

ಚಾಮರಾಜನಗರ : ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ನೀಡಿರುವ ಜಮೀನಿಗೆ ಈವರೆಗೂ ಸೂಕ್ತ ಪರಿಹಾರ ನೀಡಿಲ್ಲ ಎಂದು ರಾ.ಹೆ.ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ರೈತರು ಭಾನುವಾರ ಪ್ರತಿಭಟನೆ ನಡೆಸಿದರು.
ತಾಲೂಕಿನ ಸಂತೇಮರಹಳ್ಳಿ ಸಮೀಪದಲ್ಲೇ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ಪಕ್ಕದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ, ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರರ ವಿರುದ್ಧ ೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡ ನಟರಾಜ್ ಮಾತನಾಡಿ, ಸಂತೇಮರಹಳ್ಳಿ ಸಮೀಪ ಹಾದು ಹೋಗಿರುವ ಬೈಪಾಸ್ ರಸ್ತೆಗೆ ಜಮೀನು ನೀಡಿರುವ ರೈತರಿಗೆ ಈವರೆಗೂ ಸೂಕ್ತ ರೀತಿಯ ಪರಿಹಾರ ವಿತರಣೆ ಮಾಡಿಲ್ಲ. ಪರಿಹಾರ ಕೇಳಲು ಹೋದ ರೈತರಿಗೆ ಅಧಿಕಾರಿಗಳು ಧಮಕಿ ಹಾಕುತ್ತಾರೆ. ಪರಭಾಷೆಯ ಅಧಿಕಾರಿಗಳನ್ನು ನಂಬಿಕೊಂಡು ರೈತರು ಮೋಸ ಹೋಗಿದ್ದು, ಇದರಿಂದಾಗಿ ಸಾಕಷ್ಟು ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇಷ್ಟೆಲ್ಲದರ ನಡುವೆ ರಾಷ್ಟ್ರೀಯ ಹೆದ್ದಾರಿ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ರೈತರ ವಿರುದ್ಧವೇ ನ್ಯಾಯಾಲಯಕ್ಕೆ ಅಪೀಲ್ ಹೋಗಿರುವುದು ಯಾವ ನ್ಯಾಯ ಎಂದು ಅಧಿಕಾರಿಗಳ ನಡೆಯನ್ನು ಖಂಡಿಸಿದರು.
ರಸ್ತೆ ಹಾದು ಹೋಗಿರುವ ಸಮೀಪದ ರೈತರ ಜಮೀನಿನಲ್ಲಿರುವ ವಿದ್ಯುತ್ ಕಂಬಗಳನ್ನು ಕಟ್‌ಮಾಡಿ ಅಲ್ಲೇ ಬಿಟ್ಟಿದ್ದು, ಅದನ್ನು ರಿಪೇರಿ ಮಾಡಿಸುವ ಪ್ರಯತ್ನವೂ ಸಹ ನಡೆದಿಲ್ಲ. ರಸ್ತೆ ಕಾಮಗಾರಿ ಮಾಡುವ ವೇಳೆ ನೀರಿನ ಪೈಪ್‌ಲೈನ್‌ಗೆ ಹಾನಿಯಾಗಿದ್ದು, ಅದನ್ನು ಕೂಡ ರಿಪೇರಿ ಮಾಡದಿರುವುದರಿಂದ ಜಮೀನಿನಲ್ಲಿರುವ ಬೆಳೆ ಸಂಪೂರ್ಣ ನಾಶವಾಗುವ ಹಂತಕ್ಕೆ ತಲುಪಿದೆ. ಆದರೆ, ಸಂಬಂಧಪಟ್ಟ ಯಾವುದೇ ಅಧಿಕಾರಿಗಳು ಇಲ್ಲಿನ ರೈತರ ಸಮಸ್ಯೆಯನ್ನು ಆಲಿಸಿಲ್ಲ. ರಸ್ತೆ ಕಾಮಗಾರಿ ಕೂಡ ತೀರಾ ಕಳಪೆಯಿಂದ ಕೂಡಿದೆ. ಸಂಬಂಧಪಟ್ಟವರು ರೈತರ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಲು ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ರೈತ ಮುಖಂಡ ಪ್ರಕಾಶ್, ನಾಗೇಗೌಡ, ಮಹದೇವಸ್ವಾಮಿ, ರವಿ ಹಾಗೂ ಇತರರು ಭಾಗವಹಿಸಿದ್ದರು.