

ಚಾಮರಾಜನಗರ: ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಚಾ.ನಗರ ಲೋಕಸಭಾ ಕ್ಷೇತ್ರಕ್ಕೆ ಏ.26 ರಂದು ಮತದಾನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಚಾ.ನಗರ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಏ.4 ರಂದು ಕೊನೆಯ ದಿನವಾಗಿದೆ. ಏ.5 ರಂದು ನಾಮಪತ್ರ ಪರಿಶೀಲನೆ ನಡೆಸಲಾಗುತ್ತದೆ. ಏ.8 ರಂದು ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಏ.26 ರಂದು ಮತದಾನ ನಡೆಯಲಿದ್ದು, ಜೂ.4 ರಂದು ಲಿತಾಂಶ ಹೊರಬೀಳಲಿದೆ. ಜೂ.6 ರಂದು ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ಚಾಮರಾಜನಗರ ಲೋಕಸಭಾ ವ್ಯಾಪ್ತಿಯ ಹನೂರು ವಿಧಾನಸಭಾ ಕ್ಷೇತ್ರದಲ್ಲಿ 254 ಮತಗಟ್ಟೆಗಳು ಇದ್ದು, ಕೊಳ್ಳೇಗಾಲದಲ್ಲಿ 241, ಚಾಮರಾಜನಗರ 239, ಗುಂಡ್ಲುಪೇಟೆ 249 ಮತ ಗಟ್ಟೆಗಳನ್ನು ಸ್ಥಾಪಿಸಲಾಗಿದೆ. 2019 ರ ಲೋಕಸಭಾ ಚುನಾವಣೆಯಲ್ಲಿ ನಾಲ್ಕೂ ಕ್ಷೇತ್ರಗಳಿಂದ 980 ಮತಗಟ್ಟೆಗಳನ್ನು ತೆರೆಯಲಾಗಿತ್ತು. ಈ ಬಾರಿ 983 ಮತಗಟ್ಟೆಗಳನ್ನು ತೆರೆಯಲಾಗಿದೆ. ಇನ್ನು ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದಲ್ಲಿ 282, ನಂಜನಗೂಡು 246, ವರುಣ 261 ಹಾಗೂ ಟಿ.ನರಸೀಪುರ ಕ್ಷೇತ್ರದಲ್ಲಿ 228 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 2024 ರ ಚುನಾವಣೆಯಲ್ಲಿ ಒಟ್ಟಾರೆ 2000 ಮತಗಟ್ಟೆಗಳನ್ನು ತೆರೆಯಲಾಗಿದೆ ಎಂದರು.
ಜಿಲ್ಲೆಯ ನಾಲ್ಕೂ ವಿಧಾನಸಭಾ ವ್ಯಾಪ್ತಿಯಲ್ಲಿ 1177 ಬ್ಯಾಲೆಟ್ ಯೂನಿಟ್ ಮತ್ತು ಕಂಟ್ರೋಲ್ ಯೂನಿಟ್‌ಗಳನ್ನು ಉಪಯೋಗಿಸಲಾಗುತ್ತದೆ. 1276 ವಿವಿ ಪ್ಯಾಟ್ಸ್‌ಗಳನ್ನು ಬಳಕೆ ಮಾಡಲಾಗುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಶೇ.20 ರಷ್ಟು ಕಾಯ್ದಿರಿಸಿದ ಮತಗಟ್ಟೆ ಅಧಿಕಾರಿಗಳು ಸೇರಿದಂತೆ, ಪ್ರತಿ ಮತಗಟ್ಟೆಗೆ ಒಬ್ಬರು ಪ್ರಿಸೈಡಿಂಗ್ ಅಧಿಕಾರಿ ಹಾಗೂ 3 ಜನ ಮರದಾನಾಧಿಕಾರಿಗಳನ್ನು ನೇಮಕ ಮಾಡಲಾಗುತ್ತದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪದ್ಮನಿಸಾಹು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಅಪರ ಜಿಲ್ಲಾಧಿಕಾರಿ ಗೀತಾಹುಡೇದ ಹಾಜರಿದ್ದರು.
