

ಚಾಮರಾಜನಗರ: ಅನಾದಿಕಾಲದಿಂದಲೂ ನೆಲೆಸಿರುವ ಶ್ರೀಬೀರೇಶ್ವರ ಸ್ವಾಮಿ ಜಾತ್ರೆ 12 ವರ್ಷಕೊಮ್ಮೆ ನಡೆಯುವುದು ವಿಶೇಷವಾಗಿದ್ದು, ಹಲವಾರು ಗ್ರಾಮಗಳ ಜನರು ಶ್ರದ್ಧಾಭಕ್ತಿಯಿಂದ ಭಾಗವಹಿಸುತ್ತಾರೆ.
ತಾಲೂಕಿನ ಮಂಗಲ ಗ್ರಾಮದಲ್ಲಿ ನೆಲೆಸಿರುವ ಶ್ರೀಬೀರೇಶ್ವರ ಸ್ವಾಮಿ ದೇವಾಲಯದಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಮಾತ್ರ ಇಲ್ಲಿ ಜಾತ್ರೆ ನಡೆಯುತ್ತದೆ. ಈ ಜಾತ್ರೆಯಲ್ಲಿ ಹಲವಾರು ವಿಶೇಷತೆಗಳನ್ನು ಹೊಂದಿದ್ದು, ಈ ಹಿಂದೆ 2012 ರಲ್ಲಿ ಹಿರಿಯ ಹಬ್ಬದ ಜಾತ್ರಾ ಮಹೋತ್ಸವ ನಡೆದಿತ್ತು. 12 ವರ್ಷಗಳ ಬಳಿಕ ಮಾ.17 ರಂದು ಜಾತ್ರೆ ಪ್ರಾರಂಭವಾಗಿ ವಿವಿಧ ಆಚರಣೆ, ಪೂಜಾ ಕೈಂಕರ್ಯಗಳೊಂದಿಗೆ ಮೂರು ದಿನಗಳ ಕಾಲ ಜಾತ್ರೆ ಮಹೋತ್ಸವ ವಿಜೃಂಭಣೆಯಾಗಿ ನಡೆಯುವುದು ವಿಶೇಷವಾಗಿದೆ.
ಮಂಗಲ ಗ್ರಾಮವನ್ನು ಒಳಗೊಂಡಂತೆ ಸುಮಾರು ಎಂಟು ಗ್ರಾಮಗಳ ಹಾಲು ಮತದ ಸಮುದಾಯದ ಜನರು ಈ ಜಾತ್ರೆಯನ್ನು ವಿಶೇಷವಾಗಿ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ಹಿರಿಯ ಹಬ್ಬ ಎಂದೇ ಕರೆಸಿಕೊಳ್ಳುವ ಈ ಜಾತ್ರೆಗೆ ಎರಡನೇ ದಿನ ವಿವಿಧ ಗ್ರಾಮಗಳಿಂದ ಆಗಮಿಸುವ ಭಕ್ತರು ಅಲ್ಲೇ ಊಟವನ್ನು ಸಿದ್ಧಪಡಿಸಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಭಾಗವಹಿಸುತ್ತಾರೆ. ತಲತಲಾಂತರಗಳಿಂದಲೂ ಈ ಪದ್ಧತಿ ನಡೆದುಕೊಂಡು ಬಂದಿದ್ದು, ಮಂಗಲ ಮತ್ತು ಇನ್ನಿತರೆ ಎಂಟು ಗ್ರಾಮಗಳಲ್ಲೂ ಹಿರಿಯ ಹಬ್ಬ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಮಾ.17 ರಿಂದ ಜಾತ್ರೆ:
ಮಂಗಲ ಗ್ರಾಮದ ಐತಿಹಾಸಿಕವಾದ ಹಿರಿಯ ಹಬ್ಬ ಜಾತ್ರಾ ಮಹೋತ್ಸವ ಮಾ.17 ರಿಂದ ಪ್ರಾರಂಭವಾಗಿ ಮಾ.19 ರಂದು ಮುಕ್ತಾಯಗೊಳ್ಳಲಿದೆ. ಶ್ರೀಬೀರೇಶ್ವರ ದೇವಸ್ಥಾನದಲ್ಲಿ ಮಾ.17 ರಂದು ಹೋಮ-ಹವನಗಳೊಂದಿಗೆ ಜಾತ್ರಾಮಹೋತ್ಸವ ಪ್ರಾರಂಭವಾಗುತ್ತದೆ. ಮಾ.18 ರಂದು ಕೋಟಂಬಳ್ಳಿ ಗ್ರಾಮದಿಂದ ಬಿಡದಿ ಗಾಡಿಯವರು ಉತ್ಸವದೊಂದಿಗೆ ಸನ್ನಿಧಿಗೆ ಬರುತ್ತಾರೆ. ಬಳಿಕ ದೇವಾಲಯದಿಂದ ಹೂ-ಹೊಂಬಾಳೆಯೊಂದಿಗೆ ದೇವರ ಉತ್ಸವ ನೆರವೇರಿಸಲಾಗುತ್ತದೆ. ಅದಲ್ಲದೇ ಮೆರವಣಿಗೆಯಲ್ಲಿ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ಮಾ.19 ರಂದು ಮಜ್ಜನ ಮತ್ತು ಆರತಿ ಸಾಲುಗಳೊಂದಿಗೆ ನಡೆಯುವ ವಿಜೃಂಭಣೆಯ ಉತ್ಸವದೊಂದಿಗೆ ವಿವಿಧ ಗ್ರಾಮಗಳಿಂದ ಬಂದಿದ್ದ ಭಕ್ತರಿಗೆ ಬೀಳ್ಕೊಡುಗೆ ನೀಡುವ ಮೂಲಕ ಹಿರಿಯ ಹಬ್ಬದ ಜಾತ್ರಾಮಹೋತ್ಸವಕ್ಕೆ ತೆರೆ ಬೀಳುತ್ತದೆ.
