

ಚಾಮರಾಜನಗರ: ವಿಧಾನಸಭಾ ಚುನಾವಣೆಯಲ್ಲಿ ನಾಲ್ಕನೇ ಬಾರಿಗೆ ಗೆಲುವು ದಾಖಲಿಸಿರುವ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರನ್ನು ಬುಧವಾರ ನಗರದ ರಾಮಸಮುದ್ರದ (30ನೇ ವಾರ್ಡ್) ಡಾ.ಬಾಬು ಜಗಜೀವನ ರಾಂ ಬಡಾವಣೆಯ ಕಾಂಗ್ರೆಸ್ ಮುಖಂಡರು ಸನ್ಮಾನಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಎಂ.ಶಿವಮೂರ್ತಿ ನೇತೃತ್ವದಲ್ಲಿ ಶಾಸಕರಿಗೆ ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಕ್ಷೇತ್ರಕ್ಕೆ ಅನುದಾನ ನೀಡದ ಕಾರಣ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತವಾಗಲು ಕಾರಣವಾಗಿದೆ. ಈ ಬಾರಿ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ನಗರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು.
ಡಾ.ಬಾಬು ಜಗಜೀವನ ರಾಂ ಯುವಕರ ಸಂಘದ ಅಧ್ಯಕ್ಷ ರಾಚಯ್ಯ, ಗೌರವಾಧ್ಯಕ್ಷ ಆರ್.ಕೆ.ಶಿವಕುಮಾರ್, ಉಪಾಧ್ಯಕ್ಷ ಲಕ್ಷ್ಮಣ್‌ಕುಮಾರ್, ಬಿ.ಲಿಂಗಯ್ಯ, ಆರ್.ಸಿ.ರಮೇಶ್, ಆರ್.ಎಂ.ಶಿವಕುಮಾರ್, ರಜನಿ, ನಾರಾಯಣ, ಮಲ್ಲೇಶ, ಮಂಜು, ಸುನೀಲ್ಕುಮಾರ್, ಕುಮಾರ್, ಬಸವಣ್ಣ, ಸಂಜಯ್, ಮಹೇಂದ್ರ ಹಾಜರಿದ್ದರು.