ಚಾ.ನಗರ ಕ್ಷೇತ್ರದಲ್ಲಿ 17.57 ಲಕ್ಷ ಮತದಾರರು:
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 8,69,389 ಪುರುಷ, 8,88,113 ಮಹಿಳೆ ಮತ್ತು ಇತರೆ 114 ಮತದಾರರು ಇದ್ದು, ಒಟ್ಟಾರೆ 17,57,616 ಮತದಾರರು ಇದ್ದಾರೆ. ಲೋಕಸಭಾ ವ್ಯಾಪ್ತಿಯ ಹನೂರು ವಿಧಾನಸಭಾ ಕ್ಷೇತ್ರದಲ್ಲಿ 1,11,633 ಪುರುಷ, 1,10,338 ಮಹಿಳೆ ಮತ್ತು ಇತರೆ 18 ಮತದಾರರನ್ನು ಒಳಗೊಂಡಂತೆ ಒಟ್ಟು 2,21,989 ಮತದಾರರು ಇದ್ದಾರೆ. ಕೊಳ್ಳೇಗಾಲ ಕ್ಷೇತ್ರದಲ್ಲಿ 1,07,081 ಪುರುಷ, 1,10,768 ಮಹಿಳೆ, ಇತರೆ 20ಮತದಾರರನ್ನು ಒಳಗೊಂಡಂತೆ 2,17,869 ಮತದಾರರು ಇದ್ದಾರೆ. ಚಾಮರಾಜನಗರ 1,03,480 ಪುರುಷ, 1,08,712 ಮಹಿಳೆ, 14 ಇತರೆ ಮತದಾರರನ್ನು ಒಳಗೊಂಡಂತೆ 2,12,206 ಮತದಾರರು ಇದ್ದಾರೆ. ಗುಂಡ್ಲುಪೇಟೆ 1,04,873 ಪುರುಷ, 1,09,271 ಮಹಿಳೆ, 16 ಇತರೆ ಮತದಾರರನ್ನು ಒಳಗೊಂಡಂತೆ 2,14,160 ಮತದಾರರು ಇದ್ದಾರೆ. ಎಚ್.ಡಿ.ಕೋಟೆ 1,13,178 ಪುರುಷ, 1,13,525 ಮಹಿಳೆ, 13 ಇತರೆ ಮತದಾರರನ್ನು ಒಳಗೊಂಡಂತೆ 2,26,716 ಮತದಾರರಿದ್ದಾರೆ. ನಂಜನಗೂಡು 1,09,144 ಪುರುಷ, 1,10,906 ಮಹಿಳೆ, 7 ಇತರೆ ಒಳಗೊಂಡಂತೆ 2,20,057 ಮತದಾರರಿದ್ದಾರೆ. ವರುಣ 1,17,815 ಪುರುಷ, 1,19,348 ಮಹಿಳೆ, 13 ಇತರೆ ಮತದಾರರನ್ನು ಒಳಗೊಂಡಂತೆ 2,37,176 ಮತದಾರರು ಪಟ್ಟಿಯಲ್ಲಿದ್ದಾರೆ. ಟಿ.ನರಸೀಪುರ 1,02,185 ಪುರುಷ, 1,05,245 ಮಹಿಳೆ, 13 ಇತರೆ ಮತದಾರರನ್ನು ಒಳಗೊಂಡಂತೆ 2,07,443 ಮತದಾರರು ಅಂತಿಮ ಮತದಾರರ ಪಟ್ಟಿಯಲ್ಲಿ ಇದ್ದಾರೆ.
ನೀತಿಸಂಹಿತೆ ಪಾಲನೆ:
ಜಿಲ್ಲಾ ವ್ಯಾಪ್ತಿಯಲ್ಲಿ ಮಾದರಿ ನೀತಿ ಸಂಹಿತೆ ಪಾಲನೆ ಸಂಬಂಧವಾಗಿ 12 ಪ್ಲೆಯಿಂಗ್ ಸ್ಕಾಡ್ ತಂಡ, 13 ಎಸ್‌ಎಸ್‌ಟಿ ತಂಡ ಹಾಗೂ 97 ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅಭ್ಯರ್ಥಿಗಳ ಚುನಾವಣಾ ವೆಚ್ಚ ಪರಿಶೀಲನೆಗಾಗಿ ಅಧಿಕಾರಿಗಳ ತಂಡ, 10 ವೀಡಿಯೋ ಸರ್ವೈಲನ್ಸ್ ತಂಡ, 4 ವೀಡಿಯೋ ವೀವಿಂಗ್ ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಲೋಕಸಭಾ ವ್ಯಾಪ್ತಿಯಲ್ಲಿ 8 ಅಂತರಾಜ್ಯ ಚೆಕ್‌ಪೋಸ್ಟ್ ಮತ್ತು 5 ಅಂತರ್ ಜಿಲ್ಲಾ ಚೆಕ್‌ಪೋಸ್ಟ್‌ಗಳನ್ನು ತೆರೆಯಲು ಕ್ರಮವಹಿಸಲಾಗಿದೆ. ಮತದಾರರ ಪಟ್ಟಿಗೆ ಹಾಗೂ ಚುನಾವಣಾ ವಿಷಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ತಮ್ಮ ಅಹವಾಲು ಸಲ್ಲಿಸಲು ಜಿಲ್ಲಾಧಿಕಾರಿ ಕಚೇರಿಯ ಕೊಠಡಿ ಸಂಖ್ಯೆ 104/1 ರಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದೆ.
ಆ್ಯಪ್ ಮೂಲಕ ದೂರು ಸಲ್ಲಿಸಬಹುದು:
ಈ ಬಾರಿಯ ಚುನಾವಣೆಯಲ್ಲಿ ಮಾದರಿ ನೀತಿ ಸಂಹಿತೆ ಹಾಗೂ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಕುರಿತು ನಿಗಾವಹಿಸಲು ಭಾರತ ಚುನಾವಣಾ ಆಯೋಗವು ಸಿವಿಐಜಿಐಎಲ್ ಎಂಬ ತಂತ್ರಾಂಶವನ್ನು ಪರಿಚಯಿಸಿದೆ. ಈ ತಂತ್ರಾಂಶವನ್ನು ಪ್ಲೇ ಸ್ಟೋರ್ ಮೂಲಕ ಡೌನ್ಲೋಡ್ ಮಾಡಿಕೊಂಡು ಮಾದರಿ ನೀತಿಸಂಹಿತೆ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಪೋಟೋ ಮತ್ತು ವಿಡಿಯೋಗಳ ಮೂಲಕ ದೂರು ದಾಖಲಿಸಬಹುದಾಗಿದೆ.ಈ ಆ್ಯಪ್ ಮೂಲಕ ಚುನಾವಣೆಗೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ.