

ಚಾಮರಾಜನಗರ: ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ 6 ದಿನಗಳ ಕಾಲ ನಡೆದ ಮಹಾ ಶಿವರಾತ್ರಿ ಜಾತ್ರೆಯಲ್ಲಿ ಬರೋಬ್ಬರಿ 3 ಕೋಟಿಗೂ ಹೆಚ್ಚು ಆದಾಯ ಸಿಕ್ಕಿದೆ.
ಶ್ರೀಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ನೀಡಿರುವ ಮಾಹಿತಿ ಪ್ರಕಾರ ಮಾ.6ರಿಂದ 11ವರೆಗೆ ಒಟ್ಟು 3,24,17268 ರೂ. ಆದಾಯ ಹರಿದುಬಂದಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಲಕ್ಷಾಂತರ ಭಕ್ತರು ದೇವರಿಗೆ ವಿವಿಧ ಸೇವೆ ಸಲ್ಲಿಸಿದ್ದಾರೆ. ಸಾಮಾನ್ಯವಾಗಿ ಹುಂಡಿ ಹಣ ಎಣಿಕೆಯಲ್ಲಿ ಕೋಟಿ ರೂ.ಗೂ ಅಧಿಕ ಕಾಣಿಕೆ ಸಿಗುತ್ತಿದ್ದು, ಜಾತ್ರೆಯಲ್ಲಿ ಹುಂಡಿ ಕಾಣಿಕೆಯನ್ನು ಹೊರತು ಪಡಿಸಿ ಕೋಟ್ಯಾಂತರ ರೂಪಾಯಿ ಮಾದಪ್ಪನ ಜೋಳಿಗೆ ತುಂಬಿಕೊಂಡಿದೆ.
ಯಾವುದರಿಂದ ಎಷ್ಟು ಆದಾಯ ಬಂತು?: ಮಾ.6ರಿಂದ 11ವರೆಗೆ ಮಹಾಶಿವರಾತ್ರಿ ಹಬ್ಬದ ವಿಶೇಷ ಪೂಜೆ, ಪುನಸ್ಕಾರಗಳು ನಡೆದಿವೆ. ಇದರಲ್ಲಿ ಉತ್ಸವದಲ್ಲಿ 90,25,725 ರೂ., ಸೇವೆಗಳಿಂದ 8,61,200 ರೂ., ಮಿಶ್ರ ಪ್ರಸಾದ ಮಾರಾಟದಲ್ಲಿ 11,93,000 ರೂ., ಮಾಹಿತಿ ಕೇಂದ್ರ 7,48,900 ರೂ., ವಿಶೇಷ ಪ್ರವೇಶ ಶುಲ್ಕದಲ್ಲಿ 67,70,250 ರೂ., ಕಲ್ಲು ಸಕ್ಕರೆ ಮಾರಾಟದಲ್ಲಿ 1,05920 ರೂ., ತೀರ್ಥ ಪ್ರಸಾದದಲ್ಲಿ 2,52175 ರೂ., ಬ್ಯಾಗ್ 1,75965 ರೂ., ಪುದುವಟ್ಟು 4,60116 ರೂ., ಅಕ್ಕಿಸೇವೆಯಲ್ಲಿ 3,70900 ರೂ., ಗುತ್ತಿಗೆಯಲ್ಲಿ 10,52862 ರೂ., ಇತರೆ 77,380 ರೂ. ಆದಾಯ ಹರಿದುಬಂದಿದೆ.
ಅಧಿಕ ಆದಾಯ ತಂದುಕೊಟ್ಟ ಲಾಡು:
ಮಹಾ ಶಿವರಾತ್ರಿಯ ಹಬ್ಬದಲ್ಲಿ ಮಲೆ ಮಹದೇಶ್ವರ ಬೆಟ್ಟದ ಲಾಡು ಮಾರಾಟ 1 ಕೋಟಿ ರೂ.ಗಳಿಗೂ ಅಧಿಕ ಆದಾಯವನ್ನು ತಂದುಕೊಟ್ಟಿದೆ. ತಿರುಪತಿ ಲಾಡು ಪ್ರಸಿದ್ಧಿ ಪಡೆದಿರುವಂತೆಯೇ ಮಲೆ ಮಹದೇಶ್ವರ ಬೆಟ್ಟದ ದೇವಸ್ಥಾನದ ಲಾಡೂ ಸಹ ಪ್ರಸಿದ್ಧಿ ಪಡೆದುಕೊಂಡಿದೆ. ಈ ಕಾರಣಕ್ಕಾಗಿ 4 ಲಕ್ಷಕ್ಕೂ ಹೆಚ್ಚು ಲಾಡುಗಳನ್ನು ತಯಾರು ಮಾಡಲಾಗಿತ್ತು. ಲಾಡುಗಳನ್ನು ಭಕ್ತರು ಭರ್ಜರಿಯಾಗಿಯೇ ಖರೀದಿ ಮಾಡಿದ್ದಾರೆ. ಮಹಾ ಶಿವರಾತ್ರಿ ಹಬ್ಬದ ಆರಂಭಿಕ ದಿನವಾದ ಮಾ.6ರಂದು 18,59,875 ರೂ. ಮಾ.7ರಂದು 16,07,875 ರೂ., ಮಾ.8ರಂದು 23,28,975 ರೂ., ಮಾ.9ರಂದು 20,34,025 ರೂ., ಮಾ.10 22,73,550 ರೂ., ಮಾ.11ರಂದು 12,18,575 ರೂ. ಒಟ್ಟು 1,13,22,875 ರೂ. ಆದಾಯ ಸಿಕ್ಕಿದೆ.
