ಚಾ.ನಗರ ಕ್ಷೇತ್ರಕ್ಕೆ ಬಿಜೆಪಿಯಿಂದ ಅಚ್ಚರಿಯ ಆಯ್ಕೆ

S.balaraj
Published on

ಚಾಮರಾಜನಗರ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಅಚ್ಚರಿಯ ಆಯ್ಕೆ ಎಂಬಂತೆ ಕೊಳ್ಳೇಗಾಲದ ಮಾಜಿ ಶಾಸಕ ಎಸ್.ಬಾಲರಾಜ್ ಅವರಿಗೆ ಟಿಕೆಟ್‌ದೊರಕಿದೆ.

ಚಾ.ನಗರ ಲೋಕಸಭಾ ಕ್ಷೇತ್ರ ಸದ್ಯಕ್ಕೆ ಬಿಜೆಪಿಯ ಹಿಡಿತದಲ್ಲಿದ್ದು, ಹಾಲಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರು ರಾಜಕೀಯ ನಿವೃತ್ತಿ ಘೋಷಣೆ ಮಾಡಿದ ನಂತರ ಬಿಜೆಪಿ ಪಕ್ಷದಲ್ಲಿ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇತ್ತು. ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅಳಿಯರಾದ ನಂಜನಗೂಡು ಕ್ಷೇತ್ರದ ಮಾಜಿ ಶಾಸಕ ಹರ್ಷವರ್ಧನ್, ಚುನಾವಣೆಗಾಗಿಯೇ ಸರ್ಕಾರಿ ವೈದ್ಯ ವೃತ್ತಿಗೆ ರಾಜೀನಾಮೆ ನೀಡಿ ಬಂದಿದ್ದ ಡಾ.ಮೋಹನ್‌ಕುಮಾರ್ ಪ್ರಬಲವಾಗಿ ಟಿಕೆಟ್ ಕೇಳುತ್ತಿದ್ದರು. ಅದಲ್ಲದೇ ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ, ಮಾಜಿ ಸಚಿವ ಕೋಟೆ ಶಿವಣ್ಣ, ನಿವೃತ್ತ ಐಎ್ಎಸ್ ಅಧಿಕಾರಿ ಆರ್.ರಾಜು, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಸಿ.ರಮೇಶ್, ಪುತ್ರ ಅರ್ಜುನ್ ರಮೇಶ್, ದಲಿತ ಮುಖಂಡ ವೆಂಕಟರಮಣಸ್ವಾಮಿ (ಪಾಪು) ಟಿಕೆಟ್‌ಗಾಗಿ ಅಲ್ಲಲ್ಲಿ ಸದ್ದು ಮಾಡುತ್ತಿದ್ದರು. ಬಿಜೆಪಿ ರಾಜ್ಯ ಉಪಾಧ್ಯಕ್ಷ , ಮಾಜಿ ಶಾಸಕ ಎನ್.ಮಹೇಶ್ ಹೆಸರೂ ರಾಜಕೀಯ ಪಡಸಾಲೆಯಲ್ಲಿ ಗೌಪ್ಯವಾಗಿ ಕೇಳಿಬರುತ್ತಿತ್ತು. ಆದರೆ ಎನ್.ಮಹೇಶ್ ಅವರು ಮಾಜಿ ಶಾಸಕ ಎಸ್.ಬಾಲರಾಜ್ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂಬುದು ಅವರ ಮಾತುಗಳಲ್ಲಿ ಖಚಿತವಾಗುತ್ತಿತ್ತು. ಈ ಮಧ್ಯೆ ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎನ್ನುವ ಕೂಗು ಕೇಳಿಬರುತ್ತಿತ್ತು. ಸಂಸದ ವಿ.ಶ್ರೀನಿವಾಸ್‌ಪ್ರಸಾದ್ ಅಳಿಯ ಡಾ.ಮೋಹನ್ ಅವರಿಗೆ ಟಿಕೆಟ್ ಸಿಕ್ಕಿಯೇ ಬಿಟ್ಟಿತ್ತು ಎಂಬುದು ಅವರ ಹಿಂಬಾಲಕರ ಮಾತಾಗಿತ್ತು. ಆದರೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಅಚ್ಚರಿಪಡುವಂತೆ ಕೊಳ್ಳೇಗಾಲದ ಮಾಜಿ ಶಾಸಕರಾಗಿದ್ದ ಎಸ್.ಬಾಲರಾಜ್ ಬಿಜೆಪಿ ಟಿಕೆಟ್ ದೊರಕಿದ್ದು, ಚಾಮರಾಜನಗರ ಲೋಕಸಭಾ ಅಖಾಡ ಈ ಮೂಲಕ ರಂಗೇರುವ ಸಾಧ್ಯತೆ ಇದೆ.

ಆಕಾಂಕ್ಷಿಗಳ ನಡೆ ಏನು?
ಚಾ.ನಗರ ಬಿಜೆಪಿ ಟಿಕೆಟ್ ನೀಡುವ ವಿಚಾರದಲ್ಲಿ ಸಂಸದ ವಿ.ಶ್ರೀನಿವಾಸಪ್ರಸಾದ್ ವ್ಯಕ್ತಪಡಿಸುವ ಅಭಿಪ್ರಾಯದ ಮೇಲೆ ಮುಂದಿನ ರಾಜಕೀಯ ಬೆಳವಣಿಗೆ ನಿರ್ಧಾರವಾಗುತ್ತದೆ ಎನ್ನುವ ಮಾತುಗಳು ಕೇಳಿಬರುತ್ತಿತ್ತು. ಆದರೆ ಇದಾವುದನ್ನು ಬಿಜೆಪಿ ಹೈಕಮಾಂಡ್ ಹಾಗೂ ರಾಷ್ಟ್ರೀಯ ಮತ್ತು ರಾಜ್ಯ ನಾಯಕರು ಪರಿಗಣಿಸಿಲ್ಲ ಎಂಬುದು ಕಂಡುಬರುತ್ತಿದೆ. ಸದ್ಯಕ್ಕೆ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರ ಅಭಿನಂದನಾ ಸಮಾರಂಭದಲ್ಲಿ ತೊಡಗಿಸಿಕೊಂಡಿರುವ ಅವರು ಹಾಗೂ ಅವರ ಅಳಿಯಂದಿರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಕಾದು ನೋಡಬೇಕಿದೆ. ಉಳಿದಂತೆ ಮತ್ತಷ್ಟು ಆಕಾಂಕ್ಷಿಗಳು ಪಕ್ಷದ ವಿರುದ್ಧ ಮುನಿಸು ಹೊರಹಾಕುತ್ತಾರೋ, ತಟಸ್ಥವಾಗಿ ಇರುತ್ತಾರೊ ಅಥವಾ ಪಕ್ಷಕ್ಕೆ ಬೆಂಬಲವಾಗಿ ನಿಲ್ಲುತ್ತಾರೋ ಎಂಬುದು ಖಚಿತವಾಗಬೇಕಿದೆ.

8 ಕ್ಷೇತ್ರವನ್ನು ಬಲ್ಲವರು:
ಮಾಜಿ ಶಾಸಕ ಎಸ್.ಬಾಲರಾಜ್ ಕೊಳ್ಳೇಗಾಲ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರೂ ಕೂಡ ಚಾ.ನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 8 ವಿಧಾನಸಭಾ ಕ್ಷೇತ್ರಗಳನ್ನು ಬಲ್ಲವರಾಗಿದ್ದಾರೆ. ಈ ಹಿಂದೆ ಸಂಸದರಾಗಿದ್ದ ದಿ.ಆರ್.ಧ್ರುನಾರಾಯಣ ಅವರ ತೆಗೆ ಬಾಲರಾಜ್ ನಿಕಟ ಸಂಪರ್ಕವನ್ನು ಹೊಂದಿದ್ದರು. ಅವರಂತೆ ಕ್ಷೇತ್ರದ ಆಳ-ಹಗಲವನ್ನು ಅರಿತುಕೊಂಡಿದ್ದರು.
ಪ್ರಸ್ತುತ ಅಯೋಧ್ಯೆ ಶ್ರೀರಾಮಮಂದಿರ, ಪ್ರಧಾನ ಮಂತ್ರಿ ನರೇಂದ್ರಮೋದಿ ಅಲೆ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮೇಲಿನ ಅಭಿಮಾನ, ಬಿ.ವೈ.ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ನೇತೃತ್ವವಹಿಸಿರುವ ಮೊದಲ ಚುನಾವಣೆ ಎಂಬ ಕಾರಣಗಳ ಜತೆಗೆ ವೈಯಕ್ತಿಕ ವರ್ಚಸ್ಸಿನ ಮೂಲಕವೂ ಎಸ್.ಬಾಲರಾಜ್ ಮತಗಳನ್ನು ಬಿಜೆಪಿ ಬುಟ್ಟಿಗೆ ಪಡೆಯಬಲ್ಲರು ಎಂದು ಹೇಳಲಾಗುತ್ತಿದೆ. ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಅವರ ಶಕ್ತಿಯೂ ಜತೆಗೂಡುವ ಸಾಧ್ಯತೆ ಇರುವುದರಿಂದ ಕಾಂಗ್ರೆಸ್ ಪಕ್ಷವನ್ನು ಸಮರ್ಥವಾಗಿ ಎದುರಿಸಬಲ್ಲ ಅಭ್ಯರ್ಥಿಗೆ ಬಿಜೆಪಿ ಮಣೆ ಹಾಕಿದೆಯೇ ಎಂಬ ಮಾತುಗಳು ಕೇಳಿಬರುತ್ತಿದೆ.

