ಮಾದಪ್ಪನ ಸನ್ನಿಧಿಯಲ್ಲಿ ಪ್ಲಾಸ್ಟಿಕ್ ರಾಶಿ

12 HANUR 1
Published on

ಹನೂರು: ಎಷ್ಟೇ ಜಾಗೃತಿ ಮೂಡಿಸಿದರೂ ಎಲ್ಲೆಂದರಲ್ಲಿ ಭಕ್ತರು ಪ್ಲಾಸ್ಟಿಕ್ ಬಿಸಾಡುವುದರ ಪರಿಣಾಮ ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಲೆಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ಟನ್‌ಗಟ್ಟಲೇ ಪ್ಲಾಸ್ಟಿಕ್ ತ್ಯಾಜ್ಯ ಬಿದ್ದಿದ್ದು, ತೆರವುಗೊಳಿಸುವುದು ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ಸವಾಲಿನ ಕೆಲಸವಾಗಿದೆ.

ಮ.ಬೆಟ್ಟಕ್ಕೆ ದೀಪಾವಳಿ, ಮಹಾ ಶಿವರಾತ್ರಿ, ಯುಗಾದಿ ಜಾತ್ರೆ ಸೇರಿದಂತೆ ಇನ್ನಿತರ ವಿಶೇಷ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಕಾಲ್ನಡಿಗೆ ಹಾಗೂ ವಾಹನಗಳ ಮೂಲಕ ಭೇಟಿ ನೀಡುತ್ತಾರೆ. ಈ ವೇಳೆ ಭಕ್ತರು ಏಕಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ಬಳಸುವುದರಿಂದ ಶ್ರೀ ಕ್ಷೇತ್ರದ ನೈರ್ಮಲ್ಯ ಹಾಳಾಗುತ್ತದೆ. ಜತೆಗೆ ಬೆಟ್ಟದ ತಪ್ಪಲು ಅರಣ್ಯ ಪ್ರದೇಶವಾದ್ದರಿಂದ ಪ್ಲಾಸ್ಟಿಕ್ ಬಳಕೆ ವನ್ಯಪ್ರಾಣಿಗಳ ಜೀವನಕ್ಕೆ ಕುತ್ತು ತರಲಿದೆ. ಈ ದಿಸೆಯಲ್ಲಿ ಈಗಾಗಲೇ ಮ.ಬೆಟ್ಟವನ್ನು ಪ್ಲಾಸ್ಟಿಕ್ ಮುಕ್ತ ವಲಯವಾಗಿ ಘೋಷಿಸಲಾಗಿದೆ. ಪ್ಲಾಸ್ಟಿಕ್ ವಸ್ತುಗಳನ್ನು ಬಳಸದಂತೆ ಪ್ರಾಧಿಕಾರ, ಅರಣ್ಯ ಇಲಾಖೆ ಹಾಗೂ ಸ್ವಯಂ ಸೇವಾ ಸಂಘಟನೆಗಳಿಂದ ಆಗಾಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ಭಕ್ತರು ಮಾತ್ರ ಬೆಟ್ಟ ಪ್ರದೇಶದಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಬಳಸುವುದನ್ನು ಬಿಟ್ಟಿಲ್ಲ. ಬಳಸಿದ ಏಕಬಳಕೆಯ ಪ್ಲಾಸ್ಟಿಕ್ ಅನ್ನು ಎಲ್ಲೆಂದರಲ್ಲಿ ಬಿಸಾಡುತ್ತಾರೆ. ಹೀಗಾಗಿ ಜಾತ್ರೆ ಹಾಗೂ ಇನ್ನಿತರ ವಿಶೇಷ ಸಂದರ್ಭಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯೇ ಪ್ರಾಧಿಕಾರಕ್ಕೆ ದೊಡ್ಡ ಕೆಲಸವಾಗಿದೆ. ಇದಕ್ಕೆ 5 ದಿನಗಳ ಕಾಲ ಬೆಟ್ಟದಲ್ಲಿ ನಡೆದ ಮಹಾ ಶಿವರಾತ್ರಿಯ ಜಾತ್ರಾ ವೇಳೆ ಅಲ್ಲಲ್ಲಿ ಬಿದ್ದಿರುವ ಪ್ಲಾಸ್ಟಿಕ್ ತ್ಯಾಜ್ಯ ರಾಶಿಯೇ ಸಾಕ್ಷಿ.

