ಕಾಂಗ್ರೆಸ್ ಸರ್ಕಾರದಿಂದ ಶಿಕ್ಷಣಕ್ಕೆ ಆದ್ಯತೆ

12rajesh6
Published on

ಚಾಮರಾಜನಗರ: ಕಾಂಗ್ರೆಸ್ ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಎಂಎಸ್‌ಐಎಲ್ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.

ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಎಸ್‌ಟಿಪಿ, ಟಿಎಸ್‌ಪಿ ಯೋಜನೆ ಅನುದಾನದಲ್ಲಿ 1.12 ಕೋಟಿ ರೂ.ವೆಚ್ಚದಲ್ಲಿ ನೂತನ ಗ್ರಂಥಾಲಯ ಹಾಗೂ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ 68 ಲಕ್ಷ ರೂ.ವೆಚ್ಚದಲ್ಲಿ ಹೆಚ್ಚುವರಿ ನೂತನ ಕೊಠಡಿಗಳ ಅಭಿವೃದ್ದಿ ಕಾಮಗಾರಿಗಳಿಗೆ ಮಂಗಳವಾರ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಪ್ರಥಮದರ್ಜೆ ಕಾಲೇಜುಗಳು, ಎಂಜಿನಿಯರಿಂಗ್, ಪಾಲಿಟೆಕ್ನಿಕ್, ವೈದ್ಯಕೀಯ ಕಾಲೇಜು, ಕೃಷಿವಿಜ್ಞಾನ ಕಾಲೇಜು, ಕೇಂದ್ರಿಯ ವಿದ್ಯಾಲಯ, ಸರ್ಕಾರಿ ಆದರ್ಶ ವಿದ್ಯಾಲಯ, ಚಾಮರಾಜನಗರಕ್ಕೆ ಪ್ರತ್ಯೇಕ ವಿಶ್ವವಿದ್ಯಾನಿಲಯವನ್ನು ಸರ್ಕಾರ ಮಂಜೂರು ಮಾಡಿದೆ. ಜಿಲ್ಲೆಯಲ್ಲಿ ಶಾಲಾಕಾಲೇಜಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಲೇ ಬರಲಾಗಿದೆ. ಜಿಲ್ಲೆಯ ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಂಡು, ಉನ್ನತಶಿಕ್ಷಣಪಡೆದು, ಸಮಾಜದ ಉತ್ತಮಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದರು.

ನಗರಸಭೆ ಸದಸ್ಯ ಎಂ.ಮಹೇಶ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಅವಧಿಯಲ್ಲಿ ಸಮಯಪ್ರಜ್ಞೆ ರೂಡಿಸಿಕೊಳ್ಳಬೇಕು ಎಂದರು. ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯ ಶ್ರೀನಿಧಿ, ಸರ್ಕಾರಿ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲೆ ಚಂದ್ರಮ್ಮ, ಭೋಗಾಪುರ ವಸತಿಯುಕ್ತ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಪಿ.ದೇವರಾಜು, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲ ಲೋಕೇಶ್, ಕೆಎಚ್‌ಬಿ ಎಇಇ ಮಹೇಶ್, ಇಂಜಿನಿಯರ್ ಕುಸುಮ, ಉಪನ್ಯಾಸಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net