ಬಿಎಸ್‌ವೈ ನನ್ನನ್ನು ಸಂಪರ್ಕಿಸಿಲ್ಲ

bjp-chamarajanagara-v.somanna
Published on

ಚಾಮರಾಜನಗರ: ನಾನೆಲ್ಲೋ ಒಂದು ಕಡೆ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಕೇಳಿದ್ದೆ. ಆದರೆ ಅದು ಏನಾಗಿದೆ ಅಂತ ಡಿಸೆಂಬರ್ 6 ರಂದು ಹೇಳುತ್ತೇನೆ ಎಂದು ಮಾಜಿ ಸಚಿವ ವಿ.ಸೋಮಣ್ಣ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಡಿ. 6ರ ತನಕ ಏನೂ ಮಾತನಾಡಬೇಡ ಅಂತ ಹೈಕಮಾಂಡ್ ಹೇಳಿದೆ. ಹಾಗಾಗಿ, ಅಲ್ಲಿಯವರೆಗೆ ಕಾದು ನೋಡುತ್ತೇನೆ. ಅಂದು ಎಲ್ಲವನ್ನೂ ವಿವರಿಸುತ್ತೇನೆ ಎಂದರು. ಬಿ.ಎಸ್.ಯಡಿಯೂರಪ್ಪ ನನ್ನನ್ನು ಸಂಪರ್ಕ ಮಾಡಿಲ್ಲ. ನಾನು ಯಾರನ್ನೂ ಸಂಪರ್ಕ ಮಾಡುವ ಪರಿಸ್ಥಿತಿಯೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಲೋಕಸಭೆ ಚುನಾವಣೆ ಸ್ಪರ್ಧೆ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಯಾರಿಗೂ ಪ್ರತಿಸ್ಪರ್ಧಿಯಲ್ಲ. ಯಾರನ್ನೂ ನನ್ನ ಜತೆ ಹೋಲಿಕೆ ಮಾಡಬೇಡಿ. ಇಲ್ಲಿ ಏನೇನು ಕೆಟ್ಟ ಕೆಲಸಗಳು ಆಯ್ತು ಅಂತ ನಿಮಗೆ ಗೊತ್ತಿದೆ. ನನಗೆ ನನ್ನದೇ ಆದ ದುಡಿಮೆ, ಶ್ರಮ ಇದೆ. ಸೋಮಣ್ಣ ನಿಂತ ನೀರಲ್ಲ, ಹರಿಯುವ ನೀರು. ನನ್ನ ಅಂತರಾಳದ ನೋವು ಮತ್ತು ಎಲ್ಲೆಲ್ಲಿ ತಪ್ಪಾಗಿದೆ ಎನ್ನುವ ಮಾಹಿತಿಯನ್ನು ವರಿಷ್ಠರಿಗೆ ತಿಳಿಸಿದ್ದೇನೆ. ಡಿ.6 ರಂದು ಎಲ್ಲವನ್ನೂ ವಿವರಿಸುತ್ತೇನೆ ಎಂದು ಹೇಳಿದರು.

ಹಲ್ಲು ಕಿಸಿಯುವ ಪರಿಸ್ಥಿತಿ ಬಂದಿಲ್ಲ: ಸಿದ್ದಗಂಗಾ ಮಠದ ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ಸಚಿವ ರಾಜಣ್ಣಗೆ ಕರೆ ಮಾಡಿದ್ದೆ. ನಾನೇನೂ ಶಕ್ತಿಪ್ರದರ್ಶನಕ್ಕೆ ಮಠ ತಗೊಂಡು ಹೋಗಲ್ಲ. ಅಷ್ಟೊಂದು ಕಿರಾತಕ ನಾನಲ್ಲ. ನಮ್ಮ ಕುಟುಂಬದಿಂದ ಗುರುಭವನ ಕಟ್ಟಿದ್ದೇವೆ. ಆ ಕಾರ್ಯಕ್ರಮಕ್ಕೆ ಎಲ್ಲ ಪಕ್ಷದವರೂ ಬರುತ್ತಾರೆ. ಅದೇ ರೀತಿ ಆ ಜಿಲ್ಲೆಯ ಇಬ್ಬರು ಸಚಿವರನ್ನು ಆಹ್ವಾನ ಮಾಡಿದ್ದೇನೆ ಎಂದು ವಿ.ಸೋಮಣ್ಣ ಹೇಳಿದರು.
ಜೀವನದಲ್ಲಿ ಯಾರನ್ನೂ ಭೇಟಿ ಮಾಡುವ ಪರಿಸ್ಥಿತಿ ನನ್ನದಲ್ಲ. ನಾನು ಇನ್ನೊಬ್ಬರ ಹತ್ತಿರ ಹೋಗಿ ಹಲ್ಲು ಕಿಸಿದು, ನನ್ನನ್ನು ಪಾರ್ಟಿಗೆ ಸೇರಿಸಿಕೊಳ್ಳಿ ಅಂತ ಹೇಳಲ್ಲ. ನನಗೆ ಆ ಗತಿ ಬಂದಿಲ್ಲ. ನಾನು ಸೋಮಣ್ಣ. ನಾನು ಬೆಳೆದಿರುವುದು ಜೆ.ಎಚ್.ಪಟೇಲ್, ಎಚ್.ಡಿ.ದೇವೇಗೌಡ, ರಾಮಕೃಷ್ಣ ಹೆಗಡೆ ಗರಡಿಯಲ್ಲಿ. ಸ್ವಾಭಿಮಾನ, ಸಂಸ್ಕಾರ ಇಟ್ಟುಕೊಂಡು ಬದುಕಿದ್ದೇನೆ ಎಂದರು.

