

ಚಾಮರಾಜನಗರ: ಮಲೈ ಮಹದೇಶ್ವರ ಬೆಟ್ಟ ಹಾಗೂ ಕಾವೇರಿ ವನ್ಯಜೀವಿ ವಿಭಾಗದ ಅರಣ್ಯ ಇಲಾಖೆ ಅಧಿಕಾರಿಗಳು ರೈತರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಯಿತು.
ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ಅಲ್ಲಿಂದ ಮೆರವಣಿಗೆ ಹೊರಟು ಶ್ರೀ ಭುವನೇಶ್ವರಿ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಕೆಲಕಾಲ ಪ್ರತಿಭಟನೆ ನಡೆಸಿದರು. ಬಳಿಕ ಬಿ.ರಾಚಯ್ಯ ಜೋಡಿ ರಸ್ತೆ ಮಾರ್ಗವಾಗಿ ಜಿಲ್ಲಾಡಳಿತ ಭವನಕ್ಕೆ ತೆರಳಿ ಅರಣ್ಯ ಅಧಿಕಾರಿಗಳ ವಿರುದ್ಧ ೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ಮಲೈ ಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಪೋಡಿನ ರೈತರು ಶತಮಾನಗಳಿಂದ ಕಾಡು ನಂಬಿ ಜೀವನ ನಡೆಸುತ್ತಿದ್ದಾರೆ. ಈಗ ಅರಣ್ಯ ಅಧಿಕಾರಿ, ಡಿಸಿಎ್ ರೈತರ ದೊಡ್ಡಿಗಳಿಗೆ ಬೆಂಕಿ ಹಾಕಿ, ಪಟಾಕಿ ಸಿಡಿಸಿ, ಸಣ್ಣಪುಟ್ಟ ಕರುಗಳನ್ನು ಓಡಿಸಿ ರೈತರಿಗೆ ತೊಂದರೆ ಕೊಡುತ್ತಿದ್ದಾರೆ. ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಗಳು ರೈತರಿಗೆ ನೀಡಿದ್ದ ಸೌಲಭ್ಯಗಳನ್ನು ನಿಲ್ಲಿಸಿದ್ದಾರೆ ಎಂದು ಆರೋಪಿಸಿದರು.
ಕಾಡಿನಲ್ಲಿರುವ ರೈತರಿಗೆ ದೊಡ್ಡಿ ಹಾಕಲು ಅವಕಾಶ ಕೊಡಬೇಕು. ಹಿಂದಿನ ಅಧಿಕಾರಿಗಳು ನೀಡಿದ್ದ ಸೌಲಭ್ಯಗಳನ್ನು ಮುಂದುವರಿಸಬೇಕು. ಡಿಸಿಎ್ ಮೇಲೆ ಎ್ಐಆರ್ ದಾಖಲು ಮಾಡಬೇಕು. ಈ ಭಾಗದ ರೈತರ ಸಮಸ್ಯೆಗಳ ಸಂಬಂಧ ಉಸ್ತುವಾರಿ ಸಚಿವರು ಕೂಡಲೇ ಸಭೆ ಕರೆಯಬೇಕು. ವಾರದೊಳಗೆ ಸಮಸ್ಯೆಗಳನ್ನು ಬಗೆಹರಿಸದಿದ್ದರೆ, ಮಹಿಳಾ ಸಂಘಸಂಸ್ಥೆಗಳು, ರೈತರು ಹಾಗೂ ಜಾನುವಾರುಗಳೊಂದಿಗೆ ರಸ್ತೆ ತಡೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಚಂಗಡಿ ಕರಿಯಪ್ಪ, ಲೋಕೇಶ್, ಹೀರಣ್ಣ, ಪಿ.ಜಗದೀಶ್, ಶಿವು ಇತರರು ಭಾಗವಹಿಸಿದ್ದರು.