ಇಕ್ಕಟ್ಟಿನಲ್ಲಿ ಅರಿಶಿಣ ಬೆಳೆಗಾರರು

14raju9
Published on

ಚಾಮರಾಜನಗರ: ರೈತರಿಂದ ಅರಿಶಿಣ ಖರೀದಿಸಿ ಒಂದು ತಿಂಗಳು ಕಳೆದರೂ ಖರೀದಿ ಕೇಂದ್ರದಿಂದ ಇನ್ನೂ ಹಣ ಪಾವತಿಯಾಗಿಲ್ಲ. ಇದೀಗ ಮಾರುಕಟ್ಟೆಯಲ್ಲಿ ಅರಿಶಿಣಕ್ಕೆ ಉತ್ತಮ ಬೆಲೆ ಸಿಗುತ್ತಿದ್ದು, ರೈತರು ಇಕ್ಕಟ್ಟಿನಲ್ಲಿ ಸಿಲುಕುವಂತಾಗಿದೆ.

ಜಿಲ್ಲೆಯಾದ್ಯಂತ ಸುಮಾರು 13 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು ಅರಿಶಿಣ ಬೆಳೆ ಬೆಳೆಯುತ್ತಾರೆ. ಆದರೆ ಅರಿಶಿಣ ಬೆಲೆ ಕುಸಿತದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ರೈತರಿಗೆ ಖರೀದಿ ಕೇಂದ್ರಗಳು ವರದಾನವಾಗಿದ್ದವು. ಅದರಂತೆ, ಮೇ 21ರಿಂದ ಖರೀದಿ ಕೇಂದ್ರ ತೆರೆದು ರೈತರಿಂದ 22 ಸಾವಿರ ಮೆಟ್ರಿಕ್ ಟನ್ ಅರಿಶಿಣ ಖರೀದಿಸುವಂತೆ ಆದೇಶಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡಿದ್ದ ಗಡುವು ಮುಗಿದಿದ್ದರೂ ತೋಟಗಾರಿಕೆ ಇಲಾಖೆ ಖರೀದಿ ಕೇಂದ್ರಗಳನ್ನು ತೆರೆದಿರಲಿಲ್ಲ. ರೈತರ ನಿರಂತರ ಪ್ರತಿಭಟನೆಯಿಂದಾಗಿ ಜೂ. 19 ರಿಂದ ಖರೀದಿ ಕೇಂದ್ರದ ಮೂಲಕ ಸುಮಾರು 58 ರೈತರಿಂದ 1400 ಟನ್ ಅರಿಶಿಣವನ್ನು 6694 ರೂ. ಬೆಂಬಲ ಬೆಲೆ ನೀಡಿ ತೋಟಗಾರಿಕೆ ಇಲಾಖೆ ಖರೀದಿ ಮಾಡಿತ್ತು.

ಆದರೆ ರೈತರಿಂದ ಅರಿಶಿಣ ಖರೀದಿ ಮಾಡಿ ಇಷ್ಟು ದಿನವಾದರೂ ಖರೀದಿಯ ಹಣವನ್ನು ಇನ್ನೂ ನೀಡಿಲ್ಲ. ಒಂದು ಕಡೆ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದ ಅರಿಶಿಣ ಬೆಳೆಗಾರರು, ಖರೀದಿ ಹಣ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಅರಿಶಿಣ ಬೆಲೆ ದಿಢೀರ್ ಏರಿಕೆ ಕಂಡಿದ್ದು, ಬೆಳೆಗಾರರು ಅಡಕತ್ತರಿಯಲ್ಲಿ ಸಿಲುಕುವಂತೆ ಮಾಡಿದೆ.

8300 ರೂ.ಗೆ ಏರಿಕೆ: ಪೂರ್ವ ಮುಂಗಾರು ಹಂಗಾಮಿನಲ್ಲಿ ಅರಿಶಿಣ ಕ್ವಿಂಟಾಲ್‌ಗೆ 4000-5500 ರೂ. ಗೆ ಕುಸಿತ ಕಂಡಿತ್ತು. ಇದರಿಂದ ಹಾಕಿದ ಬಂಡವಾಳ ಸರಿದೂಗಿಸಲೂ ಸಾಧ್ಯವಾಗುತ್ತಿರಲಿಲ್ಲ. ಆಳುಗಳಿಗೆ ಕೂಲಿ, ರಸಗೊಬ್ಬರ ಹಾಗೂ ಸಂಸ್ಕರಣಾ ವೆಚ್ಚವನ್ನು ತಾಳೆ ಹಾಕಿದರೆ ಅರಿಶಿಣ ಬೆಳೆಗಾರರು ನಷ್ಟ ಅನುಭವಿಸುವಂತಾಗುತ್ತಿತ್ತು. ಬಳಿಕ ಖರೀದಿ ನೀತಿ, ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ (ಎಂಐಎಸ್)ಯಡಿ ಸರ್ಕಾರ ಕ್ವಿಂಟಾಲ್‌ಗೆ 6694 ರೂ. ಬೆಂಬಲ ಬೆಲೆ ನೀಡಿ ಖರೀದಿಸಿತ್ತು. ಆದರೀಗ ಮಾರುಕಟ್ಟೆಯಲ್ಲಿ ಆದ ಬದಲಾವಣೆಯಿಂದ ಅರಿಶಿಣದ ಬೆಲೆ 8300 ರೂ.ಗೆ ಏರಿಕೆ ಕಂಡಿದ್ದು, ಬೆಳೆಗಾರರು ಗೊಂದಲಕ್ಕೆ ಸಿಲುಕಿದ್ದಾರೆ. ಅರಿಶಿಣ ಖರೀದಿ ಕೇಂದ್ರಗಳನ್ನು ತೆರೆಯಿರಿ ಎಂದು ಒತ್ತಾಯ ಮಾಡುತ್ತಿದ್ದ ರೈತರಿಗೆ ಅರಿಶಿಣದ ಬೆಲೆ ಏರಿಕೆ ಕಂಡಿರುವುದು ಹರ್ಷವನ್ನು ಉಂಟು ಮಾಡಿದ್ದರೂ ಬೆಂಬಲ ಬೆಲೆಗೆ ಅರಿಶಿಣ ಮಾರಾಟ ಮಾಡಿರುವ ರೈತರಿಗೆ ಬೇಸರ ಉಂಟುಮಾಡಿದೆ.

