ನಗರದಾದ್ಯಂತ ತುಂತುರು ಮಳೆ

6raju4
Published on

ಚಾಮರಾಜನಗರ: ನಗರದಾದ್ಯಂತ ಗುರುವಾರ ಮೋಡ ಕವಿದ ವಾತಾವರಣವಿದ್ದು, ತುಂತುರು ಮಳೆಯಾಗಿದ್ದರಿಂದ ಜನಜೀವನ ಸ್ವಲ್ಪ ಅಸ್ತವ್ಯಸ್ತವಾಗಿತ್ತು.
ನಗರದ ಬಿ.ರಾಚಯ್ಯ ಜೋಡಿರಸ್ತೆ, ದೊಡ್ಡಂಗಡಿ, ಚಿಕ್ಕಂಗಡಿ ಬೀದಿ, ಡಿವಿಯೇಷನ್ ರಸ್ತೆಯಲ್ಲಿ ಮಧ್ಯಾಹ್ನದಿಂದ ಹಿಡಿದ ಜಿಟಿ ಮಳೆಗೆ ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ಕಿರಿಕಿರಿ ಅನುಭವಿಸಿದರು. ಬೆಳಗ್ಗೆಯಿಂದಲೂ ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನದ ವೇಳೆಗೆ ಹಿಡಿದ ಮಳೆ ಸಂಜೆಯ ತನಕವೂ ಮುಂದುವರಿಯಿತು.
ಗ್ರಾಮಾಂತರ ಪ್ರದೇಶದಲ್ಲಿ ದಿಢೀರ್ ಮಳೆಯಿಂದಾಗಿ ರೈತಾಪಿ ವರ್ಗ ಸಂತಸಗೊಂಡಿದೆ. ತಾಲೂಕಿ ಹರದನಹಳ್ಳಿ, ಚಂದಕವಾಡಿ ಹೋಬಳಿ ವ್ಯಾಪ್ತಿಯಲ್ಲಿ ಮಳೆಯಾಗಿದ್ದು, ಈಗಾಗಲೇ ಬಿತ್ತನೆ ಮಾಡಿರುವ ರೈತರಿಗೆ ಅನುಕೂಲವಾಗಲಿದೆ. ಬೀದಿಬದಿ ವ್ಯಾಪಾರಿಗಳು ಹಾಗೂ ಕೂಲಿ ಕಾರ್ಮಿಕರಿಗೆ ಸಮಸ್ಯೆಯಾಯಿತು.
ಅವಳಿ ಜಲಾಶಯಗಳಿಗೆ ಬಲ:
ಜಿಲ್ಲೆಯ ಹಲವು ಕಡೆ ಮಳೆಯಾಗುತ್ತಿದ್ದು ಅವಳಿ ಜಲಾಶಯಗಳಾದ ಸುವರ್ಣಾವತಿ ಹಾಗೂ ಚಿಕ್ಕಹೊಳೆ ಜಲಾಶಯಗಳಿಗೆ ನೀರು ಹರಿದು ಬರಲಿದೆ. ಸುವರ್ಣಾವತಿ ಕಾಲುವೆಗಳಲ್ಲಿ ಹೆಚ್ಚಾಗಿ ನೀರು ಹರಿಯುತ್ತಿದ್ದು, ಮಳೆ ಮುಂದುವರಿದರೆ ಜಲಾಶಯಗಳು ಭರ್ತಿಯಾಗುವ ಸಾಧ್ಯತೆಯೂ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net