

ಚಾಮರಾಜನಗರ: ಗ್ಯಾರಂಟಿ ಯೋಜನೆಗಳಿಂದಾಗಿ ಆರ್ಥಿಕ ಚಟುವಟಿಕೆ ಹೆಚ್ಚಾಗುತ್ತಿದೆ. ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಲಾನುಭವಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಬಿಜೆಪಿಯವರು ಖಜಾನೆ ಖಾಲಿಯಾಗಿದೆ ಎಂದು ಹೇಳುತ್ತಾರೆ. ನಾವು ರಾಜ್ಯದ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ಹಣ ಮೀಸಲು ಇಟ್ಟಿದ್ದೇವೆ. ಹೀಗಿದ್ದ ಮೇಲೆ ಹೇಗೆ ಖಜಾನೆ ಖಾಲಿಯಾಗಲು ಸಾಧ್ಯ ಎಂದು ತಿಳಿಸಿದರು.
ಕಳೆದ ಅವಧಿಯಲ್ಲಿ ನಾವು ಅಧಿಕಾರದಲ್ಲಿದ್ದಾಗ 165 ಭರವಸೆಗಳಲ್ಲಿ 158 ಅನ್ನು ಈಡೇರಿಸಲಾಯಿತು. ಇದಲ್ಲದೆ 25-30 ಹೊಸ ಕಾರ್ಯಕ್ರಮಗಳನ್ನು ರಾಜ್ಯಕ್ಕೆ ಕೊಟ್ಟೆವು. ಈ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪ್ರಮುಖವಾಗಿ 5 ಗ್ಯಾರಂಟಿ ಯೋಜನೆಗಳನ್ನು ನೀಡಿದೆವು. ಅಧಿಕಾರಕ್ಕೆ ಬಂದ ಕೂಡಲೇ ಇವುಗಳನ್ನು ಜಾರಿಗೊಳಿಸಿದ್ದೇವೆ ಎಂದರು.
ಬಿಜೆಪಿಯವರು ಮನುವಾದಿಗಳು. ಜಾತಿ ವ್ಯವಸ್ಥೆಯನ್ನು ಹುಟ್ಟುಹಾಕಿದವರೇ ಇವರು. ಕೇಂದ್ರ ಸಚಿವನಾಗಿದ್ದ ಅನಂತ್‌ಕುಮಾರ್ ಹೆಗಡೆ ಬಹುಮತ ಕೊಟ್ಟರೆ ಸಂವಿಧಾನ ಬದಲಾಯಿಸುತ್ತೇವೆ ಎನ್ನುತ್ತಾರೆ. ಅಸಮಾನತೆ ಹೋಗಲಾಡಿಸಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಮಹಿಳೆಯರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ರೈತರ ಸಬಲೀಕರಣವಾಗಬೇಕಾದರೆ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ನಿಮಗೆ ವಿರುದ್ಧವಿರುವ ಸಂವಿಧಾನ ಬದಲಾವಣೆ ಮಾಡುತ್ತೇನೆ ಎನ್ನುವ ಅಸಮಾನತೆಯನ್ನು ಪೋಷಿಸುವಂತವರು ಬಿಜೆಪಿಯವರು ಎಂದು ಆರೋಪಿಸಿದರು.
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸಂವಿಧಾನದ ಪರವಾಗಿರುವವರ ಪರವಾಗಿ ನಿಲ್ಲಬೇಕು. ನಾನು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆ. ನನಗೆ ಶಕ್ತಿಯನ್ನು ನೀಡಿ. ಮುಂಬರುವ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗೆ ಆಶೀರ್ವಾದ ಮಾಡಿ ಎಂದು ಕೋರಿದರು. ಸಮಾಜ ಕಲ್ಯಾಣ ಇಲಾಖೆ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಸಂವಿಧಾನ 134 ಕೋಟಿ ಜನರ ಹಕ್ಕು ರಕ್ಷಣೆ ಮಾಡುವ ಪ್ರಬಲ ಗ್ರಂಥ. ಬಿಜೆಪಿಯವರು ಸಂವಿಧಾನ ಬದಲಾವಣೆ ಮಾಡುತ್ತೇವೆ, ನಮಗೆ ಅಧಿಕಾರ ಕೊಡಿ ಎಂದು ಕೇಳುತ್ತಿದ್ದಾರೆ. ಸಂವಿಧಾನ ಇಲ್ಲದಿದ್ದರೆ ನಮ್ಮ ಗತಿ ಏನಾಗಲಿದೆ ಎಂದು ಪ್ರಶ್ನಿಸಿದರು.
