ಯುವಜನರ ಪ್ರತಿಭೆ ಅನಾವರಣವಾಗಲಿ

07raju6
Published on

ಚಾಮರಾಜನಗರ: ಯುವಜನೋತ್ಸವದಂತಹ ವೇದಿಕೆಗಳನ್ನು ಪ್ರತಿಭೆ ಅನಾವರಣಕ್ಕೆ ಪೂರಕವಾಗಿ ಬಳಸಿಕೊಳ್ಳಿ ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಸಲಹೆ ಮಾಡಿದರು.


ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಬುಧವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಯುವಜನರ ಸಾಧನೆ, ಪ್ರತಿಭೆ ಅನಾವರಣಕ್ಕೆ ಯುವಜನೋತ್ಸವ ಉತ್ತಮ ಅವಕಾಶವಾಗಿದೆ. ಯುವಜನರು ತಮ್ಮ ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುವ ಕಾರ್ಯಕ್ರಮಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಜಿಲ್ಲೆ ಜಾನಪದ ಕಲೆಗಳಿಗೆ ಹೆಸರಾಗಿದೆ. ಅನೇಕ ಪ್ರತಿಭಾವಂತ ಕಲಾವಿದರು ಇದ್ದಾರೆ. ಇಂತಹ ಜಾನಪದ ಕಲೆಗಳ ತವರೂರಿನಲ್ಲಿ ಯುವಜನರು ಹೆಚ್ಚಿನ ಸಾಧನೆ ಮಾಡಬೇಕೆಂದು ಸಲಹೆ ನೀಡಿದರು.

ಕಾವೇರಿ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಜಿ. ನಿಜಗುಣರಾಜು ಮಾತನಾಡಿ, ಯುವಕರು ರಾಷ್ಟ್ರದ ಸಂಪತ್ತು. ಸ್ವಾಮಿ ವಿವೇಕಾನಂದರು ಯುವಶಕ್ತಿಯ ಬಗ್ಗೆ ಹೆಚ್ಚು ಹೇಳಿದ್ದಾರೆ. ಭಾರತೀಯ ಸಾಹಿತ್ಯ, ಸಂಸ್ಕೃತಿ ಕಲೆಯ ಮಹತ್ವದ ಬಗ್ಗೆ ಯುವಜನರು ಹೆಚ್ಚು ಪ್ರಚುರಪಡಿಸಬೇಕು. ಗ್ರಾಮೀಣ ಕಲೆಗಳ ಬಗ್ಗೆ ಆಸಕ್ತಿ ಹೊಂದಬೇಕು. ಅಲ್ಲದೆ, ಪ್ರೋತ್ಸಾಹ ನೀಡಬೇಕು ಎಂದರು. ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಮಾತನಾಡಿ, ಯುವಜನರು ದೇಶದ ಶಕ್ತಿ. ಯುವಪೀಳಿಗೆ ದೈಹಿಕ, ಮಾನಸಿಕ ಆರೋಗ್ಯಕ್ಕೆ ಒತ್ತು ನೀಡಿದರೆ ದೇಶದ ಪ್ರಗತಿ ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.
ನಗರಸಭೆ ಅಧ್ಯಕ್ಷೆ ಆಶಾ ನಟರಾಜು ಮಾತನಾಡಿ, ಯುವ ಪ್ರತಿಭೆಗಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿಯೂ ತಮ್ಮ ಕಲೆ ಸಂಸ್ಕೃತಿ ಪ್ರದರ್ಶನದ ಮೂಲಕ ಜಿಲ್ಲೆಗೆ ಕೀರ್ತಿ ತರಬೇಕೆಂದು ಆಶಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ. ಗಾಯತ್ರಿ, ರಂಗಕರ್ಮಿ ವೆಂಕಟರಾಜು, ಸಿ.ಎಂ. ನರಸಿಂಹಮೂರ್ತಿ, ಸುರೇಶ್ ಋಗ್ವೇದಿ, ಮುದ್ದಪ್ಪ, ರಜೂಲ್, ಕ್ರೀಡಾಂಗಣ ಸಮಿತಿ ಸದಸ್ಯರಾದ ಶ್ರೀನಿವಾಸಪ್ರಸಾದ್, ಬಸವರಾಜು ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net