

ಹನೂರು: ಮಲೆಮಹದೇಶ್ವರ ಬೆಟ್ಟದಲ್ಲಿ ಸೋಮವಾರ ರಾತ್ರಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಕೊಂಡೋತ್ಸವ ವಿಜೃಂಭಣೆಯಿಂದ ನೆರವೇರಿತು. ಇದರೊಂದಿಗೆ 5 ದಿನಗಳ ಮಹಾಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ತೆರೆ ಬಿದ್ದಿತು.
ದೇಗುಲದ ರಾಜಗೋಪುರ ಮುಂಭಾಗದಲ್ಲಿ ಕೊಂಡವನ್ನು ನಿರ್ಮಿಸಿ ತಳಿರು-ತೋರಣಗಳಿಂದ ಸಿಂಗಾರ ಮಾಡಲಾಗಿತ್ತು. ರಾತ್ರಿ 8 ಗಂಟೆಯಲ್ಲಿ ಮಾದಪ್ಪನ ಸನ್ನಿಧಿಯಲ್ಲಿ ಬೇಡಗಂಪಣ ಅರ್ಚಕರಿಂದ ಸ್ವಾಮಿಗೆ ಸಂಕಲ್ಪಾದಿ ವಿಶೇಷ ಅಭಿಷೇಕ ನೆರವೇರಿಸಿ, ಸಹಸ್ರನಾಮ ಬಿಲ್ವಾರ್ಚನೆ, ದೀವಟಿಗೆ ಸೇವೆ, ಧೂಪಧಾರತಿ ಹಾಗೂ ಮಹಾ ಮಂಗಳಾರತಿಯನ್ನು ಬೆಳಗಿಸಲಾಯಿತು. ಬಳಿಕ ಬೆಳಗ್ಗೆಯಿಂದಲೇ ಉಪವಾಸವಿದ್ದ 12 ಮಂದಿ ಬೇಡಗಂಪಣ ಅರ್ಚಕರು ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯದಲ್ಲಿ ದೇವರಿಗೆ ಪೂಜೆ ಸಲ್ಲಿಸಿದರು. ಬಳಿಕ ಮಂಗಳವಾದ್ಯ, ದೊಡ್ಡ ಸತ್ತಿಗೆ, ಚಿಕ್ಕ ಸತ್ತಿಗೆ, ಬೆಳ್ಳಿ ಸತ್ತಿಗೆ ಹಾಗೂ ದೀವಟಿಗೆ ಸೇವೆಯೊಂದಿಗೆ ದೇಗುಲದ ಸುತ್ತ ಪ್ರದಕ್ಷಿಣೆ ಹಾಕಲಾಯಿತು.
ದೇಗುಲದಲ್ಲಿ 3ನೇ ಅಭಿಷೇಕ, ಪೂಜೆಯ ಬಳಿಕ ಸತ್ತಿಗೆ, ಸೂರಿಪಾನಿ, ನಂದಿಕಂಬ, ಶಂಖ, ಜಾಗಟೆ ಹಾಗೂ ವಾದ್ಯಮೇಳದೊಂದಿಗೆ ಮೆರವಣಿಗೆಯ ಮೂಲಕ ತಂಬಡಗೇರಿಗೆ ತೆರಳಿದ ಅರ್ಚಕರು ಮಾದಪ್ಪನು ಊಟ ಸವಿದ ದುಂಡಮ್ಮನ ಮನೆಯಲ್ಲಿನ ಲಿಂಗ ಹಾಗೂ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಬಡಾವಣೆಯಲ್ಲಿ ಮೆರವಣಿಗೆ ನಡೆಸಲಾಯಿತು.
ಬಳಿಕ ಕೊಂಡದ ಬಳಿ ಆಗಮಿಸಿ ಅರ್ಚಕರು ಹಣೆಗೆ ವಿಭೂತಿ, ಕೈಯಲ್ಲಿ ಖಡ್ಗ ಹಿಡಿದು, ಹೊಟ್ಟೆಗೆ ವೀರಭದ್ರ ಸ್ವಾಮಿಯ ಬೆಳ್ಳಿಯ ಪಟ್ಟಿಯನ್ನು ಕಟ್ಟಿಕೊಂಡು ಕೊಂಡದ ಸುತ್ತ ಪ್ರದಕ್ಷಿಣೆ ಹಾಕಿ 8 ದಿಕ್ಕುಗಳಿಗೂ ಬಲಿ ಅನ್ನ ಸಮರ್ಪಿಸಿದರಲ್ಲದೆ, ಬೂದು ಕುಂಬಳಕಾಯಿ ಒಡೆದು ವೀರಾವೇಶದ ಕುಣಿದು, ಭಕ್ತಿ ಭಾವದಿಂದ ಕೊಂಡ ಹಾಯ್ದರು. ನಂತರ ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು, ಉಪ ಕಾರ್ಯದರ್ಶಿ ಚಂದ್ರಶೇಖರ್, ಬೇಡಗಂಪಣ ಅರ್ಚಕರು, ಪ್ರಾಧಿಕಾರದ ನೌಕರರು ಹಾಗೂ ದೇಗುಲದ ಸಿಬ್ಬಂದಿ ಇದ್ದರು.