ಕನಿಷ್ಠ ವೇತನ ನಿಗದಿ ಮಾಡಿ

10raju2
Published on

ಚಾಮರಾಜನಗರ: ರಾಜ್ಯ ಸರ್ಕಾರ ಗೃಹಲಕ್ಷ್ಮೀ ಯೋಜನೆಯ ಬದಲಿಗೆ, ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕರಿಗೆ ಕನಿಷ್ಠ ವೇತನ ನಿಗದಿ ಮಾಡಿ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿರುವ ಶಿಶು ಅಭಿವೃದ್ಧಿ ಅಧಿಕಾರಿ ಕಚೇರಿಯ ಮುಂಭಾಗ ಸೋಮವಾರ ಜಮಾಯಿಸಿದ ಪ್ರತಿಭಟನಾಕಾರರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಂಗನವಾಡಿ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಎ.ನಾಗಮಣಿ ಮಾತನಾಡಿ, ಸರ್ಕಾರ ಅಂಗನವಾಡಿ ಕಾರ್ಯಕರ್ತರಿಗೆ ಮೊಬೈಲ್ ೆನ್‌ಗಳನ್ನು ವಿತರಣೆ ಮಾಡಿದ್ದು, ನೆಟ್‌ವರ್ಕ್ ಮತ್ತು ಇನ್ನಿತರ ಸಮಸ್ಯೆಗಳಿಂದ ಇದರಲ್ಲಿ ಕಾರ್ಯನಿರ್ವಹಿಸಲು ಆಗುತ್ತಿಲ್ಲ. ಈ ಬಾರಿಯ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯರಿಗೆ ಸೂಕ್ತ ಅನುದಾನ ನಿಗದಿಪಡಿಸಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಂಗನವಾಡಿ ನೌಕರರನ್ನು ಅತ್ಯಂತ ದಯನೀಯ ಸ್ಥಿತಿಯಲ್ಲಿ ಇರಿಸಿದ್ದು, ಇದರ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ದೇಶದ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಕನಿಷ್ಠ ವೇತನ ನಿಗದಿ ಮಾಡಬೇಕು. ಸಾಮಾಜಿಕ ಭದ್ರತೆಗಳಾದ ಇಎಸ್‌ಐ, ಪಿಎಫ್, ಪಿಂಚಣಿ ಸೇರಿದಂತೆ ಇತರ ಸೌಲಭ್ಯ ನೀಡಬೇಕು. 45 ಮತ್ತು 46ನೇ ಇಂಡಿಯನ್ ಲೇಬರ್ ಕಾನ್ಸರೆನ್ಸ್ ಶಿಫಾರಸುಗಳನ್ನು ಜಾರಿ ಮಾಡಬೇಕು. ಗ್ರಾಚ್ಯುಟಿ ಕೊಡುವ ಸಂಬಂಧ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಜಾರಿ ಮಾಡಬೇಕು. ಏಕರೂಪದ ಸೇವಾ ನಿಯಮಗಳನ್ನು ರೂಪಿಸಬೇಕು. ಎನ್‌ಇಪಿ 2020 ಹಿಂಪಡೆಯಬೇಕು, ಸಂಬಳ ಹಾಗೂ ಸಾಮಾಜಿಕ ಭದ್ರತೆಗಾಗಿ ಸಾಕಷ್ಟು ಹಣ ಬಿಡುಗಡೆ ಮಾಡಬೇಕು. ಸ್ಕೀಮ್ ಕೆಲಸಗಾರರನ್ನು ಕಾರ್ಮಿಕ ಕಾಯ್ದೆ ವ್ಯಾಪ್ತಿಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ದೇಶದಲ್ಲಿರುವ 6 ವರ್ಷಗಳ ಒಳಗಿನ ಎಲ್ಲ ಮಕ್ಕಳಿಗೂ ಪೂರ್ವ ಪ್ರಾಥಮಿಕ ಶಿಕ್ಷಣ ಕಡ್ಡಾಯ ಮಾಡಬೇಕು. ಅಂಗನವಾಡಿಗಳಲ್ಲಿ ಕಾರ್ಪೋರೇಟ್ ಸಂಸ್ಥೆಗಳು ಬಂಡವಾಳ ಹೂಡಿಕೆ ಮಾಡಲು ಅವಕಾಶ ನೀಡಬಾರದು. ಪರಿಣಾಮಕಾರಿಯಾಗಿ ಕೆಲಸ ಮಾಡಲು ಗುಣಮಟ್ಟದ ಮೊಬೈಲ್‌ಗಳನ್ನು ನೀಡಬೇಕು. ಪೋಷಣ್ ಅಭಿಯಾನಕ್ಕೆ ಆಧಾರ್ ಅಥವಾ ೆನ್ ನಂಬರ್ ಲಿಂಕ್ ಕಡ್ಡಾಯ ಎಂಬ ಆದೇಶವನ್ನು ಹಿಂಪಡೆಯಬೇಕು. ಅಂಗನವಾಡಿ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣನೆ ಮಾಡಬೇಕು ಎಂಬ ಮನವಿ ಪತ್ರವನ್ನು ಸಿಡಿಪಿಒ ನಾಗೇಶ್ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಸಂಘದ ತಾಲೂಕು ಕಾರ್ಯದರ್ಶಿ ಶಾಹಿದಾ ಬಾನು, ಜಮೀದಾಬೇಗಂ, ಫಾತಿಮಾ, ರಾಜಮ್ಮ, ಚಿಕ್ಕತಾಯಿ, ದೇವಮ್ಮ, ಗುರುಲಿಂಗಮ್ಮ, ತುಳುಸಮ್ಮ ಹಾಗೂ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net