ಬಿಜೆಪಿಗರು ಅಸಮಾನತೆಯ ಪೋಷಕರು

12rajesh9
Published on

ಚಾಮರಾಜಗರ: ಕೇಂದ್ರ ಸಚಿವನಾಗಿದ್ದ ಅನಂತ್‌ಕುಮಾರ್ ಹೆಗಡೆ ನಮಗೆ ಬಹುಮತ ಸಿಕ್ಕರೆ ಸಂವಿಧಾನ ಬದಲಾಯಿಸುತ್ತೇವೆ ಎಂದಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸಂವಿಧಾನದ ಪರವಾಗಿರುವವರ ಕಡೆ ನಿಲ್ಲಿ. ನಮಗೆ ಶಕ್ತಿ ಕೊಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೋರಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಲಾನುಭವಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಅನ್ನಭಾಗ್ಯ ಯೋಜನೆಯ 5 ಕೆ.ಜಿ ಅಕ್ಕಿಯನ್ನು ಬಿಜೆಪಿಯವರು ಕೊಡಲಿಲ್ಲ. ಹೀಗಾಗಿ ಅಕ್ಕಿ ಬದಲು ಹಣ ಕೊಡುತ್ತಿದ್ದೇವೆ ಎಂದರು.

ನಮ್ಮ ಐದು ಗ್ಯಾರಂಟಿಗಳಿಗೆ ನಾಲ್ಕೂವರೆ ಕೋಟಿ ಜನರು ಫಲಾನುಭವಿಗಳಾಗಿದ್ದಾರೆ. ರಾಜ್ಯದ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 45 ಸಾವಿರದಿಂದ 50 ಸಾವಿರ ರೂಪಾಯಿ ಕೊಡುತ್ತಿದ್ದೇವೆ. ಇದನ್ನು ಬಿಜೆಪಿ ಯಾಕೆ ವಿರೋಧಿಸುತ್ತಿದೆ? ನಾಡಿನ ಜನರಿಗೆ ಸರ್ಕಾರದ ಸವಲತ್ತುಗಳು ಸಿಗಬಾರದಾ? ಎಂದು ಪ್ರಶ್ನಿಸಿದರು.
ಪ್ರಮಾಣ ವಚನ ಸ್ವೀಕರಿಸಿದ ದಿನದಿಂದಲೇ ಭರವಸೆಗಳನ್ನು ಈಡೇರಿಸಿದ್ದೇವೆ. ಎಂಟೇ ತಿಂಗಳಲ್ಲಿ ಐದೂ ಗ್ಯಾರಂಟಿ ಜಾರಿ ಮಾಡಿದ್ದೇವೆ. 36000 ಕೋಟಿ ರೂಪಾಯಿಗಳನ್ನು ವ್ಯಯ ಮಾಡಿ ಜನರ ಖಾತೆಗೆ ನೇರವಾಗಿ ಜಮೆ ಮಾಡಿದ್ದೇವೆ. 1.20 ಕೋಟಿ ಕುಟುಂಬಗಳ, 4.5 ಕೋಟಿ ಜನಕ್ಕೆ ಈ ವರ್ಷ 36000 ಕೋಟಿ ರೂ. ಕೊಟ್ಟಿದ್ದೇವೆ. ಮುಂದಿನ ವರ್ಷಕ್ಕೆ 59000 ಕೋಟಿ ರೂ.ಗಳನ್ನು ಗ್ಯಾರಂಟಿಗಳಿಗೆ ಕೊಟ್ಟಿದ್ದೇವೆ. ರಾಜ್ಯದ ಜನರ ಅಭಿವೃದ್ಧಿ ಕಾರ್ಯಗಳಿಗೆ ಒಂದು ಲಕ್ಷ ಇಪ್ಪತ್ತು ಕೋಟಿ ರೂಪಾಯಿಗಳನ್ನು ಬಜೆಟ್ ನಲ್ಲಿ ಘೋಷಿಸಿದ್ದೇವೆ ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ, ರೇಷ್ಮೆ, ಪಶುಸಂಗೋಪನೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಎಂಎಸ್‌ಐಎಲ್ ಅಧ್ಯಕ್ಷ ಮತ್ತು ಶಾಸಕ ಸಿ.ಪುಟ್ಟರಂಗಶೆಟ್ಟಿ, ಶಾಸಕರಾದ ಎಂ.ಆರ್.ಮಂಜುನಾಥ್, ಅನಿಲ್ ಚಿಕ್ಕಮಾದು, ಬಿ.ಸೋಮಶೇಖರ್, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ವಿಧಾನ ಪರಿಷತ್ತಿನ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಮರಿತಿಬ್ಬೇಗೌಡ, ರಾಜ್ಯ ಅನುಸೂಚಿತ ಜಾತಿ(ಎಸ್ಸಿ) ಅನುಸೂಚಿತ ಬುಡಕಟ್ಟು(ಎಸ್ಟಿ) ಆಯೋಗದ ಅಧ್ಯಕ್ಷ ಜಯಣ್ಣ ಮತ್ತು ಇತರರು ಹಾಜರಿದ್ದರು.