ಗ್ಯಾರಂಟಿ ಯೋಜನೆಗಳನ್ನು ಟೀಕೆ ಮಾಡುತ್ತಿದ್ದ ರಾಜಕೀಯ ಪಕ್ಷಗಳು ನಮ್ಮನ್ನು ನಕಲು ಮಾಡುತ್ತಿವೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೋಮುವಾದಿಗಳ ಬುಡ ಅಲ್ಲಾಡಿಸುತ್ತಿದೆ. 5 ಗ್ಯಾರಂಟಿಗಳು ಯಶಸ್ವಿಯಾಗಿ ತಲುಪುವಂತೆ ಮಾಡಿರುವ ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಇದೇ ವೇಳೆ ಕುರುಬ ಸಮಾಜದ ಮುಖಂಡರು, ಪೌರಕಾರ್ಮಿಕರು ಸಿಎಂ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಿದರು. ಸಿಎಂ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಯ ಲಾನುಭವಿಗಳಾದ ಜಯಲಕ್ಷ್ಮೀ, ಶಬ್ರಿನ್‌ತಾಜ್, ಸುಮಾ, ವಿಶಾಲಾಕ್ಷಿ, ಲಕ್ಷ್ಮಮ್ಮ, ಚಿಕ್ಕಮ್ಮ, ಸುಜಾತಾ, ಪವನ್‌ಕುಮಾರ್, ಶಹನಾಜ್, ಲಕ್ಷ್ಮೀಗೆ ಸಾಂಕೇತಿಕವಾಗಿ ಚೆಕ್ ಮತ್ತು ಕಾರ್ಡ್ ವಿತರಣೆ ಮಾಡಲಾಯಿತು. ಶಾಸಕರಾದ ಎಂ.ಆರ್.ಮಂಜುನಾಥ್, ಅನಿಲ್ ಚಿಕ್ಕಮಾದು, ಬಿ.ಸೋಮಶೇಖರ್, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ವಿಧಾನ ಪರಿಷತ್ತಿನ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಮರಿತಿಬ್ಬೇಗೌಡ, ರಾಜ್ಯ ಅನುಸೂಚಿತ ಜಾತಿ(ಎಸ್ಸಿ) ಅನುಸೂಚಿತ ಬುಡಕಟ್ಟು(ಎಸ್ಟಿ) ಆಯೋಗದ ಅಧ್ಯಕ್ಷ ಜಯಣ್ಣ, ಮಾಜಿ ಶಾಸಕ ಆರ್.ನರೇಂದ್ರ, ಜಿ.ಎನ್.ನಂಜುಂಡಸ್ವಾಮಿ, ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷೆ ಪುಷ್ಪಾ ಅಮರ್‌ನಾಥ್, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ನಗರಸಭೆ ಸದಸ್ಯ ಚಂದ್ರಶೇಖರ್ ಮತ್ತು ಅಧಿಕಾರಿಗಳು ಹಾಜರಿದ್ದರು.
ನನ್ನ ಕುರ್ಚಿ ಭದ್ರವಾಗುತ್ತದೆ:
ಚಾಮರಾಜನಗರಕ್ಕೆ ಬಂದರೆ ಅಧಿಕಾರ ಕಳೆದುಕೊಳ್ಳುತ್ತೇವೆ ಎನ್ನುತ್ತಿದ್ದರು. ನಾನು ಇಲ್ಲಿಗೆ ಬಂದರೆ ನನ್ನ ಕುರ್ಚಿ ಭದ್ರವಾಗುತ್ತದೆ. ಇಲ್ಲೆಲ್ಲಾ ಬಸವಣ್ಣನವರನ್ನು ಗೌರವಿಸುವ ಜನರಿದ್ದಾರೆ. ಮೂಢನಂಬಿಕೆ ಆಚರಣೆ ಮಾಡಬೇಡಿ ಎಂದು ಬಸವಣ್ಣ ಹೇಳಿದ್ದರು. ಇದಕ್ಕಾಗಿಯೇ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ೋಷಣೆ ಮಾಡಿದ್ದೇನೆ. ಇದನ್ನು ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರು, ಬಸವರಾಜ ಬೊಮ್ಮಾಯಿ ಮಾಡಿದ್ದರಾ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.
ಅಧಿಕಾರಿಗಳ ಕಾರ್ಯಕ್ಕೆ ಶ್ಲಾಘನೆ:
ರೇಷ್ಮೆ, ಪಶುಸಂಗೋಪನೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಮಾತನಾಡಿ, ಗ್ಯಾರಂಟಿ ಯೋಜನೆಗಳು ರೈತರು, ಬಡವರು, ಅಲ್ಪಸಂಖ್ಯಾತರ ಪರವಾಗಿದೆ. ಈ ಯೋಜನೆಗಳ ಜಾರಿಯಲ್ಲಿ ಚಾಮರಾಜನಗರ ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಇದಕ್ಕೆ ಕಾರಣರಾಗಿರುವ ಎಲ್ಲ ಅಧಿಕಾರಿಗಳಿಗೂ ಅಭಿನಂದಿಸುತ್ತೇನೆ ಎಂದು ಶ್ಲಾಸಿದರು.
ವೇದಿಕೆ ತುಂಬೆಲ್ಲಾ ಆಕಾಂಕ್ಷಿಗಳೇ..
ಸಮಾವೇಶದ ವೇದಿಕೆಯಲ್ಲಿ ಚಾಮರಾಜನಗರ ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ನಿಂದ ಟಿಕೆಟ್ ಬಯಸುತ್ತಿರುವ ಆಕಾಂಕ್ಷಿಗಳಾದ ಸಚಿವ ಡಾ.ಎಚ್.ಸಿ.ಮಹದೇವಪ್ಪ ಪುತ್ರ ಸುನೀಲ್‌ಬೋಸ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಪುಷ್ಪಾ ಅಮರ್‌ನಾಥ್, ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ಬಿ.ಸೋಮಶೇಖರ್, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಮುಖಂಡ ಡಿ.ಎನ್.ನಟರಾಜು, ಎಸ್‌ಪಿಕೆ ಉಮೇಶ್ ಕುಳಿತಿದ್ದರು. ಇವರೊಂದಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ತೋಟೇಶ್, ಚಂದ್ರು ಮತ್ತು ಇತರರು ಇದ್ದರು. ಮತ್ತೋರ್ವ ಆಕಾಂಕ್ಷಿ ಮುಖಂಡ ಜೆ.ಸಿ.ಕಿರಣ್ ವೇದಿಕೆ ಮುಂದೆ ಮಾಧ್ಯಮದವರ ಸಾಲಿನಲ್ಲಿ ಹಿಂದೆ ಕುಳಿತಿದ್ದರು. ಕಾರ್ಯಕ್ರಮ ಶುರುವಾದ ಬಳಿಕ ಸುನೀಲ್‌ಬೋಸ್ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿಲ್ಲ.
ಬೇಡಿಕೆ ಮುಂದಿಟ್ಟ ಶೆಟ್ರು…
ಜಿಲ್ಲಾ ಕೇಂದ್ರಕ್ಕೆ 267 ಕೋಟಿ ರೂ. ಕುಡಿಯುವ ನೀರಿನ ವ್ಯವಸ್ಥೆ, ಬಸ್ ನಿಲ್ದಾಣ ಮಾಡಿಕೊಡಬೇಕೆಂದು ಎಂಎಸ್‌ಐಎಲ್ ಅಧ್ಯಕ್ಷ ಮತ್ತು ಶಾಸಕ ಸಿ.ಪುಟ್ಟರಂಗಶೆಟ್ಟಿ ಭಾಷಣದ ವೇಳೆ ಸಿಎಂ ಸಿದ್ದರಾಮಯ್ಯ ಬಳಿ ಮನವಿ ಮಾಡಿದರು. ಆದರೆ ಸಿಎಂ ಸಿದ್ದು ಭಾಷಣದ ವೇಳೆ ಇದಕ್ಕೆ ಪ್ರತಿಕ್ರಿಯ ನೀಡಲಿಲ್ಲ.
