ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟನೆ

3chn1
Published on

ಚಾಮರಾಜನಗರ: ತಲೆ ಮೇಲೆ ಚಪ್ಪಡಿ ಕಲ್ಲು ಹೊತ್ತ ಪ್ರತಿಭಟನಾಕಾರರು ರಾಜ್ಯ ಸರ್ಕಾರ, ಕಾವೇರಿ ನಿರ್ವಹಣಾ ಮಂಡಳಿ, ತಮಿಳುನಾಡು ಸರ್ಕಾರದ ವಿರುದ್ಧ ೋಷಣೆ ಕೂಗಿ ಕರ್ನಾಟಕದ ರೈತರ ತಲೆ ಮೇಲೆ ಕಲ್ಲು ಎತ್ತಿ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರದ ಶ್ರೀಚಾಮರಾಜೇಶ್ವರಿ ಉದ್ಯಾನ ಮುಂಭಾಗದಲ್ಲಿ ಜಮಾಯಿಸಿದ ಕರ್ನಾಟಕ ಸೇನಾ ಪಡೆಯ ಕಾರ್ಯಕರ್ತರು, ಮೆರವಣಿಗೆ ಹೊರಟು ಶ್ರೀಭುವನೇಶ್ವರಿ ವೃತ್ತದಲ್ಲಿ ಗುಂಪುಗೂಡಿದರು. ಕೆಲಕಾಲ ರಸ್ತೆ ತಡೆ ನಡೆಸಿದರು. ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳ ವಿರುದ್ಧ ೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ಸೇನಾ ಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವ ಕ್ರಮವನ್ನು ವಿರೋಧಿಸಿ ನಗರದಲ್ಲಿ ಕನ್ನಡಪರ ಸಂಘಟನೆಗಳು ನಿರಂತರ ಹೋರಾಟ ಮಾಡುತ್ತಿದೆ. ಭಾನುವಾರವೂ ಪ್ರತಿಭಟನೆ ಮಾಡುತ್ತಿದ್ದು, ಕಾವೇರಿ ನಿರ್ವಹಣಾ ಮಂಡಳಿ ಕನ್ನಡಿಗರ ಪಾಲಿಗೆ ಕಲ್ಲು ಚಪ್ಪಡಿ ಹಾಕಿದೆ ಎಂದು ನಾವು ತಲೆ ಮೇಲೆ ಚಪ್ಪಡಿಕಲ್ಲು ಹೊತ್ತು ಪ್ರತಿಭಟನೆ ನಡೆಸಲಾಗಿದೆ ಎಂದರು.

ಕಾವೇರಿ ನಿರ್ವಹಣಾ ಮಂಡಳಿ ನಿರಂತರವಾಗಿ ಅನ್ಯಾಯ ಮಾಡಿಕೊಂಡು ಬರುತ್ತಿದೆ. ತಮಿಳುನಾಡು ಸರ್ಕಾರ ಈ ದೇಶದ ಒಕ್ಕೂಟದ ವ್ಯವಸ್ಥೆಗೆ ಅಗೌರವ ಕೊಡುವ ಸರ್ಕಾರವಾಗಿದೆ. ಈ ಸರ್ಕಾರಕ್ಕೆ ಗೌರವ ಅನ್ನುವುದೇ ಇಲ್ಲ. ಮಾತೆತ್ತಿದ್ದರೆ ನೆರೆ ರಾಜ್ಯಗಳ ಮೇಲೆ ಖ್ಯಾತೆ ತೆಗೆಯುವುದು, ಇಲ್ಲಸಲ್ಲದ ಆರೋಪ ಮಾಡುವುದು ಮಾಮೂಲಿಯಾಗಿದೆ. ಈ ವಿಚಾರದಲ್ಲಿ ರಾಜ್ಯದ ಸಂಸದರು, ಕೇಂದ್ರ ಸಚಿವರು ಮೌನ ವಹಿಸಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಆರೋಪಿಸಿದರು.

ಕರ್ನಾಟಕ ಸರ್ಕಾರ ರಾಜ್ಯದ ಜನರ ಹಿತ ಕಾಪಾಡದೇ ತಮಿಳುನಾಡಿನ ಒತ್ತಡಕ್ಕೆ ಮಣಿದು ಪ್ರತಿ ದಿನ 5 ಸಾವಿರ ಕ್ಯೂಸೆಕ್ ನೀರು ಬಿಡುತ್ತಿರುವುದು ವಿಷಾಧನೀಯ. ತಕ್ಷಣವೇ ನೀರು ನಿಲ್ಲಿಸಬೇಕು. ಇಲ್ಲದಿದ್ದರೆ ನಿಮ್ಮ ಹಾಗೂ ತಮಿಳುನಾಡು ಸರ್ಕಾರದ ವಿರುದ್ಧ ಜನಾಂದೋಲನ ಮಾಡಬೇಕಾಗುತ್ತದೆ. ತಮಿಳುನಾಡು ಗಡಿ ಬಂದ್ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಾ.ಮುರಳಿ, ನಿಜಧ್ವನಿ ಗೋವಿಂದರಾಜು, ಗು.ಪುರುಷೋತ್ತಮ, ಗಡಿನಾಡು ಕನ್ನಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಚಾ.ರಾ.ಕುಮಾರ್, ಅಂಬರೀಶ್, ತಾಂಡವಮೂರ್ತಿ, ನಾಗೇಶ್ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net