ಟನ್‌ಗಟ್ಟಲೇ ಕಸ:
ಮಹಾಶಿವರಾತ್ರಿ ಜಾತ್ರೆಗೆ ಬೆಂಗಳೂರು, ರಾಮನಗರ, ಕನಕಪುರ, ಚನ್ನಪಟ್ಟಣ, ಬಿಡದಿ, ಮೈಸೂರು, ಮಂಡ್ಯ ಇನ್ನಿತರ ಕಡೆಗಳಿಂದ ಲಕ್ಷಾಂತರ ಭಕ್ತರು ಕಾಲ್ನಡಿಗೆಯ ಮೂಲಕ ಆಗಮಿಸಿದ್ದರು. ಈ ವೇಳೆ ಭಕ್ತರು ಏಕಬಳಕೆಯ ಪ್ಲಾಸ್ಟಿಕ್ ತಟ್ಟೆ, ಲೋಟ, ನೀರಿನ ಬಾಟಲಿ, ಪ್ಲಾಸ್ಟಿಕ್ ಕೈಚೀಲ ಹಾಗೂ ಇನ್ನಿತರ ಪ್ಲಾಸ್ಟಿಕ್ ತ್ಯಾಜ್ಯವನ್ನು ಮಾರ್ಗದುದ್ದಕ್ಕೂ ಎಲ್ಲೆಂದರಲ್ಲಿ ಅದರಲ್ಲೂ ಹೆಚ್ಚಾಗಿ ತಾಳುಬೆಟ್ಟದಿಂದ ಮ.ಬೆಟ್ಟದವರೆಗೆ ಅಲ್ಲಲ್ಲಿ ಬಿಸಾಡಿದ್ದಾರೆ. ಇದರಿಂದ ಟನ್‌ಗಟ್ಟಲೇ ಪ್ಲಾಸ್ಟಿಕ್ ರಾಶಿ ಸಂಗ್ರಹವಾಗಿದ್ದು, ಅನೈರ್ಮಲ್ಯಕ್ಕೆ ಕಾರಣವಾಗಿದೆ. ಏಕ ಬಳಕೆ ಪ್ಲಾಸ್ಟಿಕ್ ಬಳಸದಂತೆ ಎಷ್ಟೇ ಅರಿವು ಮೂಡಿಸಿದರೂ ಭಕ್ತರು ಪಾಲಿಸದಿರುವುದು ಶ್ರೀ ಕ್ಷೇತ್ರದ ನೈರ್ಮಲ್ಯಕ್ಕೆ ಧಕ್ಕೆಯಾಗಲಿದೆ. ಜತೆಗೆ ವನ್ಯಪ್ರಾಣಿಗಳ ಜೀವಕ್ಕೂ ಕಂಟಕವಾಗಲಿದೆ. ಹಾಗಾಗಿ ಕ್ಷೇತ್ರಕ್ಕೆ ಬರುವ ಭಕ್ತರು ಇನ್ನಾದರೂ ಸ್ವಯಂಪ್ರೇರಿತವಾಗಿ ಏಕಬಳಕೆ ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕಿದೆ.

ರಾಶಿಗಟ್ಟಲೇ ಚಪ್ಪಲಿ:
ಮ.ಬೆಟ್ಟದಲ್ಲಿ ಭಕ್ತರು ಚಪ್ಪಲಿ ಬಿಡುವ ಸಲುವಾಗಿ ದೇಗುಲದ ಸಮೀಪದಲ್ಲೇ ಸ್ಥಳವನ್ನು ನಿಗದಿಪಡಿಸಲಾಗಿದೆ. ಆದರೆ ಬಹುತೇಕ ಭಕ್ತರು ದೇಗುಲದ ಆವರಣ ಹಾಗೂ ಇನ್ನಿತರ ಕಡೆಗಳಲ್ಲಿ ಬಿಟ್ಟು ತೆರಳುತ್ತಿರುವುದು ಒಂದೆಡೆಯಾದರೆ ಕಾಲ್ನಡಿಗೆಯಲ್ಲಿ ಆಗಮಿಸುವ ಭಕ್ತರು ಧರಿಸಿರುವ ಚಪ್ಪಲಿಯನ್ನು ಹೆಚ್ಚಾಗಿ ತಾಳುಬೆಟ್ಟದ ಬಳಿ ಬಿಟ್ಟು ಬರೀ ಕಾಲಿನಲ್ಲಿ ಮ.ಬೆಟ್ಟಕ್ಕೆ ತೆರಳುತ್ತಾರೆ. ಹಾಗಾಗಿ ಜಾತ್ರಾ ವೇಳೆ ರಾಶಿ ರಾಶಿ ಚಪ್ಪಲಿ ಬೀಳುತ್ತಲೇ ಇದ್ದು, ಅನೈರ್ಮಲ್ಯಕ್ಕೆ ಮತ್ತೊಂದು ಕಾರಣವಾಗುವುದರ ಜತೆಗೆ ಪ್ರಾಧಿಕಾರಕ್ಕೆ ಇದನ್ನು ತೆರೆವುಗೊಳಿಸುವುದೇ ಮತ್ತೊಂದು ಸವಾಲಿನ ಕೆಲಸವಾಗಿದೆ. ಭಕ್ತರು ಚಪ್ಪಲಿಗಳನ್ನು ಬಿಟ್ಟು ತೆರಳದಂತೆ ಅಧಿಕಾರಿಗಳು ಕ್ರಮ ವಹಿಸಬೇಕಿದೆ.

