ವಿ.ಸೋಮಣ್ಣ ಕೆಂಡಾಮಂಡಲ !

17raju3
Published on

ಚಾಮರಾಜನಗರ: ನಗರದ ಜಿಲ್ಲಾ ಬಿಜೆಪಿ ನೂತನ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಕೃತಜ್ಞತಾ ಸಭೆಯಲ್ಲಿ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ, ಮಾಜಿ ಸಚಿವ ವಿ.ಸೋಮಣ್ಣ ಕೆಂಡಾಮಂಡಲವಾದರು.


ಜಿಲ್ಲಾಧ್ಯಕ್ಷ ಜಿ.ನಾರಾಯಣಪ್ರಸಾದ್ ಸಭೆಯ ಪ್ರಾರಂಭದಲ್ಲಿ ಸೋಲಿನ ಬೇಸರದ ನುಡಿಗಳನ್ನಾಡಿದರು. ಅವರ ಮಾತು ಮುಗಿಯುತ್ತಿದ್ದಂತೆಯೇ ಸೋಮಣ್ಣ ಬೆಂಬಲಿಗರು ನಾರಾಯಣಪ್ರಸಾದ್ ವಿರುದ್ಧ ಮುಗಿಬಿದ್ದರು. ಪಕ್ಷವಿರೋಧಿ ಚಟುವಟಿಕೆ ಮಾಡಿದವರ ಮೇಲೆ ಇನ್ನೂ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಸಿಟ್ಟಿಗೆದ್ದರು.

ಎಲ್ಲರನ್ನೂ ಸಮಾಧಾನಪಡಿಸಿದ ಸೋಮಣ್ಣ, ಜಿಲ್ಲಾಧ್ಯಕ್ಷರನ್ನು ಈಗ ಕೇಳಿ ಏನೂ ಪ್ರಯೋಜವಿಲ್ಲ. ಅವನು ಇಲ್ಲಿಗೆ ಬಂದು ಮನೆ ಮಾಡುತ್ತಾನೆ. ಅವನು ಕೊಡುವ ಕಾಸಿಗಾಗಿ ಕೆಲವರು ಹೋಗುತ್ತಾರೆ. ಮಠಗಳಿಗೆ ದುಡ್ಡು ಕೊಟ್ಟು ಪರ್ಸೆಂಟೇಜ್ ಕೇಳುವವನ ಮಾತು ಕೇಳುತ್ತಾರೆ. ನಾನು ಗೆದ್ದುಬಿಟ್ಟರೆ ನನ್ನ ಮಗ ಕ್ಷೇತ್ರಕ್ಕೆ ಬರುತ್ತಾನೆ, ಅಧಿಕಾರಿಗಳಿಗೆ ತೊಂದರೆ ಕೊಡ್ತಾರೆ ಅಂತ ಅಪಪ್ರಚಾರ ಮಾಡಿಸಿದ. ಜಾತಿ ಎತ್ತಿಕಟ್ಟಿದ. ಕುತಂತ್ರ ಮಾಡಲು ಅವನಿಗೆ ಯಾರು ಹೇಳಿಕೊಟ್ಟಿದ್ದಾರೆ ಎನ್ನುವುದು ನನಗೆ ಗೊತ್ತು. ಯಥಾರಾಜಾ ತಥಾಪ್ರಜಾ ಎಂದು ಸೂಚ್ಯವಾಗಿ ನುಡಿದರು.

ಸಭೆಯಲ್ಲಿ ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಆರ್.ಸುಂದರ್, ಚಾ.ನಗರ ಕ್ಷೇತ್ರದ ಬಿಜೆಪಿ ಚುನಾವಣಾ ಪ್ರಭಾರಿ ಎಂ.ಶಿವಣ್ಣ(ಕೋಟೆ), ಕಾಂಪೋಸ್ಟ್ ನಿಗಮದ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ, ನಾಗಶ್ರೀ ಪ್ರತಾಪ್, ಹನುಮಂತಶೆಟ್ಟಿ, ಕೆಲ್ಲಂಬಳ್ಳಿ ಸೋಮನಾಯಕ, ಡಾ.ಬಾಬು, ನೂರೊಂದುಶೆಟ್ಟಿ, ನಟರಾಜು ಇತರರು ಇದ್ದರು.

ಪಕ್ಷಕ್ಕೆ ಧಕ್ಕೆಯಾಗಬಾರದು ಅಂತ ಸುಮ್ಮನಿದ್ದೇನೆ:
ವೇದಿಕೆಯಲ್ಲಿದ್ದ ಪ್ರೊ.ಮಲ್ಲಿಕಾರ್ಜುನಪ್ಪ ಅವರನ್ನು ಪ್ರಶ್ನಿಸುತ್ತಾ ಮಾತನಾಡಿದ ವಿ.ಸೋಮಣ್ಣ, ಆವತ್ತು 10 ಸಾವಿರ ಜನ ಇರಲಿಲ್ಲವಾ? ಆದರೆ ‘ಅವರು’ ಎಷ್ಟೊತ್ತು ಇದ್ದರು? 15 ನಿಮಿಷ ಅಷ್ಟೇ. 60 ಕಿ.ಮೀ. ರೋಡಿನಲ್ಲಿ ಹೋಗುವುದಕ್ಕೆ ಆಗುತ್ತಿರಲಿಲ್ಲವಾ? ನನ್ನನ್ನು ಎಳೆಮಗು ಅಂದುಕೊಂಡಿದ್ದೀರಾ? ಪಕ್ಷಕ್ಕೆ ಧಕ್ಕೆಯಾಗಬಾರದೆಂದು ಸುಮ್ಮನಿದ್ದೆ ಎಂದು ಮಾರ್ಮಿಕವಾಗಿ ಆಕ್ರೋಶ ವ್ಯಕ್ತಪಡಿಸಿದರು. ಅವತ್ತು ಕೆಜೆಪಿಗೆ ಹೋಗಲ್ಲ ಅಂತ ಹೇಳಿದ್ದವನು ಸೋಮಣ್ಣ ಒಬ್ಬನೇ ಎಂದರು.
ಪಾಪಿಗಳಿಗೆ ಬೆಲೆ: ಪಕ್ಷವಿರೋಧಿ ಚಟುವಟಿಕೆ ಮಾಡಿರುವವರ ವಿರುದ್ಧ ಬೆಂಗಳೂರಿಗೆ ಹೋಗಿ ದೂರು ನೀಡುತ್ತೇವೆ ಎಂದು ಬಿಜೆಪಿ ರೈತ ಮುಖಂಡ ಅಮ್ಮನಪುರ ಮಲ್ಲೇಶ್ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸೋಮಣ್ಣ, ಸಾವಿರ ಜನರನ್ನು ಕರೆದುಕೊಂಡು ಹೋದರೂ ನಿಮಗೆ ಬೆಲೆ ಇಲ್ಲ. ಏನಿದ್ದರೂ ಪಾಪಿಗಳಿಗೆ ಬೆಲೆ. ಕಾಂಗ್ರೆಸ್‌ನಲ್ಲಿ ಇದ್ದಿದ್ದರೆ ನನ್ನ ಪರಿಸ್ಥಿತಿ ಹೇಗಿರುತ್ತಿತ್ತು ಅನ್ನೋದು ನನಗೆ ಗೊತ್ತಿತ್ತು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net