ಖಾಸಗಿ-ಸರ್ಕಾರಿ ಶಾಲೆ ನಡುವೆ ತಾರತಮ್ಯ ಬೇಡ

24raju6
Published on

ಚಾಮರಾಜನಗರ: ಖಾಸಗಿ ಮತ್ತು ಸರ್ಕಾರಿ ಶಾಲೆ ಎಂಬ ತಾರತಮ್ಯ ಬೇಡ. ಸರ್ಕಾರಿ ಶಾಲೆಯಲ್ಲೂ ಕೂಡ ಉತ್ತಮ ಶಿಕ್ಷಣ ದೊರೆಯುತ್ತಿದೆ ಎಂದು ರಾಮಸಮುದ್ರ ಪೂರ್ವ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಶ್ರೀಕಾಂತ್ ಹೇಳಿದರು.

ತಾಲೂಕಿನ ಮಲ್ಲೂಪುರ ಸರ್ಕಾರಿ ಶಾಲೆಯಲ್ಲಿ ಎ.ಆರ್.ಎಸ್.ಟ್ರಸ್ಟ್, ಕಾವೇರಿ ಡೆಂಟಲ್ ಮತ್ತು ಓರಲ್ ಮೆಡಿಸನ್ ಕ್ಲಿನಿಕ್ ವತಿಯಿಂದ ಶನಿವಾರ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದವರು ಸರ್ಕಾರಿ ನೌಕರರಾಗಿದ್ದು ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಪರೀಕ್ಷೆಗಳನ್ನು ಬರೆದು ಮೆರಿಟ್ ಆಧಾರದಲ್ಲಿ ಆಯ್ಕೆಗೊಂಡ ಪರಿಣಿತ ಶಿಕ್ಷಕರಿದ್ದು, ಉತ್ತಮ ಪಾಠಪ್ರವಚನ ಹೇಳಿಕೊಡುತ್ತಿದ್ದಾರೆ. ಅಲ್ಲದೆ ಪ್ರತಿಭಾವಂತ ಮಕ್ಕಳು ಯಾವ ಶಾಲೆಯಲ್ಲಿ ವ್ಯಾಸಂಗ ಮಾಡಿದರೂ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುತ್ತಾರೆ. ಹಾಗಾಗಿ ಮುಂದೆ ದೇಶದ ಪ್ರಜೆಗಳಾಗುವ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಬೇಕಾದ ಕರ್ತವ್ಯ ಪಾಲಕರು, ಶಿಕ್ಷಕರ ಮೇಲಿದೆ ಎಂದರು.

ದೊಡ್ಡರಾಯಪೇಟೆ ಗ್ರಾಮದ ನಿವೃತ್ತ ಉಪನ್ಯಾಸಕ ದಿವಗಂತ ರಂಗಸ್ವಾಮಿ ಅವರ ಮೂವರು ಪುತ್ರರು ತಂದೆ ಹೆಸರಿನಲ್ಲಿ ಎ.ಆರ್.ಎಸ್. ಟ್ರಸ್ಟ್ ಸ್ಥಾಪನೆ ಮಾಡಿಕೊಂಡು ಸಮಾಜಮುಖಿ ಸೇವಾ ಕಾರ್ಯಕ್ರಮವನ್ನು ಕಳೆದ 2 ವರ್ಷಗಳಿಂದ ಮಾಡಿಕೊಂಡು ಬರುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ಟ್ರಸ್ಟ್‌ನ ಸೇವಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಎಆರ್‌ಎಸ್ ಟ್ರಸ್ಟ್‌ನ ಅಧ್ಯಕ್ಷ ಕೃಪಾಶಂಕರ್ ಮಾತನಾಡಿ, ತಂದೆಯವರು ಸೇವೆ ಸಲ್ಲಿಸಿರುವ ಶಾಲೆಗಳು ಅಭಿವೃದ್ಧಿ ಹೊಂದಿದ್ದು, ಅವರಿಂದ ಶಿಕ್ಷಣ ಕಲಿತ ಅನೇಕ ವಿದ್ಯಾರ್ಥಿಗಳು ಸರ್ಕಾರಿ ನೌಕರರಾಗಿದ್ದು, ರಾಜ್ಯದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ತಂದೆಯವರ ಸೇವಾ ಕಾರ್ಯದಿಂದ ಪ್ರೇರಣೆಗೊಂಡು ನಮ್ಮ ಮೂವರು ಸಹೋದರರು ಸೇರಿಕೊಂಡು ತಂದೆಯವರ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿಕೊಂಡು ಕಳೆದ 2 ವರ್ಷಗಳಿಂದ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗಿದೆ ಎಂದರು.

ಸಬ್ಇನ್ಸ್‌ಪೆಕ್ಟರ್ ಸಿ.ಕೆ.ಮಹೇಶ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಮಂಗಳಮ್ಮ, ಯ.ರಾಜು, ಎ.ಆರ್‌ಎಸ್.ಟ್ರಸ್ಟ್ ಕಾರ್ಯದರ್ಶಿ ವಕೀಲ ಅರುಣ್‌ಕುಮಾರ್, ಗ್ರಾಪಂ ಸದಸ್ಯರಾದ ನಾಗಶೆಟ್ಟಿ, ಸಿದ್ದರಾಜು, ಮಾಜಿ ಸದಸ್ಯ ಮೂರ್ತಿ, ಮುಖ್ಯ ಶಿಕ್ಷಕ ನಟರಾಜು, ಶಿಕ್ಷಕಿ ಪವಿತ್ರಾ, ರವಿಗೌಡ, ಬಾಲರಾಜ್, ಬಸವಲಿಂಗ, ಆಟೋ ರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net