

ಚಾಮರಾಜನಗರ: ಕನ್ನಡ ಪತ್ರಿಕೋದ್ಯಮ, ರಾಜಕೀಯ, ಶಿಕ್ಷಣ, ಸಹಕಾರ ಕ್ಷೇತ್ರದಲ್ಲಿ ವಾಸು ಅವರು ಅಪಾರವಾದ ಸೇವೆಯನ್ನು ಸಲ್ಲಿಸಿದ್ದರು ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ ಹೇಳಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಮಾಜಿ ಶಾಸಕ, ಮಾಜಿ ಮೇಯರ್ ವಾಸು ಅವರ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮೇಯರ್ ವಾಸು ಎಂದೇ ಪ್ರಸಿದ್ಧರಾಗಿದ್ದ ಅವರು ಶಾಸಕರಾಗಿ ಮೈಸೂರಿನ ಜಯದೇವ ಆಸ್ಪತ್ರೆಯ ನಿರ್ಮಾಣ, ಮಹಾರಾಣಿ ಕಾಲೇಜಿನ ಅಭಿವೃದ್ಧಿ, ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ಕನ್ನಡ ಸಾಹಿತ್ಯ, ಸಂಸ್ಕೃತಿ, ಸಂಘಟನೆಗಳ ಪ್ರೋತ್ಸಾಹಕರಾಗಿದ್ದರು. ಪ್ರಜಾನುಡಿ ಪತ್ರಿಕೆಯನ್ನು ಬೆಳೆಸುವ ಮೂಲಕ ಪತ್ರಿಕೋದ್ಯಮದಲ್ಲೂ ಅಪಾರ ಹೆಸರು ಮಾಡಿದವರು. ತಮ್ಮ ಸರಳತೆಯ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದರು ಎಂದು ಹೇಳಿದರು.
ಕನ್ನಡಪರ ಹೋರಾಟಗಾರ ಚಾ.ರಂ.ಶ್ರೀನಿವಾಸ ಗೌಡ, ಪುಣ್ಯದ ಹುಂಡಿ ರಾಜು, ಶಿವಲಿಂಗ ಮೂರ್ತಿ, ರಾಜಗೋಪಾಲ್, ಸುರೇಶ್ ಗೌಡ, ಪರಮೇಶ್ವರಪ್ಪ, ರೇಣುಕೇಶ್ ,ಬಿ.ಕೆ.ಆರಾಧ್ಯ ಇತರರು ಹಾಜರಿದ್ದರು.