ಸ್ಥಳೀಯರಿಗೆ ಭರ್ಜರಿ ವ್ಯಾಪಾರ:
ಮಹಾಶಿವರಾತ್ರಿ ಜಾತ್ರೆಯಿಂದ ಪ್ರಾಧಿಕಾರ, ಕೆಎಸ್‌ಆರ್‌ಟಿಸಿ ಮಾತ್ರವಲ್ಲದೇ ಸ್ಥಳೀಯ ವ್ಯಾಪಾರಿಗಳಿಗೂ ಆದಾಯ ತಂದುಕೊಟ್ಟಿವೆ. ತಾಳಬೆಟ್ಟದಲ್ಲಿರುವ ಅಂಗಡಿಗಳಲ್ಲಿ ವ್ಯಾಪಾರ ಜೋರಾಗಿತ್ತು. ರಾಜ್ಯ ಸರ್ಕಾರದ ಸೂಚನೆ ಮೇರೆಗೆ ನಾಗಮಲೆಗೆ ಹೋಗುವುದನ್ನು ಅರಣ್ಯ ಇಲಾಖೆ ನಿಷೇಧಿಸಿತ್ತು. ಜನರು ಚಾರಣಕ್ಕೆ ಹೋಗುವ ಜಾಗಗಳಲ್ಲಿ ಪ್ಲಾಸ್ಟಿಕ್ ಬಿಸಾಡುವುದರಿಂದ ಪರಿಸರ ಮತ್ತು ವನ್ಯಜೀವಿಗಳಿಗೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚಾರಣ ಪ್ರದೇಶಗಳಲ್ಲಿ ಆನ್‌ಲೈನ್ ಬುಕ್ಕಿಂಗ್ ಆರಂಭಿಸಲು ಪ್ರವೇಶ ನಿಷೇಧಿಸಿತ್ತು. ಇದರಿಂದಾಗಿ ನಾಗಮಲೆ ಸಂಚಾರವೂ ಬಂದಾಗಿತ್ತು. ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ನಾಗಮಲೆಗೆ ಭಕ್ತರು ತೆರಳು ಅವಕಾಶ ಸಿಕ್ಕಿದ್ದರಿಂದ ಈ ರಸ್ತೆಯಲ್ಲಿರುವ ಅಂಗಡಿಗಳಿಗೂ ವ್ಯಾಪಾರವಾಗಿದೆ. ದೇಗುಲದ ಸುತ್ತಮುತ್ತಲಿನ ಅಂಗಡಿ ಮಳಿಗೆಗಳಲ್ಲೂ ಭರ್ಜರಿ ವ್ಯಾಪಾರವಾಗಿದೆ.
ಹುಂಡಿ ಕಾಣಿಕೆಯನ್ನು ಹೊರತು ಪಡಿಸಿ ಬೇರೆ ವಿಭಾಗಗಳಿಂದ 3 ಕೋಟಿ ರೂ.ಗಳಿಗೂ ಅಧಿಕ ಆದಾಯ ಸಿಕ್ಕಿದೆ. ಕಳೆದ ವರ್ಷ ವಿವಿಧ ವಿಭಾಗಗಳಲ್ಲಿ 1.70 ಕೋಟಿ ರೂ. ಆದಾಯ ಹರಿದುಬಂದಿತ್ತು. ಈ ಸಲ 8 ಲಕ್ಷಕ್ಕೂ ಹೆಚ್ಚು ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಶಕ್ತಿ ಯೋಜನೆಯಿಂದಾಗಿ ಮಹಿಳಾ ಭಕ್ತರ ಸಂಖ್ಯೆ ಹೆಚ್ಚಾಗಿತ್ತು.ಎ.ಇ.ರಘು, ಕಾರ್ಯದರ್ಶಿ, ಶ್ರೀಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