ಮೌಢ್ಯಕ್ಕೆ ಬ್ರೇಕ್ ಹಾಕಿದ್ದ ಸಿದ್ದು ಮತ್ತೊಮ್ಮೆ ಸಿಎಂ

18raju6
Published on

ಚಾಮರಾಜನಗರ: ಜಿಲ್ಲಾ ಕೇಂದ್ರ ಚಾಮರಾಜನಗರದೊಂದಿಗೆ ಬೆಸೆದುಕೊಂಡಿದ್ದ ಮೌಢ್ಯವನ್ನು ಅಂದು ತೊಡೆದು ಹಾಕಿದ್ದ ಸಿದ್ದರಾಮಯ್ಯ ಅವರಿಗೆ ಇಂದು ‘ಮತ್ತೊಮ್ಮೆ ಮುಖ್ಯಮಂತ್ರಿ’ ಆಗುವ ಯೋಗ ಲಭಿಸಿದೆ.

‘ಸಿಎಂ ಆದವರು ಚಾಮರಾಜನಗರಕ್ಕೆ ಬಂದರೆ ಆರು ತಿಂಗಳಲ್ಲಿ ಅಧಿಕಾರ ಕಳೆದುಕೊಳ್ಳುತ್ತಾರೆ’ ಎನ್ನುವ ಮೂಢನಂಬಿಕೆ ಮನೆ ಮಾಡಿತ್ತು. ಆದರೆ ಸಮಾಜವಾದಿ ಹಿನ್ನೆಲೆಯಿಂದ ಬಂದಿರುವ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ 10ಕ್ಕೂ ಹೆಚ್ಚು ಬಾರಿ ಚಾಮರಾಜನಗರಕ್ಕೆ ಭೇಟಿ ಕೊಟ್ಟಿದ್ದರು. ಯಾರೂ ಕೂಡ ಇಷ್ಟು ಸಲ ಇಲ್ಲಿಗೆ ಬಂದಿರಲಿಲ್ಲ. ಭೇಟಿ ಬಳಿಕ ತಮ್ಮ ಅಧಿಕಾರವಧಿಯನ್ನು ಪೂರ್ಣಗೊಳಿಸಿ ಚಾಮರಾಜನಗರಕ್ಕೆ ಅಂಟಿದ್ದ ಕಳಂಕವನ್ನು ತೊಡೆದು ಹಾಕಿದ್ದರು.

ಡಿಸಿಎಂ ಆಗಿ ಜಿಲ್ಲೆ ಉದ್ಘಾಟನೆ: 1997ರ ಆಗಸ್ಟ್ 15ರಂದು ಚಾಮರಾಜನಗರ ಹೊಸ ಜಿಲ್ಲೆಯಾಗಿ ರಚನೆಯಾಯಿತು. ಅಂದಿನ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಮೂಢನಂಬಿಕೆಗೆ ಕಟ್ಟುಬಿದ್ದು ಚಾಮರಾಜನಗರಕ್ಕೆ ಬಾರದೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಜಿಲ್ಲೆ ಉದ್ಘಾಟಿಸಿದ್ದರು. ಆದರೆ ಡಿಸಿಎಂ ಆಗಿದ್ದ ಸಿದ್ದರಾಮಯ್ಯ ಚಾಮರಾಜನಗರಕ್ಕೆ ಬಂದು ಉದ್ಘಾಟನೆ ಮಾಡಿದ್ದರು.

ಸಿದ್ದು ನಮ್ ಕಾಡಿನವರು:
‘ಸಿದ್ದರಾಮಯ್ಯ ನಮ್ ಕಾಡಿನವರು…’ವರನಟ ಡಾ.ರಾಜ್‌ಕುಮಾರ್ ಹೇಳಿದ್ದ ಈ ಮಾತನ್ನು ಅಭಿಮಾನಿಗಳು ದೇವರಂತೆ ಪೂಜಿಸುತ್ತಿರುವ ಡಾ.ಪುನೀತ್‌ರಾಜ್‌ಕುಮಾರ್ ಸ್ಮರಿಸಿದ್ದರು. ಟಿವಿ ಶೋನಲ್ಲಿ ಭಾಗವಹಿಸಿದ್ದಾಗ ಸಿದ್ದರಾಮಯ್ಯ ಅವರ ಕುರಿತು ಪುನೀತ್ ಮಾತನಾಡಿದ್ದರು. ‘ನಮ್ಮ ತಂದೆ ಸಿದ್ದರಾಮಯ್ಯ ಅವರನ್ನು ನೋಡಿದಾಗಲೆಲ್ಲ ನಮ್ ಕಾಡಿನವರು, ನಮ್ ಕಾಡಿನವರು… ಎನ್ನುತ್ತಿದ್ದರು. ಈಗಲೂ ನಾವು ಹೆಮ್ಮೆಯಿಂದ ಹೇಳುಕೊಳ್ಳುತ್ತೇವೆ ನಮ್ ಕಾಡಿನವರೆಂದು. ಆಲ್ ದಿ ಬೆಸ್ಟ್ ಮಾಮ, ನಿಮ್ಮ ಭವಿಷ್ಯದಲ್ಲಿ ಏನೇನು ಅಂದುಕೊಂಡಿದ್ದೀರೋ ಅದೆಲ್ಲವೂ ಈಡೇರಲಿ’ ಎಂದು ಪುನೀತ್ ಆಶಿಸಿದ್ದರು.