ಹೆಚ್ಚುವರಿ ಬೆಲೆ ನೀಡುವಂತೆ ಆಗ್ರಹ: ಜಿಲ್ಲೆಯಲ್ಲಿ ಈಗಾಗಲೇ ಸರ್ಕಾರಕ್ಕೆ ಅರಿಶಿಣ ಮಾರಾಟ ಮಾಡಿರುವ ರೈತರು, ಅರಿಶಿಣ ಬೆಂಬಲ ಬೆಲೆ ಜತೆಗೆ ಹೆಚ್ಚುವರಿ ಬೆಲೆಯನ್ನು ನೀಡುವಂತೆ ಆಗ್ರಹಿಸಿದ್ದಾರೆ. ಸುಮಾರು 2 ವರ್ಷಗಳಿಂದಲೂ ಅರಿಶಿಣ ಬೆಳೆಗಾರರು ಬೆಳೆಗೆ ಉತ್ತಮ ಬೆಲೆ ಸಿಗದೆ ಸಂಕಷ್ಟ ಅನುಭವಿಸುತ್ತ ಬಂದಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ 58 ರೈತರಿಂದ ಖರೀದಿಸಿರುವ ಅರಿಶಿಣಕ್ಕೆ ಸುಮಾರು 92 ಲಕ್ಷ ರೂ.ಗಳನ್ನು ಕೂಡಲೇ ನೀಡಬೇಕಾಗಿದೆ. ಆದರೀಗ ಅರಿಶಿಣದ ಬೆಲೆ ಹೆಚ್ಚಾಗಿರುವುದರಿಂದ ಇದರ ಜತೆಗೆ ಹೆಚ್ಚುವರಿ ಬೆಲೆಯನ್ನು ನಿಗದಿ ಮಾಡಬೇಕು. ಇಲ್ಲದಿದ್ದರೆ ನಮ್ಮಿಂದ ಖರೀದಿ ಮಾಡಿರುವ ಅರಿಶಿಣವನ್ನು ವಾಪಸ್ ಮಾಡಬೇಕು ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಒತ್ತಾಯಿಸಿದ್ದಾರೆ.

ಸರ್ಕಾರ ರೈತರಿಂದ ಖರೀದಿಸಿರುವ ಅರಿಶಿಣಕ್ಕೆ ಕೂಡಲೇ ಹಣ ಬಿಡುಗಡೆ ಮಾಡಬೇಕು. ಮಾರುಕಟ್ಟೆಯಲ್ಲಿ ಆದ ಬದಲಾವಣೆಯಿಂದ ಅರಿಶಿಣ ಬೆಲೆ ಏರಿಕೆ ಕಂಡಿದ್ದು, ಬೆಂಬಲ ಬೆಲೆಯ ಜತೆಗೆ ಹೆಚ್ಚುವರಿ ಬೆಲೆಯನ್ನು ನಿಗದಿ ಮಾಡಬೇಕು.-ನಾಗಾರ್ಜುನ್ ಕುಮಾರ್, ರಾಜ್ಯ ಅರಿಶಿಣ ಬೆಳೆಗಾರರ ಪ್ರತಿನಿಧಿ, ಚಾಮರಾಜನಗರ ಖರೀದಿ ಪ್ರಕ್ರಿಯೆ ಮುಕ್ತಾಯಗೊಂಡಿರುವುದರಿಂದ ಬೆಂಬಲ ಬೆಲೆಯಲ್ಲಿ ಏರಿಕೆ ಸಾಧ್ಯವಿಲ್ಲ. 15-20 ದಿನಗಳಲ್ಲಿ ಪೇಮೆಂಟ್ ಆಗಬೇಕಿತ್ತು. ಸದನ ಇರುವುದರಿಂದ ತಡವಾಗಿರಬಹುದು. ಇನ್ನು 1 ವಾರದಲ್ಲಿ ಹಣ ಬಿಡುಗಡೆಯಾಗುವ ಸಾಧ್ಯತೆ ಇದೆ. -ಶಿವಪ್ರಸಾದ್, ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net