ತೆರವು ಅನಿವಾರ್ಯ:
ವಹಿಸಿ ತಾಳುಬೆಟ್ಟದಿಂದ ಮ.ಬೆಟ್ಟದವರೆಗಿನ ರಸ್ತೆ ಬದಿಯಲ್ಲಿ ಬಿದ್ದಿರುವ ಪ್ಲಾಸ್ಟಿಕ್ ತ್ಯಾಜ್ಯ ತೆರವುಗೊಳಿಸುವ ಕಾರ್ಯಕ್ಕೆ ಪ್ರಾಧಿಕಾರ ಮುಂದಾಗಿದ್ದು, ತಾಳುಬೆಟ್ಟದಲ್ಲಿ ರಾಶಿ ಹಾಕಲಾಗಿದೆ. ಆದರೆ ಮ.ಬೆಟ್ಟದಲ್ಲಿನ ಘನತ್ಯಾಜ್ಯ ಘಟಕಕ್ಕೆ ವಿಲೇವಾರಿ ಮಾಡಿಲ್ಲ. ಇದರಿಂದ ಜಾನುವಾರುಗಳು ಕಸದ ರಾಶಿ ಕೆದಕಿ ತ್ಯಾಜ್ಯ ತಿನ್ನುತ್ತಿದ್ದು, ಜೀವಕ್ಕೆ ಕಂಟಕವಾಗಿ ಪರಿಣಮಿಸಲಿದೆ.

ನೆಪಮಾತ್ರಕ್ಕೆ ಚೆಕ್‌ಪೋಸ್ಟ್:
ಮ.ಬೆಟ್ಟಕ್ಕೆ ತೆರಳುವ ಭಕ್ತರಲ್ಲಿ ಪ್ಲಾಸ್ಟಿಕ್ ಬಳಸದಂತೆ ಅರಿವು ಮೂಡಿಸುವ ಸಲುವಾಗಿ ವಡಕೆಹಳ್ಳದ ಬಳಿ ಅರಣ್ಯ ಇಲಾಖೆಯು ಪ್ರಾಧಿಕಾರದ ಸಹಕಾರದೊಂದಿಗೆ ಮಹಾಶಿವರಾತ್ರಿ ಆರಂಭಕ್ಕೂ ಮುನ್ನ ಚೆಕ್‌ಪೋಸ್ಟ್ ತೆರೆಯಲಾಗಿತ್ತು. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಚಾಲನೆ ನೀಡಿದ್ದರು. ಆರಂಭದ ಕೆಲದಿನ ಮಾತ್ರ ಇಲ್ಲಿಗೆ ಸಿಬ್ಬಂದಿ ನಿಯೋಜಿಸಲಾಗಿತ್ತು. ಆದರೆ ಜಾತ್ರಾ ವೇಳೆ ಯಾವುದೇ ಸಿಬ್ಬಂದಿಯನ್ನು ನಿಯೋಜಿಸಿರಲಿಲ್ಲ. ಹಾಗಾಗಿ ಚೆಕ್‌ಪೋಸ್ಟ್ ನೆಪಮಾತ್ರಕ್ಕಷ್ಟೇ ಎಂಬಂತಾಗಿದೆ.
ಕಡಿವಾಣ ಅಗತ್ಯ: ಕಾಲ್ನಡಿಗೆಯಲ್ಲಿ ಆಗಮಿಸುವ ಭಕ್ತರಿಗೆ ದಾನಿಗಳು ಮಾರ್ಗದ ಅಲ್ಲಲ್ಲಿ ಊಟ, ತಿಂಡಿ, ನೀರು, ಮಜ್ಜಿಗೆ, ಹಣ್ಣು ಹಾಗೂ ಇನ್ನಿತರ ಆಹಾರ ಪದಾರ್ಥಗಳನ್ನು ವಿತರಿಸುತ್ತಿರುವುದು ಭಕ್ತರ ಹಿತದೃಷ್ಟಿಯಿಂದ ಸ್ವಾಗತಾರ್ಹ. ಆದರೆ ಏಕಬಳಕೆ ಪ್ಲಾಸ್ಟಿಕ್ ವಸ್ತುಗಳನ್ನು ಬಳಕೆ ಮಾಡುತ್ತಿರುವುದು ವಿಪರ್ಯಾಸ. ಅಧಿಕಾರಿಗಳು ಗಮನಹರಿಸಿ ದಾನಿಗಳು ಏಕಬಳಕೆ ಪ್ಲಾಸ್ಟಿಕ್ ವಸ್ತುಗಳನ್ನು ಬಳಕೆ ಮಾಡದಂತೆ ಕಡಿವಾಣ ಹಾಕಬೇಕಿದೆ.

