆ ಒಯ್ಯಲಾಯಿತು. ಬೋಪರಾಕ್ ಸೇವೆಯಲ್ಲಿ ಮಿಂದಿದ್ದ ಭಕ್ತರು: ದೇಗುದಲ್ಲಿ ಪ್ರತಿ ವರ್ಷ ಎರಡು ಬಾರಿ ರಥೋತ್ಸವ ನಡೆಯುತ್ತದೆ. ಸಂಕ್ರಾಂತಿಯ ಮಾರನೇ ದಿನ ಚಿಕ್ಕ ಜಾತ್ರೆ ನಡೆದರೆ, ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ದೊಡ್ಡ ಜಾತ್ರೆ ನಡೆಯುತ್ತದೆ. ಈ ವೇಳೆ ಇಲ್ಲಿ ದಾಸಂದಿರು ಅಕ್ಕಿ, ಕಜ್ಜಾಯ, ಬೆಲ್ಲ, ತೆಂಗಿನಕಾಯಿ, ಕಡ್ಲೆಯನ್ನು ಹಾಕಿ ಬ್ಯಾಟೆಮನೆ ಸೇವೆ ಹಾಕುವ ಸಂಪ್ರದಾಯವಿದೆ. ದೇಗುಲದ ಸುತ್ತ ಜಾಗಟೆ, ಶಂಖನಾದ ಹೊಮ್ಮಿಸಿ ಹಾಪರಾಕ್, ಬೋಪರಾಕ್ ಎಂದು ಕೂಗಿ ವಿಶಿಷ್ಟವಾಗಿ ಆಚರಿಸುವ ಈ ಸಂಪ್ರದಾಯಕ್ಕೂ ಚಿಕ್ಕ ಜಾತ್ರೆ ಸಾಕ್ಷಿಯಾಯಿತು.


ಚಾಮರಾಜನಗರ, ಬೆಂಗಳೂರು, ಮೈಸೂರು ಹಾಗೂ ಮಂಡ್ಯ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಿಂದ ಆಗಮಿಸಿದ ಭಕ್ತರು ಸರತಿ ಸಾಲಿನಲ್ಲಿ ನಿಂತು ಬಿಳಿಗಿರಿರಂಗನಾಥಸ್ವಾಮಿಯ ದರ್ಶನ ಪಡೆದರು. ಮೈಸೂರಿನ ಮಹಾರಾಜರು ನೀಡಿರುವ ಕಿರೀಟ ಸೇರಿದಂತೆ ವಿವಿಧ ಚಿನ್ನಾಭರಣಗಳಿಂದ ಅಲಂಕಾರ ಮಾಡಲಾಗಿತ್ತು. ಭಕ್ತರು ದೇವರ ದೊಡ್ಡ ಪಾದುಕೆಗಳಿಂದ ತಲೆಗೆ ಬಡಿಸಿಕೊಳ್ಳುವ ಮೂಲಕ ಭಕ್ತಿ ಮೆರೆದರು. ದ್ವಿಚಕ್ರ ವಾಹನ ನಿಷೇಧ, ಯಶಸ್ಸು ಕಂಡ ಪೊಲೀಸರು: ಈ ಬಾರಿಯ ರಥೋತ್ಸವಕ್ಕೆ ಕಳೆದ ದೊಡ್ಡ ಜಾತ್ರೆಯ ಸಂದರ್ಭದಲ್ಲಿ ನಡೆದ ವಾಹನ ಕಿರಿಕಿರಿಯನ್ನು ತಪ್ಪಿಸಲು ಈ ಬಾರಿ ಪೊಲೀಸ್ ಇಲಾಖೆ ಹೆಚ್ಚಿನ ಕಾಳಜಿ ವಹಿಸಿತ್ತು. ಬೆಟ್ಟಕ್ಕೆ ದ್ವಿಚಕ್ರ ವಾಹನ ಪ್ರವೇಶವನ್ನು ನಿಷೇಧಿಸಲಾಗಿತ್ತು. ಗುಂಬಳ್ಳಿ ಚೆಕ್‌ಪೋಸ್ಟ್‌ನಲ್ಲಿ ದ್ವಿಚಕ್ರ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಡಲಾಗಿತ್ತು. ಇಲ್ಲಿಂದ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಮಾಡಲಾಗಿತ್ತು. ಸರತಿ ಸಾಲಿನಲ್ಲಿ ಬಸ್ ಹತ್ತಲು, ಇಳಿಯಲು ವ್ಯವಸ್ಥೆ ಮಾಡಲಾಗಿತ್ತು. ದೇಗುಲದ ವತಿಯಿಂದ ಮೊಬೈಲ್ ಟಾಯ್ಲೆಟ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು.

ಭಕ್ತರ ಪರದಾಟ: ಯಳಂದೂರು ಪಟ್ಟಣದಿಂದ ಬೆಟ್ಟಕ್ಕೆ ತೆರಳಲು ಬೆಳಗ್ಗೆ ಕೆಎಸ್‌ಆರ್‌ಟಿಸಿ ವತಿಯಿಂದ ಕಡಿಮೆ ಸಂಖ್ಯೆಯ ಬಸ್‌ಗಳು ಸಂಚರಿಸಿದ ಹಿನ್ನೆಲೆಯಲ್ಲಿ ಭಕ್ತರು ಬೆಟ್ಟಕ್ಕೆ ತೆರಳಲು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೇ, ಇಲ್ಲಿರುವ ಚಿಕ್ಕ ಬಸ್ ನಿಲ್ದಾಣದಲ್ಲೇ ಬಸ್ ಹತ್ತಿಳಿಯಲು ವ್ಯವಸ್ಥೆ ಮಾಡಿದ್ದರಿಂದ ಟ್ರಾಫಿಕ್ ಜಾಮ್‌ನ ಕಿರಿಕಿರಿ ಉಂಟಾಗಿತ್ತು. ಪ್ರತಿ ಬಾರಿಯೂ ಇದಕ್ಕಾಗಿ ತಾತ್ಕಾಲಿಕ ಬಸ್ ನಿಲ್ದಾಣದ ವ್ಯವಸ್ಥೆ ಇರುತ್ತಿದ್ದು. ಈ ಬಾರಿ ವ್ಯವಸ್ಥೆ ಕಲ್ಪಿಸದ ಹಿನ್ನೆಲೆಯಲ್ಲಿ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net