ಮೂಲಸೌಕರ್ಯಕ್ಕೆ ಒತ್ತಾಯಿಸಿ ಪ್ರತಿಭಟನೆ

20raju1
Published on

ಚಾಮರಾಜನಗರ: ನಗರದ 15ನೇ ವಾರ್ಡ್‌ನ ಸ್ವಾಮಿ ಹಾಗೂ ಸೋಮಣ್ಣ ಲೇಔಟ್‌ನಲ್ಲಿ ರಸ್ತೆ ಹಾಗೂ ಮೂಲಸೌಕರ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ನಿವಾಸಿಗಳು ನಗರಸಭೆ ಹಾಗೂ ಜಿಲ್ಲಾಡಳಿತ ಭವನದ ಮುಂಭಾಗ ಪ್ರತಿಭಟನೆ ನಡೆಸಿದರು.

ನಗರದ ನಗರಸಭೆ ಕಚೇರಿ ಮುಂಭಾಗ ಶುಕ್ರವಾರ ಜಮಾಯಿಸಿದ ನಿವಾಸಿಗಳು ನಗರಸಭಾ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶವ್ಯಕ್ತಪಡಿಸಿದರು. ಸ್ಥಳಕ್ಕಾಗಮಿಸಿದ ಪೌರಾಯುಕ್ತ ರಾಮದಾಸ್ ಮನವೊಲಿಕೆಗೂ ಬಗ್ಗದ ಪ್ರತಿಭಟನಾಕಾರರು ಬಳಿಕ ಪಚ್ಚಪ್ಪ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಪ್ರತಿಭಟನೆ ನಡೆಸಿದರು.

ಬಡಾವಣೆಯ 3 ಮತ್ತು 4ನೇ ಅಡ್ಡ ರಸ್ತೆಯಲ್ಲಿ ಸಂಚರಿಸಲು ರಸ್ತೆ, ಬೀದಿ ದೀಪಗಳು, ಚರಂಡಿಗಳು ಸೇರಿದಂತೆ ಯಾವುದೇ ಮೂಲಸೌಕರ್ಯಗಳು ಸರಿಯಾಗಿಲ್ಲ. ಈ ಸಂಬಂಧ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹಲವು ವರ್ಷಗಳಿಂದಲೂ ವಾಸಿಸುವ ನಿವಾಸಿಗಳು ಮೂಲಸೌಕರ್ಯ ಕೊರತೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿದರು. ಕೂಡಲೇ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.

ಸ್ಥಳಕ್ಕೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಭೇಟಿ ನೀಡಿ, ನಿವಾಸಿಗಳಿಂದ ಅಹವಾಲು ಸ್ವೀಕರಿಸಿ, ಒಂದು ವಾರದೊಳಗೆ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದಾಗಿ ಮನವೊಲಿಸಿದ ಪರಿಣಾಮ ಪ್ರತಿಭಟನಾಕಾರರು ಧರಣಿಯನ್ನು ಕೈಬಿಟ್ಟರು.
ಪ್ರತಿಭಟನೆಯಲ್ಲಿ ವಿನಯ್, ಮಹೇಂದ್ರ, ವೀರಭದ್ರಸ್ವಾಮಿ, ರಾಜಗೋಪಾಲ, ಜಯಪ್ರಕಾಶ್, ಅನುರಾಧ, ಜಯಮ್ಮ, ಲಕ್ಷ್ಮಮ್ಮ, ಸುಶೀಲಮ್ಮ, ಮಮತಾ ಸೇರಿದಂತೆ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net