

ಚಾಮರಾಜನಗರ:ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಆರೋಪಿಗೆ ಪೋಕ್ಸೋ ಕಾತದೆಯಡಿ 3 ವರ್ಷಗಳ ಶಿಕ್ಷೆ ವಿಧಿಸಿ ಮಕ್ಕಳ ಸ್ನೇಹಿ ಹಾಗೂ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಬುಧವಾರ ತೀರ್ಪು ನೀಡಿದ್ದಾರೆ.
ಕೊಳ್ಳೇಗಾಲ ಪಟ್ಟಣ ಭೀಮನಗರದ ಪಾಲ್‌ಚಾವಡಿ ಬೀದಿಯ ನಿವಾಸಿ ಕುಳ್ಳಯ್ಯ ಎಂಬುವವರ ಮಗನಾದ ಶಿವಕುಮಾರ್(32) 2 ವರ್ಷಗಳ ಹಿಂದೆ 13ವರ್ಷದ ಅಪ್ರಾಪ್ತ ಬಾಲಕಿಯನ್ನು ಮಾನಭಂಗ ಮಾಡುವ ಉದ್ದೇಶದಿಂದ, ಎಳೆದು ಹೋಗಿ ಲೈಂಗಿಕ ದೌರ್ಜನ್ಯವೆಸಗಿ ತೀವ್ರ ಸ್ವರೂಪದ ನೋವುಂಟು ಮಾಡಿದ್ದ. ಈ ವೇಳೆ ಬಾಲಕಿಯ ಪಾಲಕರನ್ನು ಬೈದು, ಕೊಲೆ ಬೆದರಿಕೆ ಹಾಕಿದ್ದ. ಇದಕ್ಕೆ ಸಂಬಂಧಿಸಿದಂತೆ ಕೊಳ್ಳೇಗಾಲ ಪಟ್ಟಣ ಪೋಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ, ತನಿಖೆ ಪೂರೈಸಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಎಸಗಿರುವ ಕೃತ್ಯವು ಸಾಬೀತಾಗಿದ್ದು, ಮಕ್ಕಳ ಸ್ನೇಹಿ ಹಾಗೂ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎ.ಸಿ.ನಿಶಾರಾಣಿ ಆರೋಪಿಗೆ ಶಿಕ್ಷೆ ಹಾಗೂ ದಂಡವನ್ನು ವಿಧಿಸಿ ತೀರ್ಪು ನೀಡಿದ್ದಾರೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ 2 ಲಕ್ಷ ರೂ. ಹಣವನ್ನು ನೊಂದ ಬಾಲಕಿಗೆ ಪರಿಹಾರ ರೂಪದಲ್ಲಿ ನೀಡಬೇಕೆಂದು ಆದೇಶ ನೀಡಲಾಗಿದೆ. ಸರ್ಕಾರಿ ಅಭಿಯೋಜಕ ಕೆ.ಯೋಗೇಶ್ ಆರೋಪಿಯ ವಿರುದ್ಧ ವಿಚಾರಣೆ ನಡೆಸಿ ವಾದವನ್ನು ಮಂಡಿಸಿದ್ದರು.