

ಚಾಮರಾಜನಗರ: ಸಾಹಿತಿಯಾದವರಿಗೆ ಸಾಮಾಜಿಕ ಜವಾಬ್ದಾರಿ ಬಹುಮುಖ್ಯವಾಗಿ ಇರಬೇಕು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಕುಂ.ವೀರಭದ್ರಪ್ಪ ಆಶಯ ವ್ಯಕ್ತಪಡಿಸಿದರು.
ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ದಾವಣಗೆರೆ ಕನ್ನಡ ಸಾಂಸ್ಕೃತಿಕ ಗತವೈಭವ ಅಕಾಡೆಮಿ, ಜೋಗಿ ರಂಗಜೋಳಿಗೆ ಹಾಗೂ ಕಾವ್ಯ ಸ್ಪಂದನ ಪಬ್ಲಿಕೇಷನ್ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಅಂತರಂಗ ಅಸ್ಪೃಶ್ಯತೆ ಮತ್ತು ಅಂತರ್ಮುಖಿ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಚಾ.ನಗರವನ್ನು ಜಾನಪದ ನಗರವೆಂದೇ ಕರೆಯುತ್ತೇವೆ. ಮಂಟೇಸ್ವಾಮಿ, ಸಿದ್ದಪ್ಪಾಜಿ ಕ್ರಾಂತಿಕಾರಿ ಸಂತರಿಗೆ ಜನುಮ ನೀಡಿದ ನೆಲ. ದಕ್ಷಿಣ ಭಾರತದಲ್ಲೇ ಅತ್ಯಂತ ಮನೋಜ್ಞವಾಗಿ ಅಭಿನಯಿಸುವ ಡಾ.ರಾಜ್ ಕುಮಾರ್ ಜನಿಸಿದ ಪುಣ್ಯಭೂಮಿ ಇದಾಗಿದೆ. ಈ ನೆಲದಲ್ಲಿ ಯುವ ಸಾಹಿತಿ ಕೆ.ಶ್ರೀಧರ್ ರಚನೆಯ ಅಪರೂಪದ 2 ಕೃತಿಗಳು ಬಿಡುಗಡೆಯಾಗುತ್ತಿರುವುದು ವೈಯಕ್ತಿಕವಾಗಿ ನನಗೆ ಹರ್ಷವನ್ನು ಉಂಟುಮಾಡಿದೆ ಎಂದರು.
ನಿರುಪದ್ರವಿ ಸಾಹಿತಿಗಳಿಗಿಂತಲೂ ಉಪದ್ರವಿ ಸಾಹಿತಿಗಳು ಕನ್ನಡ ಸಾಹಿತ್ಯದ ದೊಡ್ಡ ಶಕ್ತಿ. ಕನ್ನಡ ಸಾಹಿತ್ಯಕ್ಕೆ ಇರುವ ಶಕ್ತಿ ಯಾವ ಭಾಷೆಗೂ ಇಲ್ಲ. ಎಲ್ಲಕ್ಕಿಂತಲೂ ಮುಖ್ಯವಾಗಿ ಕನ್ನಡ ಸಾಹಿತ್ಯ ಪ್ರಶ್ನಿಸುವ ಗುಣವನ್ನು ಕಲಿಸುತ್ತದೆ ಎಂದು ತಿಳಿಸಿದರು. ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಮಾತನಾಡಿ, ಬಹಿರಂಗದ ಅಸ್ಪೃಶ್ಯತೆ ಅಷ್ಟೊಂದು ಅಪಾಯಕಾರಿಯಲ್ಲ. ಆದರೆ ಅಂತರಂಗದ ಅಸ್ಪೃಶ್ಯತೆ ಬಹಳ ಅಪಾಯಕಾರಿಯಾಗಿದೆ. ಮನುಷ್ಯ ಮನುಷ್ಯನನ್ನಾಗಿ ನೋಡಬೇಕು. ನಾವು ಅಂತರ್ಮುಖಿಗಳಾದಾಗ ಅಂತರಂಗದ ಅಸ್ಪೃಶ್ಯತೆ ಹೋಗಲಾಡಿಸಲು ಸಾಧ್ಯವಾಗುತ್ತದೆ. ಸರ್ಕಾರಿ ನೌಕರಿಯಲ್ಲಿ ಇದ್ದುಕೊಂಡು ಸಾಹಿತ್ಯದ ಕುರಿತು ಚಿಂತನೆ ನಡೆಸಿ, ಪುಸ್ತಕ ರಚನೆಯಲ್ಲಿ ತೊಡಗಿಕೊಂಡಿರುವುದು ಅತ್ಯಂತ ಹೆಮ್ಮೆಯ ವಿಚಾರವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಲಾವಿದ ಉಮ್ಮತ್ತೂರು ಬಸವರಾಜು, ಪತ್ರಕರ್ತರಾದ ಸುರೇಂದ್ರ ಬೊಮ್ಮಲಾಪುರ, ಶ್ರೀನಿವಾಸ ನಾಯಕ, ಶ್ರೀಸಾಯಿ ಮಂಜು, ಪ್ರಶಾಂತ್ ನಾಗವಳ್ಳಿ, ಕಾಂತರಾಜ್ ಮೌರ್ಯ, ರೈತ ಮುಖಂಡ ಭಾಗ್ಯರಾಜ್, ನಾಗರಾಜ್ ಅವರನ್ನು ಸನ್ಮಾನಿಸಲಾಯಿತು. ಮೈಸೂರಿನ ಉರಿಲಿಂಗಿಪೆದ್ದಿ ಮಠದ ಶ್ರೀಜ್ಞಾನಪ್ರಕಾಶ್ ಸ್ವಾಮೀಜಿ , ಹಿರಿಯ ಗಾಂಧಿವಾದಿ ಮತ್ತು ಸಂಸ್ಕೃತಿ ಚಿಂತಕ ಸಿ.ಪಿ.ಹುಚ್ಚೇಗೌಡ, ಖ್ಯಾತ ಚಿಂತಕ ಹೊ.ಬ.ರಘೋತ್ತಮ, ಪ್ರಕಾಶಕ ಭದ್ರಾವತಿ ರಾಮಾಚಾರಿ, ಸರ್ಕಾರದ ಮಾಜಿ ಉಪ ಕಾರ್ಯದರ್ಶಿ ಎಸ್.ಚಂದ್ರಶೇಖರಪ್ಪ, ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತ ವೆಂಕಟರಮಣಸ್ವಾಮಿ (ಪಾಪು), ಕೇಂದ್ರ ಸಾಹಿತ್ಯ ಯುವ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಯುವ ಸಾಹಿತಿ ಸ್ವಾಮಿ ಪೊನ್ನಾಚಿ, ಜಾನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ, ಸಾಹಿತಿ ಶಾಂತ ದಯಾನಂದ್, ಶೀಲಾ ಸತ್ಯೇಂದ್ರಸ್ವಾಮಿ, ಅಂತರಂಗದ ಅಸ್ಪೃಶ್ಯತೆ ಹಾಗೂ ಅಂತರ್ಮುಖಿ ಕೃತಿಗಳ ಲೇಖಕ ಕೆ.ಶ್ರೀಧರ್, ಕಲಾವಿದ ಮುಡಿಗುಂಡ ಮೂರ್ತಿ ಇತರರು ಉಪಸ್ಥಿತರಿದ್ದರು.