ಕೋಟಂಬಳ್ಳಿ ಗ್ರಾಮಸ್ಥರಿಂದ ವಿಶೇಷ ಸೇವೆ:
ಸುಮಾರು 12 ವರ್ಷಗಳಿಗೊಮ್ಮೆ ನಡೆಯುವ ಶ್ರೀಬೀರೇಶ್ವರಸ್ವಾಮಿ ಜಾತ್ರಾಮಹೋತ್ಸವದಲ್ಲಿ ಕೋಟಂಬಳ್ಳಿ ಹಾಲುಮತದ ಸಮುದಾಯದವರು ವಿಶೇಷವಾಗಿ ಸೇವೆಸಲ್ಲಿಸುತ್ತಾರೆ. ಗ್ರಾಮದಿಂದ ಕುರುಬ ಸಮುದಾಯದ ಪ್ರತಿ ಕುಟುಂಬದವರು ಎತ್ತಿನಗಾಡಿಯಲ್ಲಿ ಮೆರವಣಿಗೆಯಲ್ಲಿ ಮಂಗಲ ಗ್ರಾಮಕ್ಕೆ ಬರುತ್ತಾರೆ. ಇವರನ್ನು ಸುತ್ತಲಿನ ರೇಚಂಬಳ್ಳಿ, ಹೊಂಗನೂರು, ಬೂದಂಬಳ್ಳಿ, ಗೂಳೀಪುರ ಹಾಗೂ ಇನ್ನಿತರೆ ಗ್ರಾಮಗಳ ಭಕ್ತರು ಕೂಡಿಕೊಳ್ಳುತ್ತಾರೆ. ಪೂಜೆಯ ಸಂದರ್ಭದಲ್ಲಿ ಓಕಳಿ ಹಾಡುವುದು ವಿಶೇಷವಾಗಿದೆ. ಸಾಲುಕುಣಿತ, ದೀವಲಿಗೆ ಸೇವೆ ಹಾಗೂ ಕತ್ತಿ ಪವಾಡವನ್ನು ಕೋಟಂಬಳ್ಳಿ ಗ್ರಾಮಸ್ಥರು ಮಾಡುವುದು ವಿಶೇಷವಾಗಿದೆ. ಅದಲ್ಲದೇ ಜಾತ್ರಾ ಮಹೋತ್ಸವಕ್ಕೆ ಬರುವ ಸಾವಿರಾರು ಭಕ್ತರಿಗೆ ಮೂರನೇ ದಿನದಿಂದು ಪ್ರಸಾದದ ವ್ಯವಸ್ಥೆಯನ್ನು ಮಾಡುವುದು ಕೂಡ ಕೋಟಂಬಳ್ಳಿ ಗ್ರಾಮಸ್ಥರದ್ದೆ ಆಗಿರುತ್ತದೆ ಎಂಬುದು ಕೂಡ ವಿಶೇಷವಾಗಿದೆ. ಒಟ್ಟಾರೆಯಾಗಿ ಹಿರಿಯ ಹಬ್ಬ ಶ್ರೀಬೀರೇಶ್ವರ ಸ್ವಾಮಿಯ 12 ವರ್ಷಗಳಿಗೊಮ್ಮೆ ನಡೆಯುವ ಜಾತ್ರೆಗೆ ವಿವಿಧ ಗ್ರಾಮಗಳ ಜನರು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಸುಮಾರು 12 ವರ್ಷಗಳಿಗೊಮ್ಮೆ ಶ್ರೀಬೀರೇಶ್ವರಸ್ವಾಮಿ ಜಾತ್ರಾಮಹೋತ್ಸವ ನಡೆಯುತ್ತದೆ ಎಂಬುದೇ ವಿಶೇಷವಾಗಿದೆ. ನಮ್ಮ ಕೋಟಂಬಳ್ಳಿ ಗ್ರಾಮಸ್ಥರು ಹೆಚ್ಚಿನದಾಗಿ ಪಾಲ್ಗೊಳ್ಳುತ್ತೇವೆ. 12 ವರ್ಷಗಳ ಹಿಂದೆ ನಾನು ಚಿಕ್ಕವನಾಗಿದ್ದಾಗ ಸಂಬಂಧಿಕರೊಂದಿಗೆ ಹೋಗಿ ಜಾತ್ರೆ ನೋಡಿರುವ ನೆನಪು. ಈಗ ನನಗೆ ವಿವಾಹವೂ ಆಗಿದ್ದು, ನನ್ನ ಕುಟುಂಬದೊಂದಿಗೆ ಜಾತ್ರೆಗೆ ಹೋಗುವ ಕಾತರದಲ್ಲಿದ್ದೇನೆ.-ಪ್ರಸಾದ್, ಕೋಟಂಬಳ್ಳಿ, ಚಾಮರಾಜನಗರ