ಚಾಮರಾಜನಗರ ಪ್ರತ್ಯೇಕ ಜಿಲ್ಲೆಯಾಗುವ ಮೊದಲು ಮೈಸೂರಿನ ವ್ಯಾಪ್ತಿಯಲ್ಲಿತ್ತು. ‘ಗಾಜನೂರಿನ ಗಂಡು’ ಡಾ.ರಾಜ್‌ಕುಮಾರ್ ಮತ್ತು ‘ಸಿದ್ದರಾಮನಹುಂಡಿಯ’ ಸಿದ್ದರಾಮಯ್ಯ ಒಂದೇ ಜಿಲ್ಲೆಯವರಾಗಿದ್ದರು. ಜತೆಗೆ, ‘ಕಾಡು’ ಎಂಬುದು ‘ಸೀಮೆ’ಗೆ ಸಮಾನಾರ್ಥಕ ಪದವಾಗಿ ಆಡು ಮಾತಿನಲ್ಲಿ ಸ್ಥಳೀಯವಾಗಿ ಬಳಕೆ ಆಗುತ್ತಿದ್ದುದರಿಂದ ಡಾ.ರಾಜ್ ಅವರು ಜಿಲ್ಲೆಯವರನ್ನು ಪ್ರೀತಿಯಿಂದ ‘ನಮ್ ಕಾಡಿನವರು’ ಎಂದು ಕರೆಯುತ್ತಿದ್ದರಂತೆ.

ಸಿದ್ದು ಹೇಳುತ್ತಿದ್ದಲೇ ಇದ್ದರು…
ಸಿದ್ದರಾಮಯ್ಯ ಚಾಮರಾಜನಗರಕ್ಕೆ ಭೇಟಿ ಕೊಟ್ಟಲಾಗಲೆಲ್ಲ ಮೌಢ್ಯಕ್ಕೆ ಸೆಡ್ಡು ಹೊಡೆದಿದ್ದೇನೆ. 5 ವರ್ಷ ಅಧಿಕಾರ ಪೂರ್ಣಗೊಳಿಸುತ್ತೇನೆ ಎಂದು ಹೇಳುತ್ತಿದ್ದರು. ಅವರ ಮಾತಿನಂತೆಯೇ ಆಯಿತು. ಎಸ್.ನಿಜಲಿಂಗಪ್ಪ, ಡಿ.ದೇವರಾಜ ಅರಸು ಬಳಿಕ ಪೂರ್ಣ ಅವಧಿ ಸಿಎಂ ಆಗಿದ್ದವರ ಸಾಲಿಗೆ ಸಿದ್ದರಾಮಯ್ಯ ಸೇರಿಕೊಂಡರು. ಜಿಲ್ಲೆಯ ಅಭಿವೃದ್ಧಿಗೆ ಕೊಡುಗೆ ನೀಡಿದರು.