ಧ್ರುವ ಸಮಾಧಿಗೆ ನಮನ:
ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ದಿವಂಗತ ಆರ್.ಧ್ರುವನಾರಾಯಣ್ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದರು. ತಾಲೂಕಿನ ಹೆಗ್ಗವಾಡಿ ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿದ ಸಿಎಂ ಸಮಾಧಿಗೆ ನಮಸ್ಕಾರ ಸಲ್ಲಿಸಿದರು. ದರ್ಶನ್ ಧ್ರುವನಾರಾಯಣ್ ಇದ್ದರು.

ಎದ್ದು ನಿಂತ ಗೃಹಲಕ್ಷ್ಮೀಯರು:
ಸಮಾವೇಶದಿಂದ ಹೊರಡಲು ನಿಂತಿದ್ದ ಕೆಲವು ಮಹಿಳೆಯರನ್ನು ಸಿಎಂ ಸಿದ್ದರಾಮಯ್ಯ ಕುಳಿತುಕೊಳ್ಳಲು ತಾಕೀತು ಮಾಡಿದರು. ಚಾಮರಾಜನಗರ ಜಿಲ್ಲೆಯು ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ರಾಜ್ಯದಲ್ಲೇ 2ನೇ ಸ್ಥಾನದಲ್ಲಿದೆ ಎಂದು ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ ಮತ್ತು ಕೆ.ವೆಂಕಟೇಶ್ ಅಧಿಕಾರಿಗಳನ್ನು ಹೊಗಳಿದರು. ಇದೇ ಸಂದರ್ಭದಲ್ಲಿ ವೇದಿಕೆ ಮುಂದೆ ಐದಾರು ಜನ ಮಹಿಳೆಯರು ತಮ್ಮ ಆಧಾರ್ ಕಾರ್ಡ್ ಹಿಡಿದುಕೊಂಡು ನಮಗೆ ಗೃಹಲಕ್ಷ್ಮೀ ಹಣ ಬಂದಿಲ್ಲ ಎಂದು ಹೇಳುತ್ತಿದ್ದರು. ಇವರನ್ನು ಪೊಲೀಸರು ಸಮಾಧಾನ ಪಡಿಸಿ ಕೂರಿಸಿದರು. ಸಮಾವೇಶದಲ್ಲಿ 30 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.

ನನ್ನ ಕುರ್ಚಿ ಗಟ್ಟಿ
ಚಾಮರಾಜನಗರಕ್ಕೆ ಹೋದರೆ ಅಧಿಕಾರ ಹೋಗುತ್ತದೆ ಎನ್ನುವ ಮೂಡನಂಬಿಕೆ ಜಿಲ್ಲೆಯ ಜನರಿಗೆ ಮಾಡುವ ಅವಮಾನ. ನಾನು ಚಾಮರಾಜನಗರಕ್ಕೆ ಬಂದಷ್ಟೂ ನನ್ನ ಕುರ್ಚಿ ಗಟ್ಟಿ ಆಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net