ರಾಜಕೀಯ ಇತಿಹಾಸ:
ಮಾಜಿ ಶಾಸಕ ಎಸ್.ಬಾಲರಾಜು ಅವರು 1991-92 ರಲ್ಲಿ ಹಿರಿಯ ರಾಜಕಾರಣಿ ಎಂ.ರಾಜಶೇಖರ್ ಮೂರ್ತಿ ಅವರ ಮಾಗದರ್ಶನದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರುವ ಮೂಲಕ ರಾಜಕೀಯ ಜೀವನ ಪ್ರಾರಂಭಿಸಿದರು. 1993ರಲ್ಲಿ ಟಿಎಪಿಸಿಎಂಎಸ್ ನಿರ್ದೇಶಕರಾಗಿ, 1997ರಲ್ಲಿ ಚಾಮರಾಜನಗರ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕವಾಗಿದ್ದರು. 1999ರಲ್ಲಿ ರಾಜಶೇಖರ್ ಮೂರ್ತಿ ಜತೆಗೆ ಬಿಜೆಪಿ ಸೇರ್ಪಡೆಗೊಂಡು ಕೊಳ್ಳೇಗಾಲ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ 5421 ಮತಗಳ ಅಂತರದಲ್ಲಿ ಪರಾಭವಗೊಂಡಿದ್ದರು. 2004ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕೊಳ್ಳೇಗಾಲ ಕ್ಷೇತ್ರದಲ್ಲಿ ಕಣಕ್ಕಿಳಿದು 3328 ಮತಗಳ ಅಂತರದ ಗೆಲುವು ಸಾಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರು. 2007ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಹಾಗೂ 2013ರಲ್ಲಿ ಕೆಜಿಪಿ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಿದ್ದರು. ನಂತರ, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ರಾಜ್ಯ ಪ್ರಧಾನ ಕಾರ್ಯದರ್ಶಿಯಾದರು. ಬಳಿಕ 2023ರಲ್ಲಿ ಬಿಜೆಪಿ ಸೇರ್ಪಡೆಗೊಂಡು ಕೊಳ್ಳೇಗಾಲ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎನ್.ಮಹೇಶ್ ಪರವಾಗಿ ಕೆಲಸ ಮಾಡಿದ್ದರು.

ಸಹಕಾರಿ ಕ್ಷೇತ್ರದಲ್ಲೂ ಸೇವೆ:
1993ರಲ್ಲಿ ಟಿಎಪಿಎಂಎಸ್ ನಿರ್ದೇಶಕರಾಗಿ ನೇಮಕ ವಾದರು. 1999ರಲ್ಲಿ ಭಾರತೀಯ ಸಹಕಾರ ಬ್ಯಾಂಕ್ ಚಾಮರಾಜನಗರ ಸ್ಥಾಪನೆ ನಿರ್ದೇಶಕರಾಗಿದರು. 2016ರಲ್ಲಿ ಪಿಎಸಿಸಿ ಬ್ಯಾಂಕ್ ನಿರ್ದೇಶಕರಾಗಿ, 2019 ರಲ್ಲಿ ಪಿಎಸಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 2020 ರಲ್ಲಿ ಯಳಂದೂರು ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ.

ಬಿಜೆಪಿ ವರಿಷ್ಠರು ಒಮ್ಮತದಿಂದ ತೀರ್ಮಾನ ಮಾಡಿ ಅಭ್ಯರ್ಥಿಯನ್ನು ಆಯ್ಕೆಮಾಡಿದ್ದಾರೆ. ನಮ್ಮ ಮುಂದಿರುವ ಆಯ್ಕೆ ಎಂದರೆ ಈಗ ಅವರ ಪರವಾಗಿ ಕೆಲಸಮಾಡಿ ಅವರನ್ನು ಗೆಲ್ಲಿಸುವುದು ನಮ್ಮೆಲ್ಲರ ಜವಬ್ದಾರಿಯಾಗಿದೆ. ಇದು ದೇಶದ ಮತ್ತು ಮೋದಿಯ ಚುನಾವಣೆಯಾಗಿದ್ದು, ಜನರು ಮೋದಿಯ ಪರವಾಗಿ ಇದ್ದಾರೆ. ಈ ಬಾರಿಯ ಚುನಾವಣೆಯಲ್ಲೂ ಅನುಕೂಲಕರವಾದ ವಾತಾವರಣ ಬಿಜೆಪಿಗೆ ಇದೆ.-ಸಿ.ಎಸ್.ನಿರಂಜನ್‌ಕುಮಾರ್, ಜಿಲ್ಲಾಧ್ಯಕ್ಷ, ಬಿಜೆಪಿ, ಚಾಮರಾಜನಗರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net