

ಚಾಮರಾಜನಗರ: ಸಾಧನ-ಸಲಕರಣೆಗಳನ್ನು ಪಡೆದ ಅಂಗವಿಕಲರು ವ್ಯಕ್ತಪಡಿಸಿದ ಸಂತಸ ಕಂಡು ಜೀವನದಲ್ಲಿ ಸಾರ್ಥಕ ಸೇವೆ ಮಾಡಿದೆ ಎನಿಸಿತು ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ವಿಕಲಾಂಗ ವ್ಯಕ್ತಿಗಳ ಸಬಲೀಕರಣ ಇಲಾಖೆ, ಆರ್ಟಿಫಿಶಿಯಲ್ ಲಿಂಬ್ಸ್ ಮ್ಯಾನುಫ್ಯಾಕ್ಚರಿಂಗ್ ಕಾರ್ಪೊರೇಷನ್ ಆ್ ಇಂಡಿಯಾ ಸಹಯೋಗದಲ್ಲಿ ಕೇಂದ್ರ ಸರ್ಕಾರದ ವಿಶೇಷ ಅಡಿಪ್ ಯೋಜನೆಯಡಿ ಶನಿವಾರ ಆಯೋಜಿಸಿದ್ದ ಅಂಗವಿಕಲರಿಗೆ ಉಚಿತವಾಗಿ ಸಾಧನ ಸಲಕರಣೆಗಳ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಶಿಬಿರದಲ್ಲಿ ಎಷ್ಟು ಜನ ಅಂಗವಿಕಲರು ಭಾಗವಹಿಸಿದರೂ ಸಾಧನ ಸಲಕರಣೆ ನೀಡುವುದಾಗಿ ಹೇಳಿದ್ದೆವು. ಆದರೂ ಒಂದಷ್ಟು ಜನರು ಶಿಬಿರದಲ್ಲಿ ಭಾಗವಹಿಸಿಲ್ಲ. ಅಂತಹವರಿಗೆ ಮತ್ತೆ ತಪಾಸಣೆ ನಡೆಸಿ ಸಾಧನ ಸಲಕರಣೆ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
ಮಾನವೀಯತೆಗಿಂತ ಮತ್ತೊಂದು ಮಹತ್ ಕಾರ್ಯವಿಲ್ಲ. ಅಂಗವಿಕರಿಗೆ ಸಾಧನ ಸಲಕರಣೆ ನೀಡಬೇಕೆಂಬುದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕನಸು. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಚಾಮರಾಜನಗರದಲ್ಲಿ ಬೃಹತ್ ಕಾರ್ಯಕ್ರಮ ನಡೆದಿದೆ. ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು.
ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಮಾತನಾಡಿ, ಕೇಂದ್ರ ಸರ್ಕಾರ ಅಂಗವಿಕಲರ ದೇಹದಲ್ಲಿರುವ ನ್ಯೂನತೆ ನೀಗಿಸಲು ಮಾನವೀಯ ಕಾರ್ಯ ಮಾಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಕಳೆದ ತಿಂಗಳು ನಡೆದ ಬೃಹತ್ ಮೇಳದಲ್ಲಿ ಅಂಗವಿಕರಿಗೆ ಸಲಕರಣೆಗಳನ್ನು ನೀಡಲಾಗಿತ್ತು. 1693 ಜನರಿಗೆ ವಿವಿಧ ಸಲಕರಣೆ ನೀಡಬೇಕಿತ್ತು. ಕಳೆದ ಬಾರಿ ಸಲಕರಣೆ ಪಡೆಯಲು ಸಾಧ್ಯವಾಗದವರಿಗೆ ಈಗ ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು. ಅಂಗವಿಕಲರಿಗೆ ಸಾಧನ ಸಲಕರಣೆ ವಿತರಣೆ ಕಾರ್ಯಕ್ರಮ ದೇಶದ 67 ಲೋಕಸಭಾ ಕ್ಷೇತ್ರಗಳಲ್ಲಿ ನಡೆಯುತ್ತಿದ್ದು, ಕರ್ನಾಟಕದಲ್ಲಿ ಚಾಮರಾಜನಗರ ಜಿಲ್ಲೆ ಕೂಡ ಒಂದು. ಮಾನವೀಯ ಅಂತಃಕರಣವಿರುವ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರಿಂದ ಈ ಕಾರ್ಯವಾಗಿದೆ ಎಂದು ಬಣ್ಣಿಸಿದರು.
ಕಾವೇರಿ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ನಿಜಗುಣರಾಜು ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅಂಗವಿಕಲರಿಗೆ ಶೇ.5 ರಷ್ಟು ಮೀಸಲಾತಿ ನೀಡಿ, ಅಡೆತಡೆ ರಹಿತ ವಾತಾವರಣ ನಿರ್ಮಾಣ ಮಾಡಲು ವಿಶೇಷ ಗುರುತಿನ ಚೀಟಿ ನೀಡಿದ್ದಾರೆ. ಮೌಲ್ಯಾಧಾರಿತ ಜೀವನದಲ್ಲಿ ಮಾನವೀಯ ಮೌಲ್ಯ ಇಟ್ಟುಕೊಂಡು ರಾಜಕಾರಣ ಮಾಡುವವರು ಕಡಿಮೆ. ಟನ್‌ಗಟ್ಟಲೆ ಸುಳ್ಳು ಹೇಳುವ ರಾಜಕಾರಣಿಗಳ ನಡುವೆ ಮಾನವೀಯ ಮೌಲ್ಯವುಳ್ಳ ಸಂಸದ ವಿ.ಶ್ರೀನಿವಾಸಪ್ರಸಾದ್ ವಿಶೇಷ ಸ್ಥಾನದಲ್ಲಿ ನಿಲ್ಲುತ್ತಾರೆ. ಇವರೊಂದಿಗೆ ವೇದಿಕೆ ಹಂಚಿಕೊಳ್ಳುವುದೇ ನಮ್ಮ ಸೌಭಾಗ್ಯ ಎಂದರು.
ಇದೇ ವೇಳೆ ಅಂಗವಿಕಲರಿಗೆ ಸಾಧನ ಸಲಕರಣೆಗಳನ್ನು ವಿತರಣೆ ಮಾಡಲಾಯಿತು. ನಗರಸಭೆ ಅಧ್ಯಕ್ಷೆ ಸಿ.ಎಂ. ಆಶಾನಟರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್,ಜಿಪಂ ಸಿಇಒ ಕೆ.ಎಂ.ಗಾಯತ್ರಿ, ಉಪವಿಭಾಗಾಧಿಕಾರಿ ಗೀತಾ ಹುಡೇದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿಶ್ವೇಶ್ವರಯ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಗೀತಾಲಕ್ಷ್ಮೀ ಮತ್ತು ಇತರರು ಹಾಜರಿದ್ದರು.