ಸೋಮನಹಳ್ಳಿ ಮುದುಕಿ ಕಥೆ: ನಮ್ಮ ಪಕ್ಷದಲ್ಲಿ ಒಂದು ರೀತಿ ಸೋಮನಹಳ್ಳಿ ಮುದುಕಿ ಕಥೆಯಂತಾಗಿದೆ. ನನ್ನ ಕೋಳಿಯಿಂದಲೇ ಬೆಳಕಾಗೋದು ಅಂತ ಕೆಲವರು ಅಂದುಕೊಂಡಿದ್ದಾರೆ. ಆದರೆ ಅದೆಲ್ಲ ನಡಿಯಲ್ಲ. ಮುದುಕಿ ಯಾರು? ಕೋಳಿ ಯಾರು? ಎಂದು ನೀವೇ ತೀರ್ಮಾನಿಸಿ ಎಂದು ವಿ.ಸೋಮಣ್ಣ ಸೂಚ್ಯವಾಗಿ ನುಡಿದರು.
64 ವಿದ್ಯೆಗಳಲ್ಲಿ 62 ವಿದ್ಯೆಯಷ್ಟೇ ಅವರಿಗೆ ಗೊತ್ತಿದೆ. ಅವರಿಗೆ ಸ್ವಂತ ಬುದ್ಧಿ ಇಲ್ಲ, ಬೇರೆಯವರು ಹೇಳೋದನ್ನೂ ಕೇಳಲ್ಲ. ಇವತ್ತಿನ ಪರಿಸ್ಥಿತಿ ಸೋಮನಹಳ್ಳಿ ಮುದುಕಿ ಕಥೆಯಾಗಿದೆ. ಅದನ್ನು ಡಿ.6ರ ತನಕ ಹೇಗೆ ಬಗೆಹರಿಸುತ್ತಾರೋ ನೋಡೋಣ. ಕಾಂಗ್ರೆಸ್‌ಗೆ ಹೋಗುವ ವಿಚಾರ ನನ್ನ ತಲೆಯಲ್ಲಿ ಇಲ್ಲ. ಆ ಯೋಚನೆಯೂ ಇಲ್ಲ ಎಂದರು.

