

ಚಾಮರಾಜನಗರ: ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ಜೂನ್ 14 ರಿಂದ 22 ರವರೆಗೆ ನಡೆಯಲಿದ್ದು, ಒಟ್ಟು 3219 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದಾರೆ.
ನೋಂದಾಯಿತ ಅಭ್ಯರ್ಥಿಗಳಲ್ಲಿ 2960 ಪುನರಾವರ್ತಿತ, 233 ಫಲಿತಾಂಶ ಸುಧಾರಣೆಗಾಗಿ ಮತ್ತು 36 ಹೊಸ ಖಾಸಗಿ ಅಭ್ಯರ್ಥಿಗಳು ಒಳಗೊಂಡಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 12 ಪರೀಕ್ಷಾ ಕೇಂದ್ರಗಳನ್ನು ರಚಿಸಲಾಗಿದ್ದು, ಪ್ರಶ್ನೆ ಪತ್ರಿಕೆ ವಿತರಣೆಗೆ 7 ಮಾರ್ಗಗಳನ್ನು ರಚಿಸಿ ಮಾರ್ಗಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಅಗತ್ಯ ಸೌಲಭ್ಯಗಳನ್ನು ಪರೀಕ್ಷಾ ಕೆಂದ್ರಗಳು ಹೊಂದಿರುವ ಬಗ್ಗೆ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಮೂಲಕ ಪರಿಶೀಲಿಸಿ ಖಚಿತ ಪಡಿಸಿಕೊಳ್ಳಲಾಗಿದೆ. ಒಟ್ಟು 12 ಪರೀಕ್ಷಾ ಕೇಂದ್ರಗಳ ಅಗತ್ಯವಿದ್ದು, ಪರೀಕ್ಷಾ ಕೊಠಡಿಗಳಲ್ಲಿ ಸಿ.ಸಿ ಕ್ಯಾಮರಾ ಅಳವಡಿಸಲಾಗಿದೆ. ಪರೀಕ್ಷಾ ಕಾರ್ಯವು ಪಾರದರ್ಶಕವಾಗಿ ನಡೆಯುತ್ತಿರುವುದನ್ನು ಖಚಿತ ಪಡಿಸಿಕೊಳ್ಳಲು ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಕೇಂದ್ರೀಕೃತವಾಗಿ ವೆಬ್ ಕಾಸ್ಟಿಂಗ್ ಮಾಡಲು ಕ್ರಮವಹಿಸಲಾಗಿದೆ.
ಪರೀಕ್ಷಾ ಸಂಬಂಧ ಪೂರ್ವ ಸಿದ್ಧತೆ ಕುರಿತು ಜಿಲ್ಲಾಧಿಕಾರಿ ಶಿಲ್ಪಾನಾಗ್ ಅಗತ್ಯ ಸೂಚನೆ ನೀಡಿದ್ದಾರೆ. ಪರೀಕ್ಷೆ 2ಕ್ಕೆ ನೋಂದಾಯಿಸಿರುವ ವಿದ್ಯಾರ್ಥಿಗಳು ತಪ್ಪದೆ ಹಾಜರಾಗಲು ಸಂಬಂಧಿಸಿದ ಪ್ರೌಢಶಾಲಾ ಮುಖ್ಯಶಿಕ್ಷಕರು ಅಗತ್ಯ ಕ್ರಮವಹಿಸಬೇಕು. ಪರೀಕ್ಷಾ ಕೇಂದ್ರಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತೊಮ್ಮೆ ಖುದ್ದು ಭೇಟಿ ನೀಡಿ ಮೂಲ ಸೌಲಭ್ಯಗಳು ಸುಸ್ಥಿತಿಯಲ್ಲಿರುವುದನ್ನು ಖಾತರಿ ಪಡಿಸಿಕೊಳ್ಳಬೇಕು. ಪರೀಕ್ಷಾ ಕೇಂದ್ರದ ನಕ್ಷೆ, ಆಸನದ ವ್ಯವಸ್ಥೆ ಹಾಗೂ ಅಗತ್ಯ ಸೂಚನೆಗಳನ್ನು ವಿದ್ಯಾರ್ಥಿಗಳಿಗೆ ಕಾಣಿಸುವಂತೆ ಪರೀಕ್ಷಾ ಕೇಂದ್ರದ ಆವರಣದಲ್ಲಿ ಸೂಕ್ತ ರೀತಿಯಲ್ಲಿ ಪ್ರಕಟಿಸಿ ಪರೀಕ್ಷಾರ್ಥಿ ಸ್ನೇಹಿ ವಾತಾವರಣ ನಿರ್ಮಿಸಬೇಕು ಎಂದು ತಿಳಿಸಿದ್ದಾರೆ.
ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗಳಿಗೆ ನೆಲಮಹಡಿಯಲ್ಲಿ ಆಸನದ ವ್ಯವಸ್ಥೆ ಕಲ್ಪಿಸಬೇಕು ಹಾಗೂ ನಿಯಮಾನುಸಾರ ಹೆಚ್ಚುವರಿ ಕಾಲಾವಕಾಶ ನೀಡಬೇಕು. ಕೊಠಡಿಗಳಲ್ಲಿ ಮತ್ತು ಕಾರಿಡಾರ್‌ನಲ್ಲಿ ಸಿಸಿ ಕ್ಯಾಮರಾ ಅಳವಡಿಸಿರಬೇಕು ಮತ್ತು ಪರೀಕ್ಷಾ ದಿನಗಳಂದು ನಿರಂತರವಾಗಿ ಕಾರ್ಯನಿರ್ವಹಿಸುತ್ತಿರಬೇಕು. ಪರೀಕ್ಷೆ ನಡೆಯುವ ವೇಳೆ ಅನವಶ್ಯಕ ಹಾಗೂ ಉದ್ದೇಶಪೂರ್ವಕವಾಗಿ ಸಿ.ಸಿ ಕ್ಯಾಮರಾ ಸ್ವಿಚ್‌ಆಫ್ ಮಾಡಿದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.
ಪರೀಕ್ಷಾ ಅವಧಿಯಲ್ಲಿ ಪರೀಕ್ಷಾ ಕೇಂದ್ರವಿರುವ ಪ್ರದೇಶದಲ್ಲಿ ನಿರಂತರ ವಿದ್ಯುತ್ ಸರಬರಾಜಿಗೆ ಸೆಸ್ಕ್ ಅಧಿಕಾರಿಗಳು ಕ್ರಮವಹಿಸಬೇಕು. ಪರೀಕ್ಷಾ ಕೇಂದ್ರಗಳಿಗೆ ಆರೋಗ್ಯ ಇಲಾಖೆ ವತಿಯಿಂದ ಔಷಧೋಪಚಾರಗಳೊಂದಿಗೆ ಶುಶ್ರೂಷಕಿಯರನ್ನು ನಿಯೋಜಿಸಬೇಕು. ವಿದ್ಯಾರ್ಥಿಗಳು ಪರೀಕ್ಷಾ ಪ್ರವೇಶ ಪತ್ರವನ್ನು ಹಾಜರುಪಡಿಸಿ ಉಚಿತವಾಗಿ ಪ್ರಯಾಣಿಸಲು ಸಾರಿಗೆ ನಿಗಮದ ಅಧಿಕಾರಿಗಳು ಅವಕಾಶ ನೀಡಬೇಕು. ಪರೀಕ್ಷಾ ಅಕ್ರಮದಲ್ಲಿ ತೊಡಗುವವರು, ಪ್ರೇರಣೆ ನೀಡುವವರು ಹಾಗೂ ಸುಳ್ಳು ಸುದ್ದಿ ವದಂತಿಗಳನ್ನು ಹರಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ರೀತ್ಯ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.