ಎಸ್ಸಿ, ಎಸ್ಟಿ, ಸ್ಥಳೀಯರಿಗೆ ಟಿಕೆಟ್ ನೀಡಿ

suresh
Published on

ಚಾಮರಾಜನಗರ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಿಗೆ ಎಲ್ಲ ರಾಷ್ಟ್ರೀಯ ಪಕ್ಷಗಳು ಪರಿಶಿಷ್ಟ ಜಾತಿ ಮತ್ತು ಪಂಗಡ, ಸ್ಥಳೀಯ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂದು ಜನ ಹಿತಾಸಕ್ತಿ ಹೋರಾಟ ವೇದಿಕೆ ಜಿಲ್ಲಾಧ್ಯಕ್ಷ ಸುರೇಶ್ ಒತ್ತಾಯಿಸಿದರು.


ಜಿಲ್ಲೆಯಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳಿದ್ದು, ಬೇರೆ ಜಿಲ್ಲೆಯ ಆಕಾಂಕ್ಷಿಗಳ ಹಾವಳಿ ಹೆಚ್ಚಾಗಿದೆ. ಮತದಾರರಿಗೆ ಇಲ್ಲಸಲ್ಲದ ಆಮಿಷಗಳನ್ನು ಒಡ್ಡುತ್ತಿದ್ದಾರೆ. ಅನ್ಯ ಜಿಲ್ಲೆಯಿಂದ ಬಂದಿರುವ ಆಕಾಂಕ್ಷಿಗಳಿಂದ ಕ್ಷೇತ್ರದ ಅಭಿವೃದ್ಧಿ ನಿರೀಕ್ಷಿಸಲು ಅಸಾಧ್ಯ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.


ಸಾರ್ವಜನಿಕರ ಹಿತಾಸಕ್ತಿ ದೃಷ್ಟಿಯಿಂದ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಸ್ಥಳೀಯರಿಗೆ ಟಿಕೆಟ್ ನೀಡಬೇಕು. ಸಾರ್ವಜನಿಕರ ಕುಂದುಕೊರತೆ ಆಲಿಸುವ ಅಭ್ಯರ್ಥಿಗೆ ಮಣೆ ಹಾಕಬೇಕು. ಅಲ್ಲೀ, ಜಿಲ್ಲೆಯಲ್ಲಿ ದಲಿತ ಮತದಾರರು ಅಧಿಕ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಚುನಾವಣೆಯಲ್ಲಿ ದಲಿತ ಮತಗಳೇ ನಿರ್ಣಾಯಕ. ದಲಿತರ ಅಭಿವೃದ್ಧಿಗಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗೆ ರಾಷ್ಟ್ರೀಯ ಪಕ್ಷಗಳು ಟಿಕೆಟ್ ನೀಡಬೇಕೆಂದು ಆಗ್ರಹಿಸಿದರು.


ರಾಜಕೀಯ ಪಕ್ಷಗಳು ಆಶ್ವಾಸನೆ ನೀಡದೆ ಬಡಜನರು ನೆಮ್ಮದಿಯಿಂದ ಜೀವನ ನಡೆಸಲು ಅನುಕೂಲವಾಗುವಂತೆ ಪ್ರಣಾಳಿಕೆಯನ್ನು ರೂಪಿಸಿ ಅಧಿಕಾರಕ್ಕೆ ಬಂದ ನಂತರ ಜಾರಿಗೊಳಿಸಬೇಕು ಎಂದರು. ಗೋಷ್ಠಿಯಲ್ಲಿ ನಿಜಧ್ವನಿ ಗೋವಿಂದರಾಜು, ಪರಶಿವಮೂರ್ತಿ, ಪಾಪಣ್ಣ ಬಿಸಲವಾಡಿ, ಹರದನಹಳ್ಳಿ ಸಂತೋಷ್‌ಕುಮಾರ್, ಮೂರ್ತಿನಾಯಕ, ಲಕ್ಷ್ಮಣ ನಾಯಕ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net