

ಚಾಮರಾಜನಗರ: ಈ ಬಾರಿಯ ಶೈಕ್ಷಣಿಕ ವರ್ಷವನ್ನು ಗುಣಾತ್ಮಕವಾಗಿಸುವ ಉದ್ದೇಶದಿಂದ ಶಿಕ್ಷಕರು ದಾಖಲಾತಿ ಆಂದೋಲನಕ್ಕೆ ಸಿದ್ಧರಾಗಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಸೋಮಣ್ಣೆಗೌಡ ಸೂಚನೆ ನೀಡಿದರು.
ನಗರದ ಸಂತ ಜೋಸೆರ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ 2023-24 ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭದ ಕುರಿತ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಕರು ರಚನಾತ್ಮಕ ಮತ್ತು ಪರಿಣಾಮಕಾರಿ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಈ ವರ್ಷವನ್ನು ಗುಣಾತ್ಮಕ ಶೈಕ್ಷಣಿಕ ವರ್ಷವನ್ನಾಗಿಸಬೇಕಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಸಿದ್ಧರಾಗಬೇಕು. ಶಿಕ್ಷಕರು ಶಾಲೆಗೆ ಕಡ್ಡಾಯವಾಗಿ ಹಾಜರಾಗಿ, ಶಾಲಾ ಕೊಠಡಿ ಹಾಗೂ ಅಡುಗೆ ಕೋಣೆಗಳನ್ನು ಸ್ವಚ್ಛಗೊಳಿಸಲು ಕ್ರಮವಹಿಸಬೇಕು. ಶಾಲಾ ಪ್ರಾರಂಭಕ್ಕೆ ಪೂರ್ವ ಸಿದ್ದತೆಗಳನ್ನು ಕೈಗೊಳ್ಳಬೇಕು. ಸಹ ಶಿಕ್ಷಕರಿಗೆ ಕೆಲಸ ಹಂಚಿಕೆ ಮಾಡಬೇಕು. ಶಾಲಾ ಆಸ್ತಿ ಸಂರಕ್ಷಣೆಗೆ ಒತ್ತುಕೊಡಿ. ಶಾಲಾ ಶೌಚಗೃಹ ಮತ್ತು ಕುಡಿಯುವ ನೀರು ನಿರ್ವಹಣೆ ಮಾಡುವ ಕಡೆ ಹೆಚ್ಚಿನ ಗಮನಹರಿಸಿ. ಶಾಲಾ ವಿಶೇಷತೆ ಮತ್ತು ದಾಖಲಾತಿ ಬಗ್ಗೆ ಜಾಗೃತಿ ಮೂಡಿಸಲು ಶಿಕ್ಷಕರು ಸಿದ್ದರಾಗಬೇಕು ಎಂದು ಸಲಹೆ ನೀಡಿದರು.
ಸೇತುಬಂಧ ಕಾರ್ಯಕ್ರಮ ಆಯೋಜಿಸುವುದು, ಮಕ್ಕಳಿಗೆ ಪಠ್ಯ ಪುಸ್ತಕ ಹಾಗೂ ಸಮವಸ ವಿತರಣೆ ಮಾಡುವುದು. ಶಾಲಾ ಕೊಠಡಿಗಳ ಸುರಕ್ಷತೆ ಬಗ್ಗೆ ಗಮನ ಹರಿಸಬೇಕು. ಇಲಾಖೆ ನೀಡಿದ ಸುತ್ತೋಲೆಯಂತೆ ಶಾಲಾ ಚಟುವಟಿಕೆಯನ್ನು, ಮಕ್ಕಳ ಶೈಕ್ಷಣಿಕ ದಾಖಲೆಗಳನ್ನು ಕಡ್ಡಾಯವಾಗಿ ನಿರ್ವಹಿಸಬೇಕು. ಪಾಲಕರ ಸಭೆ ಕರೆದು, ಮಕ್ಕಳ ಕಲಿಕಾ ಪ್ರಗತಿಯ ಬಗ್ಗೆ ಚರ್ಚಿಸಬೇಕು. ಶಾಲಾ ವೇಳಾಪಟ್ಟಿ, ಶಿಕ್ಷಕರ ವೇಳಾಪಟ್ಟಿ, ಶಾಲಾ ಶೈಕ್ಷಣಿಕ ಯೋಜನೆ, ಶಾಲಾಭಿವೃದ್ಧಿ ಯೋಜನೆ, ಶಾಲಾ ಕ್ಲಬ್ ಹಾಗೂ ಶಾಲಾ ಮಂತ್ರಿಮಂಡಲ ರಚನೆಯ ಬಗ್ಗೆ ಕ್ರಮವಹಿಸಬೇಕು. ಶಾಲಾ ಅಂತಿಮ ಹಂತ ಪೂರೈಸಿ ಮುಂದಿನ ತರಗತಿಗೆ ಬಡ್ತಿ ಹೊಂದಿದ ಮಕ್ಕಳಿಗೆ ವರ್ಗಾವಣೆ ಪತ್ರ ನೀಡಿ, ಮಕ್ಕಳು ಇಚ್ಛಿಸುವ ಶಾಲೆಗಳಿಗೆ ದಾಖಲಿಸುವುದು. 2023-24 ನೇ ಸಾಲಿನ ಕ್ರೀಡಾ ಕ್ಯಾಲೆಂಡರ್‌ನಂತೆ ಮಕ್ಕಳ ಕ್ರೀಡಾ ಸ್ಪರ್ಧೆಗೆ ಕ್ರಮವಹಿಸಬೇಕು ಎಂದು ತಿಳಿಸಿದರು.
ಡಿಡಿಪಿಐ ಎಚ್.ಕೆ.ಪಾಂಡು, ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ, ಬಿಆರ್‌ಸಿ ರಾಜೀವ್, ಹಿರಿಯ ಉಪನ್ಯಾಸಕ ಲಿಂಗರಾಜೇ ಅರಸ್, ಅಕ್ಷರ ದಾಸೋಹ ಅಧಿಕಾರಿ ಎ.ಡಿ.ವೆಂಕಟೇಶ್, ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾದಪ್ಪ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಲಾಲಿಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ, ಉಪಾಧ್ಯಕ್ಷ ರಾಮಸ್ವಾಮಿ, ಎಸ್.ಜಿ.ರಾಜು ಇತರರು ಇದ್ದರು.