

ಚಾಮರಾಜನಗರ: ನಗರಸಭೆಯಲ್ಲಿ ಇ-ಸ್ವತ್ತು ಮಾಡಿಕೊಡಲು ಲಂಚ ಸ್ವೀಕರಿಸುತ್ತಿದ್ದ ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ಮಂಗಳವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಎಂ.ನಾರಾಯಣ್ 20 ಸಾವಿರ ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ದ ಅಧಿಕಾರಿ. 2 ಸೈಟ್‌ಗಳನ್ನು ಏಕನಿವೇಶನ ಮಾಡಿಕೊಡಲು ನಾರಾಯಣ್ ಲಂಚದ ಬೇಡಿಕೆ ಇಟ್ಟಿರುವುದಾಗಿ ಭ್ರಮರಾಂಬ ಬಡಾವಣೆಯ ಮಾದೇಗೌಡ ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ನಗರಸಭೆ ಕಚೇರಿಗೆ ಮಂಗಳವಾರ ಮಧ್ಯಾಹ್ನ ಆಗಮಿಸಿ ಕಾರ್ಯಾಚರಣೆಗಿಳಿದ ಲೋಕಾಯುಕ್ತ ಪೊಲೀಸರು ದೂರುದಾರರಿಂದ ನಾರಾಯಣ್ ಲಂಚ ಸ್ವೀಕಾರ ಮಾಡುವಾಗ ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.