

ಚಾಮರಾಜನಗರ: ಪ್ರೋತ್ಸಾಹಧನ ಬಿಡುಗಡೆಗೆ ಆಗ್ರಹಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಮಿತಿ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಡಳಿತ ಭವನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಳೆದ 3 ತಿಂಗಳಿಂದ ಬಾಕಿ ಇರುವ ಆಶಾ ಕಾರ್ಯಕರ್ತೆಯರ ಪ್ರೋತ್ಸಾಹಧನವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿ ತಿಂಗಳು ನಿರ್ದಿಷ್ಟ ದಿನಾಂಕದೊಳಗೆ ರಾಜ್ಯ ಹಾಗೂ ಕೇಂದ್ರದ ಪ್ರೋತ್ಸಾಹ ಧನ ಆಶಾ ಕಾರ್ಯಕರ್ತೆಯರಿಗೆ ದೊರೆಯುವಂತೆ ಮಾಡಬೇಕು. ಜಿಲ್ಲಾಮಟ್ಟದ ಕುಂದುಕೊರತೆ ಸಭೆ ನಡೆಸಬೇಕು. ಆಶಾ ಡೈರಿಯನ್ನು ತೆರೆಯಬೇಕು. ಮೊಬೈಲ್ ಆ್ಯಪ್‌ಗಳ ಮೂಲಕ ಆಶಾ ಕಾರ್ಯಕರ್ತೆಯರ ಬಳಿ ಒತ್ತಾಯಪೂರ್ವಕವಾಗಿ ಕೆಲಸ ಮಾಡಿಸುತ್ತಿರುವುದನ್ನು ಕೈಬಿಡಬೇಕು. ಸುತ್ತೋಲೆಯಲ್ಲಿಲ್ಲದ ಕೆಲಸಗಳನ್ನು ಮಾಡಿಸದಂತೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ತಾಲೂಕು ಆಸ್ಪತ್ರೆಗಳಲ್ಲಿ ಆಶಾ ಕಾರ್ಯಕರ್ತೆಯರಿಗೆ ವಿಶ್ರಾಂತಿ ಕೊಠಡಿ ಮೀಸಲಿಡಬೇಕು. ಆರೋಗ್ಯ ಇಲಾಖೆಯ ಆದೇಶದಂತೆ ಸಂಘದ ಪದಾಕಾರಿಗಳೊಂದಿಗೆ 3 ತಿಂಗಳಿಗೊಮ್ಮೆ ಕುಂದುಕೊರತೆ ನಿವಾರಣಾ ಸಭೆಯನ್ನು ನಡೆಸಬೇಕು. ಸಭೆಯ ಮಾಹಿತಿಯನ್ನು ಒಂದು ವಾರದ ಮುಂಚೆ ಸಂಘದ ಮುಖಂಡರಿಗೆ ತಿಳಿಸಬೇಕು ಎಂದು ಒತ್ತಾಯಿಸಿ ಶಿರಸ್ತೇದಾರ್ ರಂಗರಾಜು ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷೆ ಕವಿತಾ, ಕಾರ್ಯದರ್ಶಿ ಶಮಾ, ಶಶಿಕಲಾ, ತಾಲೂಕು ಅಧ್ಯಕ್ಷೆ ಸುಲೋಚನಾ, ಶಿವಮ್ಮ, ಪದಾಕಾರಿಗಳಾದ ಲೀಲಾವತಿ, ಸರೋಜ, ಮಂಜುಳಾ, ಜ್ಯೋತಿ, ಕಮಲಮ್ಮ ಸೇರಿದಂತೆ ಇತರರು ಭಾಗವಹಿಸಿದ್ದರು.