

ಚಾಮರಾಜನಗರ: ನಗರದ ಕರಿನಂಜನಪುರ ರಸ್ತೆ ಕಾಮಗಾರಿಯನ್ನು ತ್ವರಿತವಾಗಿ ಮುಗಿಸುವಂತೆ ಆಗ್ರಹಿಸಿ ನಗರಸಭಾ ಸದಸ್ಯರು ಹಾಗೂ 9ನೇ ವಾರ್ಡ್ ನಿವಾಸಿಗಳು ಶುಕ್ರವಾರ ರಸ್ತೆ ಮಧ್ಯೆ ಕುಳಿತು ಪ್ರತಿಭಟನೆ ನಡೆಸಿದರು.
ನಗರದ ಕರಿನಂಜನಪರ ರಸ್ತೆಯಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಅಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 9 ನೇ ವಾರ್ಡ್ ನಗರಸಭಾ ಸದಸ್ಯ ಎಂ.ಮಹೇಶ್ ಮಾತನಾಡಿ, ಕಳೆದ ಹಲವು ದಿನಗಳಿಂದಲೂ ರಸ್ತೆಗೆ ಜಲ್ಲಿ ಸುರಿದಿದ್ದು, ಕಾಮಗಾರಿಯನ್ನು ಪೂರ್ಣಗೊಳಿಸಿಲ್ಲ. ಇದರಿಂದ ಅಪಘಾತಗಳು ಹೆಚ್ಚಾಗುತ್ತವೆ. ವಾಹನಗಳು ಹಾಗೂ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ಸವಾರರು ರಾತ್ರಿ ವೇಳೆ ಸಂಚರಿಸುವಾಗ ಬಿದ್ದು ಗಾಯಗಳಾದ ಉದಾಹರಣೆಗಳು ಉಂಟು. ಇಷ್ಟೆಲ್ಲ ತೊಂದರೆಗಳನ್ನು ಸೃಷ್ಟಿಸುತ್ತಿರುವ ರಸ್ತೆ ಕಾಮಗಾರಿ ಪೂರ್ಣಗೊಳಿಸಿ ಜನರಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಅಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿದರು. ರಸ್ತೆ ಕಾಮಗಾರಿ ನಡೆಯುತ್ತಿರುವ ಸಂಬಂಧ ಸೂಕ್ತ ನಾಮಫಲಕಗಳನ್ನು ಹಾಕಬೇಕು, ಸವಾರರಿಗೆ ಓಡಾಡಲು ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ನಗರಸಭೆಯ ಎಇಇ ನಟರಾಜು ಪ್ರತಿಭಟನಾಕಾರರ ಅಹವಾಲು ಆಲಿಸಿ ಮನವೊಲಿಸಲು ಮುಂದಾದರು. ಆದರೆ, ಪ್ರತಿಭಟನಾಕಾರರು ಸ್ಥಳಕ್ಕೆ ಪೌರಾಯುಕ್ತರೇ ಬರಬೇಕು ಎಂದು ಪಟ್ಟು ಹಿಡಿದರು.
ನಂತರ ಸ್ಥಳಕ್ಕಾಗಮಿಸಿದ ಪೌರಾಯುಕ್ತ ರಾಮದಾಸ್, ಪ್ರತಿಭಟನಾಕಾರರಿಂದ ಅಹವಾಲು ಆಲಿಸಿದರು. ಸ್ಥಳದಲ್ಲಿದ್ದ ಗುತ್ತಿಗೆದಾರರಿಗೆ ಶೀಘ್ರವಾಗಿ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ತಾಕೀತು ಮಾಡಿದರು. ಬಳಿಕ ಪ್ರತಿಭಟನೆ ಅಂತ್ಯಗೊಳಿಸಲಾಯಿತು. ಪ್ರತಿಭಟನೆಯಲ್ಲಿ ಎಸ್‌ಡಿಪಿಐ ಜಿಲ್ಲಾ ಉಪಾಧ್ಯಕ್ಷ ಸೈಯದ್ ಆರಿಫ್, ಕಾರ್ಯದರ್ಶಿ ಜಬೀನೂರ್, ಮುಖಂಡರಾದ ಜುನೇದ್ ಉಲ್ಲಾ, ಅಫ್ತಾರ್ ಮಹಮದ್, ಅಯೂಬ್ ಖಾನ್ ಇತರರು ಭಾಗವಹಿಸಿದ್ದರು.