

ಚಾಮರಾಜನಗರ: ಹಳೆ ಪಿಂಚಣಿ ಯೋಜನೆ ಜಾರಿಗೆ ಒತ್ತಾಯಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನೌಕರರ ಸಂಘ-ಸಂಸ್ಥೆಗಳ ಒಕ್ಕೂಟ ಹಾಗೂ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧನಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವತಿಯಿಂದ ಶನಿವಾರ ರಕ್ತದಾನ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಯಿತು.
ಒಕ್ಕೂಟದ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಶಿಬಿರಕ್ಕೆ ಕಾರ್ಯಕಾಲಕ ಇಂಜಿನಿಯರ್ ಆರ್.ವಸಂತಕುಮಾರ್ ಮಾತನಾಡಿ, ಎನ್‌ಪಿಎಸ್ ಉತ್ತಮ ಯೋಜನೆಯಲ್ಲ. ಇದರಿಂದ ಸರ್ಕಾರಿ ನೌಕರರಿಗೆ ಯಾವುದೇ ರೀತಿಯ ಭದ್ರತೆ ಇಲ್ಲದಂತಾಗಿದೆ. ಆದ್ದರಿಂದ ಹಳೆಯ ಯೋಜನೆಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ಎನ್‌ಪಿಎಸ್ ಯೋಜನೆ ವಿರೋಧಿಸಿ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ವತಿಯಿಂದ ಡಿ.19ರಂದು ಬೆಂಗಳೂರಿನ ಸ್ವಾತಂತ್ಯ ಉದ್ಯಾನದಲ್ಲಿ ಮಾಡು ಇಲ್ಲವೆ ಮಡಿ ಅನಿರ್ದಿಷ್ಟ ಹೋರಾಟ ಹಮ್ಮಿಕೊಳ್ಳಲಾಗಿದೆ. ಈ ಹೋರಾಟ ಬೆಂಬಲಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನೌಕರರ ಸಂಘ-ಸಂಸ್ಥೆಗಳ ಒಕ್ಕೂಟ, ರಕ್ತನಿಧಿ ಕೇಂದ್ರದ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸಿದ್ದೇವೆ ಎಂದರು.
ಲೆಕ್ಕಾಧಿಕಾರಿ ಭಾಸ್ಕರ್, ಸಂಘದ ಕಾರ್ಯದರ್ಶಿ ಎಸ್.ಸಿದ್ದರಾಜಪ್ಪ, ಎಂ.ಮಹದೇವಸ್ವಾಮಿ, ಚೆನ್ನಂಜ ಕುಮಾರ್, ಶರಣಬಸಪ್ಪ ಚಿನ್ನಪುರ, ಸುನೀಲ್, ರಕ್ತದಾನ ಮಾಡಿದರು. ಪ್ರತಿಭಟನೆಯಲ್ಲಿ ಚಾಮರಾಜನಗರ -ಕೊಡುಗು ವೃತ್ತದ ಸಂಘಟನಾ ಕಾರ್ಯದರ್ಶಿ ಎನ್.ಮಹೇಶ್, ಸಂಘದ ಸ್ಥಳೀಯ ಸಮಿತಿ ಅಧ್ಯಕ್ಷ ಮುರಳಿ ಕೃಷ್ಣಸ್ವಾಮಿ, ಉಪಾಧ್ಯಕ್ಷ ಎಸ್.ಮಂಜುನಾಥ್, ಸಹ ಕಾರ್ಯದರ್ಶಿ ಮಹೇಶ್, ಖಜಾಂಚಿ ರಮೇಶ್, ನಿರ್ದೇಶಕರಾದ ನಾಗರಾಜು, ಶಿವಪ್ಪ, ಸಿ.ರಾಜು, ಸೋಮಶೇಖರ್, ಡಾ.ಮಹೇಶ್, ಎಸ್ಸಿ/ಎಸ್ಟಿ ಕಲ್ಯಾಣ ಸಂಸ್ಥೆ ಕಾರ್ಯದರ್ಶಿ ಮಂಜುನಾಥ್ ಇದ್ದರು.