ಕಾಕತಾಳೀಯ ಕಳಂಕವಾಗಿ ಮಾರ್ಪಟ್ಟಿತು:
ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗಡೆ, ಎಸ್.ಆರ್.ಬೊಮ್ಮಾಯಿ, ವೀರೇಂದ್ರ ಪಾಟೀಲ್ ಚಾ.ನಗರಕ್ಕೆ ಬಂದು ಹೋದ ಮೇಲೆ ಕಾಕತಾಳೀಯವೆಂಬಂತೆ ಅಧಿಕಾರ ಕಳೆದುಕೊಂಡರು. ಅದು ಕಳಂಕವಾಗಿ ಮಾರ್ಪಟ್ಟ ಈ ಮೌಢ್ಯದಿಂದಾಗಿ 1991ರಲ್ಲಿ ವೀರೇಂದ್ರ ಪಾಟೀಲ್ ಭೇಟಿ ನೀಡಿದ್ದೇ ಕೊನೆಯಾಯಿತು.
ನಂತರ ಸಿಎಂ ಆದ ಎಸ್.ಬಂಗಾರಪ್ಪ, ವೀರಪ್ಪ ಮೊಯ್ಲಿ, ಎಚ್.ಡಿ.ದೇವೇಗೌಡ, ಜೆ.ಎಚ್.ಪಟೇಲ್, ಎಸ್.ಎಂ.ಕೃಷ್ಣ, ಧರಂಸಿಂಗ್, ಬಿ.ಎಸ್.ಯಡಿಯೂರಪ್ಪ, ಸದಾನಂದಗೌಡ ತಮ್ಮ ಅಧಿಕಾರಾವಧಿಯಲ್ಲಿ ನಗರಕ್ಕೆ ಬರಲೇ ಇಲ್ಲ. 1997ರ ಆಗಸ್ಟ್ 15ರಂದು ಚಾಮರಾಜನಗರ ಮೈಸೂರಿನಿಂದ ಬೇರ್ಪಟ್ಟು ಪ್ರತ್ಯೇಕ ಜಿಲ್ಲೆಯಾದಾಗ ಮುಖ್ಯಮಂತ್ರಿಯಾಗಿದ್ದ ಜೆ.ಎಚ್.ಪಟೇಲ್ ನಗರಕ್ಕೆ ಬಾರದೆ ಮಹದೇಶ್ವರ ಬೆಟ್ಟದಲ್ಲಿ ಜಿಲ್ಲೆ ಉದ್ಘಾಟನೆ ಮಾಡಿದ್ದರು.
ಬಳಿಕ 2007ರ ಮೇ 28ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಭೇಟಿ ಕೊಟ್ಟರು. ಇವರ ನಂತರ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ ಅಧಿಕಾರಾವಧಿಯ ಕೊನೆಯ ವರ್ಷಗಳಲ್ಲಿ ಬಂದರು. ಸಿದ್ದರಾಮಯ್ಯ ಅಧಿಕಾರದ ಪ್ರಾರಂಭದಲ್ಲೇ ಚಾ.ನಗರಕ್ಕೆ ಭೇಟಿ ಕೊಟ್ಟರು. ನಂತರದ ದಿನಗಳಲ್ಲಿ 10ಕ್ಕೂ ಹೆಚ್ಚು ಬಾರಿ ಆಗಮಿಸಿ ದಾಖಲೆ ಬರೆದರು.

ಸೋಲಿನ ರುಚಿ ತೋರಿಸಿದ ಗುರು-ಶಿಷ್ಯರು:
ಈ ಚುನಾವಣೆಯಲ್ಲಿ ಗುರು-ಶಿಷ್ಯರಿಬ್ಬರೂ ಸೇರಿ ಒಬ್ಬರಿಗೆ ಸೋಲಿನ ರುಚಿ ತೋರಿಸಿದ್ದಾರೆ. ವರುಣ ಮತ್ತು ಚಾಮರಾಜನಗರದಲ್ಲಿ ಸ್ಪರ್ಧೆ ಮಾಡಿದ್ದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣಗೆ ಒಂದೇ ಚುನಾವಣೆಯಲ್ಲಿ ಎರಡೆರಡು ಸೋಲಾಗಿದೆ. ವರುಣದಲ್ಲಿ ಸಿದ್ದರಾಮಯ್ಯ, ಚಾಮರಾಜನಗರದಲ್ಲಿ ಸಿ.ಪುಟ್ಟರಂಗಶೆಟ್ಟಿ ಗೆದ್ದಿದ್ದಾರೆ. ಇವರಿಬ್ಬರೂ ಗುರು-ಶಿಷ್ಯರಾಗಿದ್ದು, ಹಿಂದಿನಂತೆಯೇ ಈ ಸಲವೂ ಸಿದ್ದು ಸಚಿವ ಸಂಪುಟದಲ್ಲಿ ಸಿ.ಪುಟ್ಟರಂಗಶೆಟ್ಟಿಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇದೆ. ಅಲ್ಲದೆ, ಸಿದ್ದು ಸಿಎಂ ಆದ ಕೆಲವೇ ದಿನಗಳಲ್ಲಿ ಚಾ.ನಗರಕ್ಕೆ ಬರುವ ಸಾಧ್ಯತೆಯೂ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net