ಪಕ್ಷದ ಕಚೇರಿಗೆ ಭೇಟಿ ನೀಡಲಿಲ್ಲ:
ವಿಧಾನಸಭೆ ಚುನಾವಣೆಯ ಸೋಲಿನ ಬಳಿಕ ಚಾಮರಾಜನಗರ ಕ್ಷೇತ್ರದಿಂದ ದೂರ ಉಳಿದಿದ್ದ ಮಾಜಿ ಸಚಿವ ವಿ.ಸೋಮಣ್ಣ ಗುರುವಾರ ನಗರಕ್ಕೆ ಭೇಟಿ ನೀಡಿದ್ದರು. ಈ ವೇಳೆ ತಮ್ಮ ಆಪ್ತರ ಗ್ರಾನೈಟ್ ಉದ್ಯಮವನ್ನು ಉದ್ಘಾಟಿಸಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹೊನ್ನಳ್ಳಿ ವೃಷಭೇಂದ್ರಪ್ಪ ಅವರ ತಂದೆ ಪಟೇಲ್ ಪುಟ್ಟಮಾದಯ್ಯ ನಿಧನ ಹೊಂದಿದ ಹಿನ್ನೆಲೆಯಲ್ಲಿ ಅವರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಬಿಜೆಪಿ ನಾಯಕರು ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿದರೆ ಪಕ್ಷದ ಕಚೇರಿಗೆ ಆಗಮಿಸುವ ಪದ್ಧತಿ ರೂಢಿಯಲ್ಲಿದೆ. ಆದರೆ ವಿ.ಸೋಮಣ್ಣ ಪಕ್ಷದ ಕಚೇರಿಗೆ ಭೇಟಿ ನೀಡಲಿಲ್ಲ. ಚುನಾವಣೆಯಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ವಿರುದ್ಧ ಸೋಲನುಭವಿಸಿದ ಅವರು ಆ ಸಂದರ್ಭ ಮತ ಎಣಿಕೆ ಕೇಂದ್ರಕ್ಕೆ ಹೋಗಲಿಲ್ಲ. ಬಳಿಕ ಪಕ್ಷದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕೃತಜ್ಞತಾ ಸಭೆಯಲ್ಲಿ ಭಾಗವಹಿಸಿ ತನ್ನ ಸೋಲಿಗೆ ಸ್ವಪಕ್ಷೀಯರೇ ಕಾರಣವೆಂದು ಆರೋಪಿಸಿ ಕೆಲವರ ವಿರುದ್ಧ ಹರಿಹಾಯ್ದಿದ್ದರು. ನಂತರ ಬಾಡಿಗೆ ಮನೆಯನ್ನು ಖಾಲಿ ಮಾಡಿದ್ದರು. ಮತ್ತೆ ಕ್ಷೇತ್ರದತ್ತ ಬಂದಿರಲಿಲ್ಲ. ಗುರುವಾರ ಆಪ್ತರ ಕಾರ್ಯಕ್ರಮ, ಸಾವಿನ ಮನೆ ಭೇಟಿಗಾಗಿ ಚಾಮರಾಜನಗರಕ್ಕೆ ಬಂದರು. ಬಹುದಿನಗಳ ಬಳಿಕ ವಿ.ಸೋಮಣ್ಣ ಕ್ಷೇತ್ರಕ್ಕೆ ಆಗಮಿಸಿದ್ದಕ್ಕೆ ಬೆಂಬಲಿಗರು ಸಂತಸಪಟ್ಟರು.

ಎಂ.ರುದ್ರೇಶ್ ಭೇಟಿ:
ಚಾಮರಾಜನಗರಕ್ಕೆ ಕೆಆರ್‌ಐಡಿಎಲ್ ಮಾಜಿ ಅಧ್ಯಕ್ಷ ಎಂ.ರುದ್ರೇಶ್ ಗುರುವಾರ ಭೇಟಿ ನೀಡಿದರು. ತಾಲೂಕಿನ ಹುರುಳಿನಂಜನಪುರ ಗ್ರಾಮದಲ್ಲಿ ಪ್ಲೇಗ್ ಮಾರಮ್ಮ ದೇಗುಲದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹೊನ್ನಳ್ಳಿ ವೃಷಭೇಂದ್ರಪ್ಪ ಅವರ ತಂದೆ ಪಟೇಲ್ ಪುಟ್ಟಮಾದಯ್ಯ ನಿಧನ ಹೊಂದಿದ ಹಿನ್ನೆಲೆಯಲ್ಲಿ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಮಾಜಿ ಸಚಿವ ವಿ.ಸೋಮಣ್ಣ ವೃಷಭೇಂದ್ರಪ್ಪ ಅವರ ನಿವಾಸಕ್ಕೆ ಬಂದುಹೋದ ನಂತರ ಎಂ.ರುದ್ರೇಶ್ ಭೇಟಿ ಕೊಟ್ಟರು. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ವಿ.ಸೋಮಣ್ಣಗೆ ವರುಣ ಮತ್ತು ಚಾಮರಾಜನಗರ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ವರಿಷ್ಠರು ಅವಕಾಶ ಕೊಟ್ಟ ಬೆನ್ನಲ್ಲೇ ಎಂ.ರುದ್ರೇಶ್ ಸುದ್ದಿಗೋಷ್ಠಿ ನಡೆಸಿ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಬಳಿಕ ವರಿಷ್ಠರ ಸೂಚನೆ ಮೇರೆಗೆ ಚುನಾವಣೆ ಸಂದರ್ಭದಲ್ಲಿ ಕ್ಷೇತ್ರಕ್ಕೆ ಬಂದಿರಲಿಲ್ಲ. ಆದರೆ ವಿ.ಸೋಮಣ್ಣ ಸೋತ ಬಳಿಕ ನಡೆದ ಕೃತಜ್ಞತಾ ಸಭೆಯಲ್ಲಿ ಎಂ.ರುದ್ರೇಶ್ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net