ಚಾಮರಾಜನಗರ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ಕ್ರಮವನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ವತಿಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಶ್ರೀಭುವನೇಶ್ವರಿ ವೃತ್ತದಲ್ಲಿ ಮಂಗಳವಾರ ಸಮಾವೇಶಗೊಂಡ ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ, ಕಾವೇರಿ ನೀರು ನಿರ್ವಹಣಾ ಮಂಡಳಿ ವಿರುದ್ದ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು.
ರೈತರ ಜೀವನಾಡಿಯಾದ ಕಾವೇರಿ ನೀರನ್ನು ಸಂರಕ್ಷಣೆ ಮಾಡಬೇಕು, ಮಳೆ ಅಭಾವದಿಂದ ರಾಜ್ಯದಲ್ಲಿ ಜಲಾಶಯಗಳು ಬರಿದಾಗುತ್ತಿದ್ದು, ಎಲ್ಲ ತರಹದ ಬೆಳೆಗಳು ಸಂಪೂರ್ಣ ಒಣಗುತ್ತಿವೆ. ರಾಜ್ಯದಲ್ಲಿ ನೀರಿನ ಅಭಾವ ಇದ್ದು, ಮುಂದಿನ ದಿನಗಳಲ್ಲಿ ತೀವ್ರ ಬರಗಾಲ ಬರಲಿದೆ. ಹೀಗಾಗಿ, ಕರ್ನಾಟಕ ಸರ್ಕಾರ ಎಚ್ಚೆತ್ತುಗೊಂಡು ತಮಿಳುನಾಡಿಗೆ ಬಿಟ್ಟಿರುವ ನೀರನ್ನು ನಿಲ್ಲಿಸಬೇಕು. ಕೇಂದ್ರ ಮಧ್ಯಪ್ರವೇಶಿಸಿ ಕರ್ನಾಟಕಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಚಾ.ವೆಂ.ರಾಜ್ಗೋಪಾಲ್, ನಿಜಧ್ವನಿ ಗೋವಿಂದರಾಜು, ಮಹೇಶ್‌ಗೌಡ, ರವಿಚಂದ್ರಪ್ರಸಾದ್ ಕಹಳೆ, ವೀರಭದ್ರ, ಮಂಜು ಇತರರು ಭಾಗವಹಿಸಿದ್ದರು.