

ಚಾಮರಾಜನಗರ: ಜಿಲ್ಲೆಯಲ್ಲಿ ಮೊದಲ ಬಾರಿಗೆ ಆಯೋಜಸಿದ್ದ ಸಾಹಸ ಜಲ ಕ್ರೀಡೆ ಕಾರ್ಯಕ್ರಮಕ್ಕೆ ಉತ್ತಮ ಜನಸ್ಪಂದನೆ ದೊರೆಯಿತು. ಮೋಟಾರ್ ಬೋಟಿಂಗ್ ಮಾಡುವ ಮೂಲಕ ಯುವಕರು ಹಾಗೂ ಯುವತಿಯರು ಖುಷಿಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಸಹಯೋಗದಲ್ಲಿ ಶುಕ್ರವಾರ ತಾಲೂಕಿನ ಅಟ್ಟುಗೂಳಿಪುರ ಗ್ರಾಮದ ಬಳಿ ಇರುವ ಸುವರ್ಣಾವತಿ ಜಲಾಶಯ ಹಿನ್ನೀರಿನಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಜಲ ಸಾಹಸ ಕ್ರೀಡೆ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂವಿತಾ ಹಾಗೂ ಅಪರ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ ಸುವರ್ಣಾವತಿ ಹಿನ್ನೀರಿನಲ್ಲಿ ಪೂಜೆ ಸಲ್ಲಿಸುವುದರ ಮೂಲಕ ಚಾಲನೆ ನೀಡಿದರು.
ಸಿಇಒ ಪೂವಿತಾ ಮಾತನಾಡಿ, ಜಿಲ್ಲೆಯಲ್ಲಿ ಪ್ರವಾಸೋದ್ಯಮ ಹಾಗೂ ಅರಣ್ಯ ಸಂಚಾರ ಹಾಗೂ ಜಲಕ್ರೀಡೆ ಕಾರ್ಯಕ್ರಮ ಆಯೋಜಿಸಲು ತುಂಬಾ ಅವಕಾಶಗಳು ಇದೆ. ಮೊದಲನೇ ಬಾರಿ ಜಿಲ್ಲೆಯಲ್ಲಿ ಜಲಕ್ರೀಡೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮ ಆಯೋಜನೆಗೆ ಸ್ಥಳೀಯ ಗ್ರಾಪಂ ಹಾಗೂ ಎಲ್ಲ ಇಲಾಖೆಗಳು ಸಹಕಾರ ನೀಡಿದೆ. ಕ್ರೀಡಾ ಇಲಾಖೆಯ ಅಧಿಕಾರಿಗಳ ಜತೆಗೆ ಮಾತನಾಡಿ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಆಯೋಜನೆ ಮಾಡುತ್ತೇವೆ ಎಂದರು.
ಸುತ್ತ ಮುತ್ತಲಿನ ಜಿಲ್ಲೆಗಳಲ್ಲಿ ಪ್ರವಾಸೋದ್ಯಮಕ್ಕೆ ಉತ್ತಮ ಸ್ಪಂದನೆ ಸಿಗುತ್ತಿದೆ. ಚಾ.ನಗರದಲ್ಲಿ ಕುಂಟುತ್ತಾ ಸಾಗುತ್ತಿದೆ. ಈಗ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮಗಳನ್ನು ಶುರು ಮಾಡಿದ್ದೇವೆ. ಇನ್ನು 5-10 ವರ್ಷಗಳಲ್ಲಿ ಜಿಲ್ಲೆಯನ್ನು ಪ್ರವಾಸೋದ್ಯಮಕ್ಕೆ ಉತ್ತಮ ಕೇಂದ್ರವಾಗಿಸುತ್ತೇವೆ. ರಾಷ್ಟ್ರೀಯ ಅಕಾಡೆಮಿ ಜತೆಯೂ ಚರ್ಚಿಸಲಾಗಿದ್ದು, ಕೆಲವು ಸಾಹಸಿ ಯುವಕರ ತಂಡವನ್ನು ರಚಿಸಿ, ಸಾಹಸ ಜಲಕ್ರೀಡೆಯನ್ನು ನಿರಂತರವಾಗಿ ಆಯೋಜನೆ ಮಾಡುತ್ತೇವೆ. ಜಿಲ್ಲೆಯ ಯುವಕ, ಯುವತಿಯರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಎಡಿಸಿ ಕಾತ್ಯಾಯಿನಿದೇವಿ ಮಾತನಾಡಿ, ಜಿಲ್ಲೆಯಲ್ಲಿ ಸಾಹಸ ಕ್ರೀಡೆಗಳಿಗೆ ಉತ್ತಮ ಅವಕಾಶವಿದೆ. ವಿವಿಧ ಕಡೆಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಯುವ ಜನಾಂಗವನ್ನು ಪ್ರೋತ್ಸಾಹಿಸಬಹುದು. ಬೆಟ್ಟಗುಡ್ಡಗಳಲ್ಲಿ ಟ್ರಕ್ಕಿಂಗ್, ಜಿಪ್‌ಲೈನ್‌ನಂತಹ ಸಾಹಸ ಕ್ರೀಡೆಗಳನ್ನು ಆಯೋಜಿಸಬಹುದಾಗಿದ್ದು, ಇದರಿಂದ ಉದ್ಯೋಗಾವಕಾಶಗಳು ದೊರೆಯುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಅಟ್ಟುಗೂಳಿಪುರ ಗ್ರಾ.ಪಂ ಅಧ್ಯಕ್ಷೆ ಸಿ.ವಿಮಲಾ, ಉಪಾಧ್ಯಕ್ಷ ಎಸ್.ಮರಿಸ್ವಾಮಿ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಆರ್.ಅನಿತಾ, ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿ ವ್ಯವಸ್ಥಾಪಕ ಶಬ್ಬೀರ್, ಮುನಿರಾಜು, ದಿನೇಶ್, ಎಸ್.ಎಂ.ವಿನಾಯಕ, ಆದಂ ಪಾಷಾ, ಅಬ್ದುಲ್ಲಾ, ಕಿರಣ್ ಸೇರಿದಂತೆ ಇತರರರು ಭಾಗವಹಿಸಿದ್ದರು.
ಬೋಟಿಂಗ್‌ಗೆ ಮುಗಿಬಿದ್ದ ಯುವಕರು: ಸುವರ್ಣಾವತಿ ಜಲಾಶಯದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಿದ್ದ ಸಾಹಸ ಜಲಕ್ರೀಡೆಯಲ್ಲಿ ಬೋಟಿಂಗ್ ಹಾಗೂ ರ‌್ಯಾಫ್ಟಿಂಗ್ ಮಾಡಲು ಜನರು ಮುಗಿಬಿದ್ದರು. ಜಲಕ್ರೀಡೆಯಲ್ಲಿ ಜೆಟ್ಸ್ ಕೀ, ಮೋಟಾರ್ ಬೋಟ್, ಸ್ಪೀಡ್ ಬೋಟ್, ಕಯಾಕಿಂಗ್, ಬನಾನಾ ಬೋಟ್ ರೈಡ್‌ಗಳಲ್ಲಿ ಯುವಕ, ಯುವತಿಯರು ಹಾಗೂ ಸಾಕಷ್ಟು ಜನರು ಕುಟುಂಬ ಸಮೇತ ಉತ್ಸಾಹದಿಂದ ಭಾಗವಹಿಸಿದ್ದರು. ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯ ಸುಮಾರು 10 ತರಬೇತುದಾರರು ಬೋಟಿಂಗ್ ರೈಡ್‌ನಲ್ಲಿ ಜತೆಯಾಗಿ ಮಾರ್ಗದರ್ಶನ ನೀಡಿದರು.
ಜೆಟ್ಸ್ ಕೀ ಓಡಿಸಿದ ಎಡಿಸಿ:ಜಿಲ್ಲಾ ಮಟ್ಟದ ಜಲ ಸಾಹಸ ಕ್ರೀಡೆಯಲ್ಲಿ ಭಾಗವಹಿಸಿದ್ದ ಎಡಿಸಿ ಕಾತ್ಯಾಯಿನಿದೇವಿ ಜೆಟ್ಸ್ ಕೀ ಚಲಾಯಿಸುವ ಮೂಲಕ ಅಧಿಕಾರಿಗಳು ಹಾಗೂ ಯುವಕರಲ್ಲಿ ಉತ್ಸಾಹ ತುಂಬಿದರು. ಸಿಇಒ ಪೂವಿತಾ ಹಾಗೂ ಇತರ ಅಧಿಕಾರಿಗಳು ಮೋಟಾರ್ ಬೋಟಿಂಗ್‌ನಲ್ಲಿ ಪಾಲ್ಗೊಂಡರು.