

ಚಾಮರಾಜನಗರ: ಮಕರ ಸಂಕ್ರಾಂತಿ ಹಬ್ಬವನ್ನು ಜಿಲ್ಲಾದ್ಯಂತ ಸಡಗರದಿಂದ ಆಚರಣೆ ಮಾಡಲಾಯಿತು. ಚಾಮರಾಜನಗರ, ಗುಂಡ್ಲುಪೇಟೆ, ಹನೂರು, ಯಳಂದೂರು, ಕೊಳ್ಳೇಗಾಲ ತಾಲೂಕುಗಳಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು.
ಕಳೆದ ವರ್ಷ ಕೋವಿಡ್‌ನಿಂದಾಗಿ ಸಂಕ್ರಾಂತಿ ಹಬ್ಬವನ್ನು ಸರಳವಾಗಿ ಆಚರಣೆ ಮಾಡಲಾಗಿತ್ತು. ಈ ವರ್ಷ ಯಾವುದೇ ಅಡೆತಡೆಗಳು ಇಲ್ಲದ ಕಾರಣ ಸುಗ್ಗಿ ಸಂಭ್ರಮ ಜೋರಾಗಿತ್ತು. ಭಾನುವಾರ ಮುಂಜಾನೆಯೇ ಕುಟುಂಬ ಸಮೇತ ದೇಗುಲಗಳಿಗೆ ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಗರದ ಶ್ರೀ ಚಾಮರಾಜೇಶ್ವರ, ವೀರಭದ್ರೇಶ್ವರ, ಕಾಡು ನಾರಾಯಣಸ್ವಾಮಿ, ಕೊಳದ ಬೀದಿಯ ಆಂಜನೇಯಸ್ವಾಮಿ, ಹರಳಕೋಟೆ ಆಂಜನೇಯ, ಜನಾರ್ದನಸ್ವಾಮಿ ಸೇರಿದಂತೆ ಹಲವು ದೇಗುಲಗಳಿಗೆ ಭಕ್ತರ ದಂಡು ಹರಿದುಬಂದಿತ್ತು.
ನಗರದ ರಾಮಸಮುದ್ರದಲ್ಲಿರುವ ಹರಳಕೋಟೆ ಜನಾರ್ದನಸ್ವಾಮಿ ದೇವಸ್ಥಾನದಲ್ಲಿ ಪ್ರತಿ ದಿನ ಸಂಜೆ ವೇಳೆಗೆ ಸಪ್ತದ್ವಾರಗಳನ್ನು ದಾಟಿ ದೇವರ ಮೂರ್ತಿಯನ್ನು ಸೂರ್ಯ ರಶ್ಮಿ ಸ್ಪರ್ಶಿಸುವುದು ವಿಶೇಷ. ಭಕ್ತರು ಈ ವಿಸ್ಮಯವನ್ನು ಕಣ್ತುಂಬಿಕೊಂಡು ಪುನೀತರಾಗುತ್ತಾರೆ. ಸಂಕ್ರಾಂತಿ ಹಬ್ಬದ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿತು. ಗ್ರಾಮಾಂತರ ಪ್ರದೇಶಗಳಲ್ಲಿ ರೈತರು ಗೋವುಗಳಿಗೆ ಸಿಂಗರಿಸಿ ಕಿಚ್ಚು ಹಾಯಿಸಿ ಸುಗ್ಗಿ ಹಬ್ಬ ಮಾಡಿದರು. ಕೆಲವು ಕಡೆಗಳಲ್ಲಿ ಮಾಂಸಾಹಾರ ತಯಾರಿಸಿ ಪೂರ್ವಿಕರಿಗೆ ಎಡೆ ಇಟ್ಟು ಪೂಜೆ ಸಲ್ಲಿಸಲಾಯಿತು.