ಸಾಮಾಜಿಕ ಬಹಿಷ್ಕಾರ ಹಾಕಿರುವವರ ವಿರುದ್ಧ ಕ್ರವಹಿಸಿ

10raju1
Published on

ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಕುಣಗಹಳ್ಳಿ ಗ್ರಾಮದಲ್ಲಿ ಅಂತರ್ಜಾತಿ ವಿವಾಹಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕಿರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ವಿವಿಧ ಸಂಘಟನೆಗಳು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದವು.


ದಲಿತ ಹಕ್ಕುಗಳ ಸಮಿತಿ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಕರ್ನಾಟಕ ಪ್ರಾಂತ್ಯ ರೈತ ಸಂಘ, ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಸಹಯೋಗದಲ್ಲಿ ಶ್ರೀ ಭುವನೇಶ್ವರಿ ವೃತ್ತದಿಂದ ಮೆರವಣಿಗೆ ತೆರಳಿದ ಪ್ರತಿಭಟನಾಕಾರರು ಜಿಲ್ಲಾಡಳಿತ ಭವನದ ಮುಖ್ಯದ್ವಾರದ ಮುಂದೆ ಕುಳಿತು ಧರಣಿ ನಡೆಸಿದರು.


ಕುಣಗಳ್ಳಿಯ ಉಪ್ಪಾರ ಸಮುದಾಯದ ಯುವಕ ಮತ್ತು ಮಂಡ್ಯ ಜಿಲ್ಲೆ ಮಳವಳ್ಳಿಯ ದಲಿತ ಸಮುದಾಯದ ಯುವತಿ 2018ರಲ್ಲೇ ವಿವಾಹವಾಗಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕುಣಗಳ್ಳಿಯ ಯಜಮಾನರು ವಿವಾಹಿತರಿಗೆ 1.25 ಲಕ್ಷ ರೂ. ದಂಡ ವಿಧಿಸಿ ಬಹಿಷ್ಕಾರ ಹಾಕಿದ್ದರು. ಇದಕ್ಕೆ ಹೆದರಿದ್ದ ಯುವಕ ದಂಡ ಪಾವತಿ ಮಾಡಿ ಮನೆಯವರಿಗೆ ತೊಂದರೆಯಾಗದಿರಲು ಊರು ತೊರೆದು ಪತ್ನಿ ಮನೆಯಲ್ಲಿ ವಾಸವಿದ್ದ. ಇತ್ತೀಚೆಗೆ ಈತನ ತಾಯಿಯ ಆರೋಗ್ಯ ಸರಿ ಇಲ್ಲದ ಕಾರಣ ಗ್ರಾಮಕ್ಕೆ ಬಂದಿದ್ದಾಗ ಯಜಮಾ ನರು 3 ಲಕ್ಷ ರೂ. ದಂಡ ವಿಧಿಸಿ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ಇಂತಹ ಕಾನೂನು ಬಾಹಿರ ಕೃತ್ಯಗಳನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು.


ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಕೂಡಲೇ ಬಂಧಿಸಬೇಕು. 2018ರಲ್ಲಿ ವಸೂಲಿ ಮಾಡಿರುವ 1.25 ಲಕ್ಷ ರೂ. ದಂಡದ ಹಣವನ್ನು ಬಡ್ಡಿ ಸಮೇತ ವಾಪಸ್ ಕೊಡಬೇಕು, ಯುವಕನ ಕುಟುಂಬಕ್ಕೆ ಸೂಕ್ತ ರಕ್ಷಣೆ, 10 ಲಕ್ಷ ರೂ. ಪರಿಹಾರ ನೀಡಬೇಕು. ಜಿಲ್ಲೆಯಲ್ಲಿ ಸಂವಿಧಾನ ಬಾಹಿರವಾಗಿ ಕೆಲಸ ಮಾಡುತ್ತಿರುವ ನ್ಯಾಯ ಪಂಚಾಯಿತಿ ನಿಷೇಧಿಸಬೇಕು. ಯಜಮಾನರು ಎಂದು ಹೇಳಿಕೊಂಡು ನ್ಯಾಯ ಪಂಚಾಯಿತಿ ಮಾಡುವವರ ಮೇಲೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಜೈಲಿಗಟ್ಟಬೇಕೆಂದು ಆಗ್ರಹಿಸಿದರು.


ಅಸ್ಪೃಶ್ಯತೆ ಆಚರಣೆ, ಜಾತಿ ತಾರತಮ್ಯ, ಸಾಮಾಜಿಕ ಬಹಿಷ್ಕಾರ ಹಾಕಿದವರನ್ನು ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಶಿಕ್ಷೆಗೆ ಗುರಿ ಪಡಿಸಬೇಕು. ಕುಣಗಳ್ಳಿ ಪ್ರಕರಣದಲ್ಲಿ ನೊಂದಿರುವ ದಂಪತಿಗೆ ಸರ್ಕಾರಿ ಉದ್ಯೋಗ ನೀಡಿ, ಅವರ ಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಮುಖಂಡ ಎನ್.ಎಲ್.ಭರತ್‌ರಾಜ್, ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ, ಮಂಜುಳಾ, ಶೋಭಾ, ಲತಾ, ಸುಶೀಲಾ, ಎಲ್.ಲಿಂಗರಾಜುಮೂರ್ತಿ, ಮಹದೇವು, ಪ್ರಕಾಶ್, ಸಿಪಿಐ ಮಂಡ್ಯ ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ, ಮೈಸೂರು ಕಾರ್ಯದರ್ಶಿ ಜಗದೀಶ್ ಸೂರ್ಯ, ಡಿಎಚ್‌ಎಸ್ ರಾಜ್ಯ ಸಹ ಸಂಚಾಲಕ ಆರ್.ಕೃಷ್ಣ, ರಾಜ್ಯ ಸಮಿತಿ ಸದಸ್ಯರಾದ ಅಂಬೂಜಿ, ಬೆಳತ್ತೂರು ವೆಂಕಟೇಶ್ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net