ಮಹಿಳೆಯರನ್ನು ಕೂರಿಸಿದ ಸಿಎಂ:
ಸಭೆ ಆರಂಭದಲ್ಲಿ ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಭಾಷಣ ಮಾಡುವ ವೇಳೆ ಸಭಿಕರ ಸಾಲಿನಲ್ಲಿದ್ದ ಮಹಿಳೆಯರು ಎದ್ದು ಹೊರಡಲು ಮುಂದಾದರು. ಇದನ್ನು ಗಮನಿಸಿದ ಸಿಎಂ ಸಿದ್ದರಾಮಯ್ಯ ಮೈಕ್ ಬಳಿಗೆ ಬಂದು ಯಾರೂ ಎದ್ದು ಹೋಗಬಾರದು. ಎಲ್ಲರೂ ಕುಳಿತುಕೊಳ್ಳಿ. ಸಭೆ ಮುಗಿಯುವವರೆಗೂ ಯಾರೂ ಹೋಗಕೂಡದು ಎಂದು ಹೇಳಿ ಕೂರಿಸಿದರು.
ಮಂಜುನಾಥ್ ನಮ್ಮೊಂದಿಗೆ ಇರ್ತಾರೆ..!
ಸಚಿವ ಡಾ.ಎಚ್.ಸಿ.ಮಹದೇಪ್ಪ ಭಾಷಣದ ವೇಳೆ ಹನೂರು ಒಂದು ಬಿಟ್ಟು ಉಳಿದ ಕಡೆ ಕಾಂಗ್ರೆಸ್ ಗೆದ್ದಿದೆ. ಇಲ್ಲಿಂದ ಬಂದಿರುವ ಎಂ.ಆರ್.ಮಂಜುನಾಥ್ ಮುಂದಿನ ದಿನಗಳಲ್ಲಿ ನಮ್ಮೊಂದಿಗೆ ಇರ್ತಾರೆ ಎಂದರು. ಇದಕ್ಕೆ ಶಾಸಕ ಎಂ.ಆರ್.ಮಂಜುನಾಥ್ ಕೈಮುಗಿದರು. ಕ್ಷೇತ್ರದ ಮಾಜಿ ಶಾಸಕ ಆರ್.ನರೇಂದ್ರ ವೇದಿಕೆಯಲ್ಲಿದ್ದರು. ಸಿಎಂ ಸಿದ್ದರಾಮಯ್ಯ ಮಾತನಾಡಿದ ವೇಳೆ ಜಿಲ್ಲೆಯ 4 ಕ್ಷೇತ್ರಗಳಲ್ಲಿ ಹನೂರಿನಲ್ಲಿ ಕಾರಣಾಂತರಗಳಿಂದ ಸೋತೆವು ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳೊಂದಿಗೆ ಅಭಿವೃದ್ಧಿಗೆ ಆದ್ಯತೆ ನೀಡಿದೆ. ಗುಂಡ್ಲುಪೇಟೆ ಕ್ಷೇತ್ರಕ್ಕೆ 100 ಕೋಟಿ ರೂ. ಅನುದಾನ ಸಿಕ್ಕಿದೆ. ಬರದ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಬಾರದು ಎಂದು ಸಿಎಂ ಸಿದ್ದರಾಮಯ್ಯ ಹಣ ಬಿಡುಗಡೆ ಮಾಡಿದ್ದಾರೆ.ಎಚ್.ಎಂ.ಗಣೇಶ್‌ಪ್ರಸಾದ್, ಶಾಸಕ, ಗುಂಡ್ಲುಪೇಟೆ ಜಾತಿ, ಧರ್ಮ, ಮೇಲು, ಕೀಳು ಎನ್ನದೆ ಜನಸಾಮಾನ್ಯರ ಸಬಲೀಕರಣವನ್ನು ಗ್ಯಾರಂಟಿ ಯೋಜನೆಗಳು ಮಾಡುತ್ತಿವೆ. ಗ್ಯಾರಂಟಿ ಯೋಜನೆಯನ್ನು ವಿರೋಧಿಸುವ ಬಿಜೆಪಿ ಮುಖಂಡರು ಈ ಯೋಜನೆಯನ್ನು ತಿರಸ್ಕರಿಸದೆ ಲಾನುಭವಿಗಳಾಗಿದ್ದಾರೆ.ಎ.ಆರ್.ಕೃಷ್ಣಮೂರ್ತಿ, ಶಾಸಕ, ಕೊಳ್ಳೇಗಾಲ