ಯೋಜನೆ ಅಗತ್ಯ:
ಮ.ಬೆಟ್ಟವನ್ನು ಪ್ಲಾಸ್ಟಿಕ್ ಮುಕ್ತ ಪ್ರದೇಶವಾಗಿ ಘೋಷಿಸಿದ್ದು, ಬಗ್ಗೆ ಹಲವು ವರ್ಷಗಳಿಂದಲೂ ಭಕ್ತರಲ್ಲಿ ಜಾಗೃತಿ ಮೂಡಿಸುತ್ತಿದ್ದರೂ ಹಾಗೂ ಅಧಿಕಾರಿಗಳು ಅಗತ್ಯ ಕ್ರಮ ವಹಿಸಿದರೂ ಪ್ಲಾಸ್ಟಿಕ್ ಬಳಕೆ ಮಾತ್ರ ನಿಂತಿಲ್ಲ. ಇದು ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಶ್ರೀ ಕ್ಷೇತ್ರದ ಪಾವಿತ್ರೃತೆಗೆ ಧಕ್ಕೆಯಾಗಲಿದೆ. ಆದ್ದರಿಂದ ಪ್ರಾಧಿಕಾರದ ಅಧಿಕಾರಿಗಳು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ವಹಿಸಿ ಅಗತ್ಯ ಯೋಜನೆ ರೂಪಿಸುವುದು ಅನಿವಾರ್ಯ.

ಎಷ್ಟೇ ಜಾಗೃತಿ ಮೂಡಿಸಿದರೂ ಭಕ್ತರು ಮಾತ್ರ ಏಕಬಳಕೆ ಪ್ಲಾಸ್ಟಿಕ್ ಬಳಕೆ ನಿಲ್ಲಿಸುತ್ತಿಲ್ಲ. ಜಾತ್ರೆ ಸಂದರ್ಭ ಎಲ್ಲೆಂದರಲ್ಲಿ ಬಿಸಾಡಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ತೆರವುಗೊಳಿಸಲಾಗುತ್ತಿದೆ. ತಾಳುಬೆಟ್ಟ ಹಾಗೂ ಮ.ಬೆಟ್ಟದಲ್ಲಿ ಸಂಗ್ರಹವಾಗಿರುವ ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಚಪ್ಪಲಿ ರಾಶಿಯನ್ನು ಶೀಘ್ರ ವಿಲೇವಾರಿ ಮಾಡಲಾಗುವುದು. ಭಕ್ತರು ಏಕಬಳಕೆಯ ಪ್ಲಾಸಿಕ್ ಬಳಸದೆ ಪ್ರಾಧಿಕಾರಕ್ಕೆ ಸಹಕಾರ ನೀಡಬೇಕು.-ಎ.ಈ ರಘುಕಾರ್ಯದರ್ಶಿ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮ.ಬೆಟ್ಟ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net