

ಚಾಮರಾಜನಗರ: ಮೈಸೂರು ಭಾಗದ ಯಾವುದೇ ವಿಚಾರಗಳನ್ನು ತಮ್ಮ ಸಾಹಿತ್ಯದ ಮೂಲಕ ಜನರಿಗೆ ತಿಳಿಸುವಲ್ಲಿ ಪ್ರೊ.ಮಲೆಯೂರು ಗುರುಸ್ವಾಮಿ ್ರೌಡಿಮೆ ಮೆರೆದಿದ್ದರು ಎಂದು ಅಂಕಣಕಾರ ಎಸ್.ಲಕ್ಷ್ಮೀನರಸಿಂಹ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಂಗಳವಾರ ಆಯೋಜಿಸಿದ್ದ ಸಾಹಿತಿ ದಿ.ಮಲೆಯೂರು ಗುರುಸ್ವಾಮಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಾಹಿತಿ ಮಲೆಯೂ ಗುರುಸ್ವಾಮಿ ಅವರು ಸಾಹಿತ್ಯವಲ್ಲದೇ ತಮ್ಮ ಹುಟ್ಟೂರು ಸಮೀಪದ ಕನಕಗಿರಿಯಲ್ಲಿ ನಡೆಯುತ್ತಿದ್ದ ಗಣಿಗಾರಿಕೆ ನಿಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ರಚನೆಯ ಮಹಾಯಾತ್ರಿಕ ,ಅಪ್ರತಿಮ ವೀರ, ಕಪಿಲೇ ಹರಿದಳು ಕಡಲಿಗೆ ಮುಂತಾದ ಕೃತಿಗಳು ಬಹುದೊಡ್ಡ ಹೆಸರನ್ನು ತಂದು ಕೊಟ್ಟಿದೆ. ಜಿಲ್ಲಾ ಕಸಾಪ ಅಧ್ಯಕ್ಷರಾಗಿ ಅಪಾರವಾದ ಸೇವೆ ಸಲ್ಲಿಸಿದ್ದಾರೆ ಎಂದರು.
ಕಸಾಪ ತಾಲೂಕು ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ ಮಾತನಾಡಿ, ಮಲೆಯೂರು ಜಿಲ್ಲೆಯ ನೆಲ, ಜಲ, ಭಾಷೆ ಮತ್ತು ಸಾಹಿತ್ಯ ವಿಷಯಗಳನ್ನು ಅಪಾರವಾಗಿ ಸಂಗ್ರಹಿಸಿದ್ದರು. ಯಾವುದೇ ಸಂದರ್ಭದಲ್ಲಿ ವಿಚಾರವನ್ನು ಮಂಡಿಸುವ ಮೂಲಕ ಸಭಿಕರನ್ನು ತಮ್ಮ ಮಾತಿನ ಮೂಲಕ ಗಮನ ಸೆಳೆಯುತ್ತಿದ್ದರು. ಮಗು ಎಂದೇ ಪ್ರಸಿದ್ಧರಾಗಿದ್ದ ಮಲೆಯೂರು ಗುರುಸ್ವಾಮಿ ಅವರ ಸಾಹಿತ್ಯ ಕೃತಿಗಳ ಮೂಲಕ ಮತ್ತು ಅವರ ಕನ್ನಡ ಕಟ್ಟುವಿಕೆಯ ಮೂಲಕ ಸದಾ ಜೀವಂತವಾಗಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ನಿರ್ದೇಶಕ ಕಹಳೆ ರವಿಚಂದ್ರಪ್ರಸಾದ್, ಶಿವಲಿಂಗಮೂರ್ತಿ, ವೀರಶೆಟ್ಟಿ, ಗೋವಿಂದರಾಜು ಇತರರು ಹಾಜರಿದ್ದರು.